Advertisement

ನೌಕರಿಗೆ ಲಂಚ ಕೋಡಲು ನಿರಾಕರಿಸಿದಾತ ಇಂದು ಪ್ರಗತಿಪರ ಕೃಷಿಕ

04:29 PM Sep 06, 2020 | Karthik A |

ಸತೀಶ್‌ ಸಿದ್ದಗೌಡರ್‌ 38 ವಯೋಮಾನದ ಈ ಪ್ರಗತಿಪರ ಯುವ ಕೃಷಿಕ ಮೂಲತಃ ಬೆಳಗಾವಿ ಜಿಲ್ಲೆ ಶಿರೂರು ಗ್ರಾಮದವರು.

Advertisement

ಈ ಭಾಗದಲ್ಲಿ ಇವರು ಹಾಗಲಕಾಯಿ ಸ್ಪೆಶಲಿಸ್ಟ್‌ ಎಂದೇ ಜನಜನಿತ. ಪ್ರತಿ ವರ್ಷ ಇವರು ತಮ್ಮ 1.5 ಎಕ್ರೆ ಹೊಲದಲ್ಲಿ 50 ಟನ್‌ ತರಕಾರಿ ಬೆಳೆಯುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ.

ಇವರು ಶಿಕ್ಷಕನಾಗುವ ಆಸೆ ಹೊತ್ತು 2008ರಲ್ಲಿ ಶಿಕ್ಷಣಶಾಸ್ತ್ರ ವಿಷಯದಲ್ಲಿ ಎಂ. ಎ ಪಡೆದರು. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದಾಗ ಶಿಕ್ಷಕ ವೃತ್ತಿಯೊಂದರ ಸಂದರ್ಶನಕ್ಕೆ ಹಾಜರಾಗುತ್ತಾರೆ. ತಿಂಗಳಿಗೆ 16 ಸಾವಿರ ಸಂಬಳ, ಆದರೆ 16 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ತಂದೆಯವರು ಲೋನ್‌ ಮಾಡಿ ಲಂಚ ನೀಡಲು ತಯಾರಾದಾಗ ಸತೀಶ್‌ ಕೆಲಸ ನಿರಾಕರಿಸಿ ಕೃಷಿತಯತ್ತ ಮುಖ ಮಾಡಿದರು. ಆದರೆ ತಂದೆಯಂತೆ ಸಾಂಪ್ರದಾಯಿಕ ಕೃಷಿಗೆ ಮಾತ್ರ ಸೀಮಿತವಾಗಿರದೆ ಹೊಸ ಆಲೋಚನೆಯ ಮೂಲಕ ವೈಜ್ಞಾನಿಕ, ಹೆಚ್ಚು ಇಳುವರಿ ಮತ್ತು ಆದಾಯ ತರುವಂತ ಕೃಷಿ ಮಾಡಿ ಇಂದು ಯಶಸ್ವಿಯಾಗಿದ್ದಾರೆ.

ನನ್ನ ತಂದೆ ಮತ್ತು ಚಿಕ್ಕಪ್ಪ ಕಳೆದ 50 ವರ್ಷದಿಂದಲೂ ತರಕಾರಿ ಕೃಷಿ ಮಾಡುತ್ತಿದ್ದಾರೆ. ಆದರೆ ಇಳುವರಿ ಮತ್ತು ಉತ್ತಮ ಗುಣಮಟ್ಟ ಇಲ್ಲದ ಕಾರಣ ಅವರಿಗೆ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ. ಅನಂತರ ನಾನು ಅವರೊಂದಿಗೆ ಸೇರಿ ಹೊರ ತಂತ್ರಜ್ಞಾನ ಅಳವಡಿಸಿದ್ದೇನೆ. ವ್ಯವಸ್ಥಿತವಾದ ಹನಿ ನೀರಾವರಿ, ನೆಲದ ತೇವಾಂಶ ಹೆಚ್ಚು ಸಮಯ ಉಳಿಯಲು ನೆಲ ಹಾಸು ಬಳಸುತ್ತಿದ್ದೇನೆ. ಈ ತಂತ್ರಗಳನ್ನು ಪುಸ್ತಕ ಮತ್ತು ಇತರ ಕೃಷಿಕರಿಂದ ಕಲಿತು ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಸತೀಶ್‌.

ಕೃಷಿಯೊಂದಿಗೆ ಮಾರುಕಟ್ಟೆ ಬಗ್ಗೆಯೂ ತಿಳುವಳಿಕೆ
ಸತೀಶ್‌ ಅವರು ಕೇವಲ ಆಧುನಿಕ ಕೃಷಿಕನಾಗಿರದೇ ಮಾರುಕಟ್ಟೆಯ ಏರಿಳಿತಗಳನ್ನು ಬಲ್ಲವರೂ ಆಗಿದ್ದಾರೆ. ಹಾಗಲಕಾಯಿ ಶಿರೂರಿನಲ್ಲಿ ಕೆಲವೇ ಕೆಲವು ರೈತರು ಬೆಳೆಯುತ್ತಿದ್ದು, ಬಹು ಬೇಡಿಕೆಯ ತರಕಾರಿಗಳಲ್ಲೊಂದು. ಮಧುಮೇಹ, ಕೊಬ್ಬು ಕಡಿಮೆಯಾಗುವ ಹೀಗೆ ಬಹುಪಯೋಗಿ ಹಾಗಲಕಾಯಿಗೆ ಬೇಡಿಕೆ ಇರುವುದರಿಂದ ಇದನ್ನು ಆಯ್ದುಕೊಂಡು ಕೃಷಿಯಲ್ಲಿ ತೊಡಗಿದ್ದಾರೆ. ತಮ್ಮ 5 ಎಕ್ರೆ ಜಮೀನಿನಲ್ಲಿ ಮೊದಲಿಗೆ 0.25 ಎಕ್ರೆಯಲ್ಲಿ ಹಾಗಲ ಕಾಯಿ ಕೃಷಿ ಆರಂಭಿಸಿ ಇಂದು ಒಂದುವರೆ ಎಕ್ರೆಯಲ್ಲಿ ಬೆಳೆಯುತ್ತಿದ್ದಾರೆ. ಉಳಿದ 3.5 ಎಕ್ರೆಯಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಭೂಮಿಯನ್ನು ಹದಗೊಳಿಸಲು ಎರಡೂ ಮೂರು ಬಾರಿ ಉಳುಮೆ ಮಾಡಿ, ಅದರಲ್ಲಿ ಕಸ ಕಡ್ಡಿಗಳನ್ನೆಲ್ಲ ಸ್ವತ್ಛಮಾಡಲಾಗುತ್ತದೆ. ಅನಂತರ ನಿಯಮಿತ ಅಂತರದಲ್ಲಿ ಒಂದೆಡೆ‌ ಮೂರು ಹಾಗಲ ಬೀಜ ನೇಡಲಾಗುತ್ತದೆ ಮತ್ತು ಸರಿಯಾದ ಪ್ರಮಾಣದ ನೀರೋದಗಿಸಲು ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಇದು ನೀರನ್ನು ಸಮರ್ಪಕವಾಗಿ ಬಳಸಲು ಸಹಕಾರಿ. ಬೀಜ ಮೋಳೆತು ಬಳ್ಳಿಯಾದ ಅನಂತರ ಅದು ಹಬ್ಬಲು ಆಸರೆಯಾಗಿ ಬಿದಿರಿನ ಕೋಲು ನೇಡುತ್ತಾರೆ ಸತೀಶ್‌.

Advertisement

ಪ್ರತಿ ವರ್ಷ 50 ಟನ್‌ ಹಾಗಲಕಾಯಿ ಬೆಳೆಯ್ತುತ್ತಾರೆ
ಸತೀಶ್‌ ಅವರ ಜಮೀನಿನಲ್ಲಿ ವರ್ಷದಲ್ಲಿ ಒಟ್ಟು 30 ಬಾರಿ ಹಾಗಲಕಾಯಿ ಕಟಾವು ಮಾಡುತ್ತಾರೆ. ಪ್ರತಿ ಕಟಾವಿಗೆ 1.5ರಿಂದ 2 ಟನ್‌ ಇಳುವರಿ ಪಡೆಯುತ್ತಿದ್ದಾರೆ. ವರ್ಷದ ಕೊನೆಯಲ್ಲಿ 50 ಟನ್ ಪಡೆಯುತ್ತಾರಂತೆ. ಒಂದು ಟನ್‌ಗೆ 35 ಸಾವಿರ ರೂ.ಗಳಂತೆ ಬೆಲೆ ಇರುತ್ತದೆ. ಕೆಲವೊ‌ಮ್ಮೆ ಮಾರುಕಟ್ಟೆ ವಹಿವಾಟು ಚೆನ್ನಾಗಿದ್ದರೆ 48 ಸಾವಿರದ ವರೆಗೂ ಮಾರಟವಾದದ್ದಿದೆ. ಕಟಾವಿನ ಸಮಯದಲ್ಲಿ ಪ್ರತಿದಿನ 25 ಸಾವಿರ ಗಳಿಸುತ್ತೇನೆ ಇಷ್ಟು ಆದಾಯವನ್ನು ನಾನು ಬೇರೆ ಯಾವ ನೌಕರಿಯಿಂದಲೂ ಗಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಸತೀಶ್‌.

ಇಂದು ಸತೀಶ ಒಬ್ಬ ಯಶಸ್ವಿ ರೈತನಾಗಿರುವ ಹಿಂದೆ ಸಾಕಷ್ಟು ಪರಿಶ್ರಮವಿದೆ. ಹೆಚ್ಚಿನ ಇಳುವರಿ ಪಡೆಯಲು, ಬಳ್ಳಿಗಳು ಸದೃಢವಾಗಿ ಬೆಳೆಯಲು ಅನೇಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶಗಳ ಪ್ರಯೋಗವನ್ನು ಇವರು ಮಾಡಿದ್ದಾರೆ. ಬಳ್ಳಿಗಳಿಗೆ ಕೆಲವೊಮ್ಮೆ ಕೀಟಬಾಧೆ ಹೆಚ್ಚಾಗುತ್ತದೆ. ಸೂಕ್ಷ್ಮ ಶಿಲೀಂಧ್ರಗಳ ಕಾಟದಿಂದ ಎಲೆಯ ಮೇಲೆ ಬಿಳಿ ಮತ್ತು ಹಳದಿ ಕಲೆಗಳು ಉಂಟಾಗುತ್ತೆ. ಇದಕ್ಕೆ ಸಮರ್ಪಕವಾದ ಔಷಧಗಳನ್ನು ಬಳಸಬೇಕಾಗುತ್ತದೆ. ಇಲ್ಲವಾದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸತೀಶ್‌.

ಅಂದು ಲಂಚ ನೀಡದೆ ಕೃಷಿಗೆ ಮರಳಿ ತಮ್ಮ ವಿಭಿನ್ನ ಯೋಚನೆ ಮತ್ತು ಶ್ರಮದ ಮೂಲಕ ಸತೀಶ ಇಂದ ಪ್ರಗತಿಪರ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ತಮ್ಮ ಶ್ರದ್ಧೆ, ಪರಿಶ್ರಮದಿಂದ ದುಡಿಯುವ ಇವರು ಹಾಕುವ ಬಂಡವಾಳಕ್ಕಿಂತ ಹೆಚ್ಚು ಪಟ್ಟು ಆದಾಯ ಪಡೆಯುತ್ತಾರೆ. ಸ್ವಾವಲಂಬಿಯಾಗಿ ಬದುಕುತ್ತಿರುವ ಇವರು ಸುತ್ತಮುತ್ತ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂದು ನಗರದತ್ತ ವಲಸೆ ಹೋಗುವುದು ತರವಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎನ್ನುವಂತೆ ಕೃಷಿಯಲ್ಲಿ ಸಾಧಿಸಿದ್ದಾರೆ.

 ಶಿವಾನಂದ ಎಚ್‌., ಗದಗ 

 

Advertisement

Udayavani is now on Telegram. Click here to join our channel and stay updated with the latest news.

Next