ರವಿಚಂದ್ರನ್ ಅವರ “ಬಕಾಸುರ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಸದ್ಯ ರವಿಚಂದ್ರನ್ ಅವರು ಕುದುರೆಮುಖದಲ್ಲಿ “ರಾಜೇಂದ್ರ ಪೊನ್ನಪ್ಪ’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆಯೇ “ಬಕಾಸುರ’ ಚಿತ್ರಕ್ಕೊಂದು ವಿಶೇಷವಾದ ಪ್ರಮೋಶನಲ್ ಸಾಂಗ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿನ ವಿಶೇಷವೆಂದರೆ ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ಗಳು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿವರಾಜಕುಮಾರ್, ಪುನೀತ್, ಸುದೀಪ್ ಸೇರಿದಂತೆ ಹಲವು ನಟರು “ಬಕಾಸುರ’ ಚಿತ್ರದ ಪ್ರಮೋಶನಲ್ ಸಾಂಗ್ನಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಸ್ಟಾರ್ಗಳು ಒಟ್ಟಾಗಲಿದ್ದಾರೆ. ಹಾಗಾದರೆ, ಇವರೆಲ್ಲರೂ ಒಟ್ಟಾಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರಾ, ಯಾವಾಗ ಚಿತ್ರೀಕರಣ ನಡೆಯುತ್ತದೆ ಎಂದು ನೀವು ಕೇಳಬಹುದು. ಖಂಡಿತಾ, ಚಿತ್ರೀಕರಣ ನಡೆಯಲ್ಲ, ಆದರೂ ಅವರು ಭಾಗವಹಿಸುತ್ತಾರೆ. ಅದು ಹಾಡೊಂದನ್ನು ಹಾಡುವ ಮೂಲಕ.
ಹೌದು, ಚಿತ್ರದಲ್ಲಿನ “ವಿ ಆಲ್ ಒನ್’ ಎಂಬ ಒಂದು ಹಾಡಿನ ತುಣುಕುಗಳನ್ನು ಸ್ಟಾರ್ ನಟರಲ್ಲಿ ಹಾಡಲಿದ್ದು, ಎಲ್ಲಾ ನಟರು ಹಾಡಿದ ಆ ವಿಡಿಯೋ ಇಟ್ಟುಕೊಂಡು ಒಂದು ಹಾಡು ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಪ್ರತಿ ಸ್ಟಾರ್ ಬಳಿ ಹೋಗಿ ಅವರು ಹಾಡುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ಬರಲಿದೆ ಚಿತ್ರತಂಡ. “ನಾವೆಲ್ಲರೂ ಒಂದೇ ಎಂಬರ್ಥದ ಈ ಹಾಡನ್ನು ಚಿತ್ರರಂಗದ ಪ್ರಮುಖ ನಟರಿಂದ ಹಾಡಿಸುವ ಪ್ರಯತ್ನವಿದು. ಈ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶವೂ ಸಿಕ್ಕಂತಾಗುತ್ತದೆ.
ಎಲ್ಲಾ ನಟರ ಬಳಿ ಹೋಗಿ ಈ ಹಾಡಿನ ಚಿತ್ರೀಕರಣ ಮಾಡುವ ಉದ್ದೇಶವಿದೆ’ ಎನ್ನುವುದು ನಿರ್ದೇಶಕ ನವನೀತ್ ಮಾತು. ನವನೀತ್ ಸದ್ಯ ಗೋವಾದಲ್ಲಿ “ಬಕಾಸುರ’ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ರೋಹಿತ್ ಹಾಗೂ ಕಾವ್ಯಾ ಚಿತ್ರದ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ. ಮಕರಂದ್ ದೇಶಪಾಂಡೆ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಶಶಿಕುಮಾರ್, “ಬಕಾಸುರ’ದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಆಗಸ್ಟ್ನಲ್ಲಿ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.