ಗಜೇಂದ್ರಗಡ: ಮಧುಮೇಹ, ಬಾಯಿ ದುರ್ಗಂಧ, ತೊದಲುವಿಕೆ, ಪಚನ ಕ್ರಿಯೆ ವೃದ್ಧಿ, ಗಂಟಲು ನೋವು ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ರಾಮಬಾಣವಾದ ನೇರಳೆ ಹಣ್ಣಿನ ಮಾರಾಟ ಜೋರಾಗಿ ನಡೆದಿದ್ದು, ನೇರಳೆ ರೈತರಿಗೆ ನೆರವಾಗಿದೆ.
ನೇರಳೆಗೆ ಯಾವುದೇ ರೋಗಬಾಧೆ ತಗುಲದು. ಜತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಹಣ್ಣು ಇದಾಗಿದೆ. ಹೀಗಾಗಿ ಕೊಳವೆಬಾವಿ ಆಶ್ರಿತ, ನೀರಾವರಿ ಅವಲಂಬಿತ ಬಹುತೇಕ ರೈತರು ತಮ್ಮ ತೋಟದ ಬದುವಿಗೆ ನೇರಳೆ ಬೆಳೆಯುತ್ತಾರೆ. ತಾಲೂಕಿನ ಗಜೇಂದ್ರಗಡ ಪಟ್ಟಣ ಹಾಗೂ ಸುತ್ತಲಿನ ಜವಳು (ಮಸಾರಿ)ಭೂಮಿಯಲ್ಲಿ ಬೆಳೆಯುವ ನೇರಳೆ ಹಲವಾರು ರೈತರ ಕೈ ಹಿಡಿದಿದೆ.
ಸದ್ಯ ನೇರಳೆಗೆ ಪಟ್ಟಣದ ಮಾರುಕಟ್ಟೆಯಲ್ಲಿ ಕೆಜಿ ಒಂದಕ್ಕೆ 140 ರಿಂದ 160ವರೆಗೆ ಇದ್ದು, ಹಣ್ಣಿನ ಗಾತ್ರದ ಆಧಾರದ ಮೇಲೆ ದರವಿದೆ. ಕೆಲವು ಕಡೆ ಸೇರುಗಳ ಮೂಲಕವೂ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿ ಬುಟ್ಟೆಯಲ್ಲಿಟ್ಟು ಮಾರುವವರು ಸೇರು, ಅಚ್ಚೇರು, ಚಟಾಕುಗಳ ಅಳತೆಯಲ್ಲಿ ಕೆಲವೊಮ್ಮೆ ಹಣದ ಬದಲಿಗೆ ಜೋಳ, ಗೋಧಿ, ಅಕ್ಕಿಗೂ ಮಾರಾಟ ಮಾಡುತ್ತಾರೆ.
ಹಲವಾರು ಮಹಿಳೆಯರು ನೇರಳೆ ಹಣ್ಣು ಬುಟ್ಟಿಯಲ್ಲಿ ತುಂಬಿಕೊಂಡು ಬಂದು ಪಟ್ಟಣದ ಜೋಡು ರಸ್ತೆ, ಮುಖ್ಯ ಮಾರುಕಟ್ಟೆ ಫುಟ್ಪಾತ್ ಮೇಲೆ ಕುಳಿತು ಉರಿ ಬಿಸಿಲನ್ನೂ ಲೆಕ್ಕಿಸದೇ ಮಾರಾಟ ಮಾಡಿ ಬಂದ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಾರೆ. ಗಜೇಂದ್ರಗಡ ಪಟ್ಟಣದ ವಿವಿಧೆಡೆ ಮಾರುಕಟ್ಟೆಯಲ್ಲಿ ಈಗ ನೇರಳೆ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ ಎನ್ನುತ್ತಾರೆ ನೇರಳೆ ಹಣ್ಣು ಮಾರುವ ದೇವವ್ವ ಗೌಡರ.
ನಿರ್ವಹಣೆಯ ವಿಧಾನ: ಒಂದು ಅಡಿ ಚೌಕಾಕಾರದ ತಗ್ಗು ಅಗೆದು, ಎಂಟು ಅಡಿ ಅಂತರದಲ್ಲಿ ಎಕರೆಗೆ 100 ಸಸಿ ನೆಡಬಹುದು. ಕೊಟ್ಟಿಗೆ, ಎರೆಹುಳು ಗೊಬ್ಬರ ಹಾಕಿ, ನೀರುಣಿಸಿ ಸಸಿ ಬೆಳೆಸಬೇಕು. ನಾಲ್ಕು ವರ್ಷಗಳ ಕಾಲ ಸಸಿಯನ್ನು ಪೋಷಿಸಿದರೆ ಹಣ್ಣು ಕೊಡಲು ಆರಂಭಿಸುತ್ತದೆ. ಪ್ರತಿ ವರ್ಷ ಗಿಡದ ಸುತ್ತ 500 ಗ್ರಾಂ ಯೂರಿಯಾ, 300 ಗ್ರಾಂ ಪೊಟ್ಯಾಸಿಯಂ ಗೊಬ್ಬರ ಹಾಕಿ ನೀರುಣಿಸಬೇಕು. ಇದಕ್ಕೆ ವಾರ್ಷಿಕ 1.20 ಲಕ್ಷ ಖರ್ಚಾಗುತ್ತದೆ. ಖರ್ಚಿನ ದುಪ್ಪಟ್ಟು ಹಣ ಸಂಪಾದನೆಯಾಗುತ್ತದೆ ಎನ್ನುವುದು ನೇರಳೆ ಹಣ್ಣು ಬೆಳೆಗಾರರ ಲೆಕ್ಕಾಚಾರ. ಸಾಮಾನ್ಯವಾಗಿ ನೇರಳೆ ಜನವರಿ, ಫೆಬ್ರುವರಿ ತಿಂಗಳಲ್ಲಿ ಹೂ ಬಿಟ್ಟು ಮಾರ್ಚ್ ತಿಂಗಳಲ್ಲಿ ಕಾಯಿ ಕಟ್ಟಿ ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣು ಹೇರಳವಾಗಿ ಸುರಿಯುತ್ತದೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಮರಕ್ಕೆ 20 ಕೆಜಿ ಉಪ್ಪು ಕಟ್ಟಿದರೆ ಹಣ್ಣುಗಳನ್ನು ಹೆಚ್ಚಿಗೆ ನೀಡುತ್ತದೆ. ಕಾಯಿ ಹಣ್ಣಾಗುವ ಕಾಲಕ್ಕೆ ನೀಲಿ-ಕೇಸರಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಗಿಡ ನಾಲ್ಕರಿಂದ ಐದು ವರ್ಷಕ್ಕೆ ಹಣ್ಣು ಬಿಡಲಾರಂಭಿಸಿ ಸುದೀರ್ಘ ಅರವತ್ತು ವರ್ಷಗಳವರೆಗೆ ಗುಣಮಟ್ಟದ ಹಣ್ಣು ಕೊಡುತ್ತದೆ.
•ಡಿ.ಜಿ ಮೋಮಿನ್