Advertisement

ಸಂತೆ ಸ್ಥಳಾಂತರಕ್ಕೆ ಪರ-ವಿರೋಧ ಅಭಿಪ್ರಾಯ

09:06 PM Dec 14, 2019 | Team Udayavani |

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡುವ ಪುರಸಭೆ ತೀರ್ಮಾನಕ್ಕೆ ಸಾರ್ವಜನಿಕರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ವ್ಯಾಪಾರಸ್ಥರುಗಳು ಸ್ಥಳಾಂತರ ಖಂಡಿಸಿ ಸೋಮವಾರ ಸಂತೆ ಬಹಿಷ್ಕರಿಸುವುದಾಗಿ ಕೆರೆ ನೀಡಿದ್ದಾರೆ.

Advertisement

ಹಲವಾರು ವರ್ಷಗಳಿಂದ ಪಟ್ಟಣದ ಬಿ.ಎಚ್‌.ರಸ್ತೆ, ತಾಲೂಕು ಕ್ರೀಡಾಂಗಣ ರಸ್ತೆ ಹಾಗೂ ತೀನಂಶ್ರೀ ಭವನ ಸುತ್ತ ಮುತ್ತ ನಡೆಯುತ್ತಿದ್ದ ವಾರದ ಸಂತೆಯನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಲ್ಲಿ ಡಿ.16 ಸೋಮವಾರದಿಂದ ಎಪಿಎಂಸಿ ಆವರಣದಲ್ಲಿ ಸಂತೆ ನಡೆಸಬೇಕು ಎಂದು ಪುರಸಭೆ ವ್ಯಾಪಾರಸ್ಥರಿಗೆ ತಿಳಿಸಿತ್ತು.

2017-18 ಸಾಲಿನ ಪುರಸಭೆ ಸದಸ್ಯರ ಹಾಗೂ ಶಾಸಕ ಜೆ.ಸಿ.ಮಾಧುಸ್ವಾಮಿ ಒಳಗೊಂಡ ಸಭೆಯಲ್ಲಿ ಸಂತೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಸಭೆ ತೀರ್ಮಾನದಂತೆ ಎಪಿಎಂಸಿ ಆವರಣಕ್ಕೆ ಸಂತೆ ಸ್ಥಳಾಂತರ ಮಾಡಬೇಕು ಎಂಬ ಅಧಿಸೂಚನೆ ಪುರಸಭೆ ತೆಗೆದುಕೊಂಡಿತ್ತು. ಅಂದೂ ಸ್ಥಳಾಂತರ ವಿರೋಧಿಸಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರಿಂದ ಸ್ಥಳಾಂತರವಾಗಿರಲಿಲ್ಲ. ಆದರೇ ಜಿಲ್ಲಾಧಿಕಾರಿ ಸಂತೆ ಸ್ಥಳಾಂತರಿಸಬೇಕು ಎಂದು ಆದೇಶ ನೀಡಿರುವುದು ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿದೆ.

ಭಿನ್ನಾಭಿಪ್ರಾಯ: ಕೆಲವರು ಸಂತೆ ಸ್ಥಳಾಂತರದ ಬಗ್ಗೆ ಸಹಮತ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಾರದ ಸಂತೆಯಿಂದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಬಿ.ಎಚ್‌ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎಪಿಎಂಸಿ ಆವರಣಕ್ಕೆ ಸಂತೆ ಸ್ಥಳಾಂತರವಾದರೆ ಗ್ರಾಹಕರಿಗೆ ಸಂತೆಗೆ ಹೋಗಿ ಬರಲು ದೂರವಾಗುತ್ತದೆ.

ಸಂತೆ ಸಾಮಗ್ರಿ ಕೊಂಡೊಯ್ಯಲು ಆಟೋ ಪ್ರಯಾಣ ಖರ್ಚು ಸೇರಿಕೊಳ್ಳುತ್ತದೆ ಎಂಬ ವಾದವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೂ ಪುರಸಭೆಯಿಂದ ಎಪಿಎಂಸಿ ಆವರಣ ಸಂತೆ ನಡೆಸಲು ಜೆಸಿಬಿಯಿಂದ ಸ್ವಚ್ಛಗೊಳಿಸಿದ್ದು, ಡಿ.16 ಸೋಮವಾರದ ಸಂತೆಯನ್ನು ಎಪಿಎಂಸಿಯಲ್ಲಿ ನಡೆಸಲು ಎಲ್ಲಾ ತಯಾರಿ ನಡೆಸಲಾಗಿದೆ. ಕೆಲ ವ್ಯಾಪಾರಿಗಳು ಎಪಿಎಂಸಿ ಆವರಣದಲ್ಲಿ ಜಾಗ ರಂಗೋಲಿ ಪುಡಿ ಹಾಗೂ ಕೆಲ ಚೀಲ ಹಾಕಿ ಗುರುತಿಸಿ ಮಾಡಿಕೊಂಡಿದ್ದಾರೆ.

Advertisement

ಡಿ.16ರಿಂದ ಪಟ್ಟಣದ ವಾರದ ಸಂತೆ ಎಪಿಎಂಸಿ ಆವರಣದಲ್ಲಿ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಇವರ ಆದೇಶದಂತೆ ಎಪಿಎಂಸಿ ಆವರಣ ಸ್ವಚ್ಛಗೊಳಿಸಿ ಸಂತೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸಂತೆಯಿಂದ ಬರುವ ಹಣ ಪುರಸಭೆ ನಿಧಿಗೆ ಸೇರುತ್ತದೆ.
-ರವಿಕುಮಾರ್‌, ಪುರಸಭೆ ಆರ್‌ಐ

ಪುರಸಭೆ ಸಭೆಯಲ್ಲಿ ಸಂತೆ ನಡೆಸಲು ಎಲ್ಲರಿಗೂ ಅನುಕೂಲವಾಗುವಂತೆ ಸರ್ಕಾರಿ ಜಾಗ ಗುರುತಿಸುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪುರಸಭೆ ಅಧಿಕಾರಿಗಳು ಸರ್ಕಾರಿ ಜಾಗ ಗುರುತಿಸುವಲ್ಲಿ ವಿಫ‌ಲರಾಗಿದ್ದರು. ಏಕಾಏಕಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡುತ್ತಿರುವುದು ಸೂಕ್ತವಲ್ಲ.
-ಸಿ.ಡಿ.ಚಂದ್ರಶೇಖರ್‌, ಪುರಸಭೆ ಮಾಜಿ ಅಧ್ಯಕ್ಷ

ಎಪಿಎಂಸಿ ಆವರಣದಲ್ಲಿ ಸಂತೆ ಮಾಡಲು ಹೊರಟಿರುವುದು ಖಂಡನೀಯ. ಸಂತೆ ಮಾಡಲು 3 ಕಿ.ಮೀ ಹೋಗಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಭಾನುವಾರ ಸಂತೆ ಮಾಡಲು ನಿರ್ಧರಿಸಬಹುದು. ಇದು ತೀನಂಶ್ರೀ ಭವನ ಸುತ್ತಮತ್ತ ಅಭಿವೃದ್ಧಿಪಡಿಸಲು ಮಾಡಿರುವ ಸಂಚು ಅಷ್ಟೇ.
-ಸಿ.ಬಿ.ರೇಣುಕಸ್ವಾಮಿ, ಕನ್ನಡ ಸಂಘ ಅಧ್ಯಕ್ಷ

ಸೋಮವಾರ ಸಂತೆ ಪ್ರಸ್ತುತ ಜಾಗದಿಂದ ಸ್ಥಳಾಂತರವಾಗಬೇಕು. ಆದರೇ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗಬಾರದು. ಸಿವಿಲ್‌ ಬಸ್‌ ನಿಲ್ದಾಣದ ಸಮೀಪದಲ್ಲಿರುವ ಕುರುಬರಹಳ್ಳಿ ಬಳಿ ಪುರಸಭೆಗೆ ಸಂಬಂಧಿಸಿದ ಜಾಗವಿದ್ದು, ಅಲ್ಲಿ ಸಂತೆ ಮಾಡಬೇಕು.
-ಮಂಜುನಾಥ್‌, ಆಟೋ ಚಾಲಕ

ಪ್ರಸ್ತುತ ಸ್ಥಳದಲ್ಲಿ ಸೋಮವಾರದಂದು ಸಂತೆ ನಡೆದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಶಾಲಾ ವಾಹನಗಳು ಓಡಾಡಲು ಜಾಗವಿರುವುದಿಲ್ಲ. ಈ ಜಾಗದಿಂದ ಸಂತೆ ಸ್ಥಳಾಂತರವಾದರೆ ಒಳ್ಳೆಯದು. ಆದರೆ ಸಾರ್ವಜನಿಕರಿಗೆ ಸಂತೆಗೆ ಹೋಗಲು ಹತ್ತಿರವಿದ್ದರೆ ಒಳ್ಳೆಯದು.
-ಮನೋಹರ್‌, ಕಾಲೇಜು ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next