ಮಂಗಳೂರು: ನಗರ ದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ತಾಯಿ -ಮಗನಿಗೆ ಬಸ್ ಢಿಕ್ಕಿಯಾಗಿ ತಾಯಿಯ ಎದುರೇ ಬಸ್ ಟೈರಿನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಬೆಂದೂರ್‌ವೆಲ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಬಾಲಕ ಹಾರ್ದಿಕ್ ಕುಮಾರ್ (11) ಮೃತಪಟ್ಟವನು. ತಾಯಿ ಸ್ವಾತಿ ಪ್ರಮೋದ್ (33) ಗಾಯಗೊಂಡಿದ್ದಾರೆ.
ತಾಯಿ -ಮಗ ಇಬ್ಬರೂ ಅಪರಾಹ್ನ 3ರ ವೇಳೆಗೆ ಸ್ಕೂಟಿಯಲ್ಲಿ ಕಂಕನಾಡಿ ಕಡೆಯಿಂದ ನಂತೂರು ಕಡೆಗೆ ಸಂಚರಿ ಸುತ್ತಿದ್ದರು. ಬೆಂದೂರುವೆಲ್ ಬಸ್ ತಂಗುದಾಣದಲ್ಲಿ ಬಸ್ ನಿಂತಿದ್ದ ಕಾರಣ ಮಹಿಳೆ ಸ್ಕೂಟಿಯನ್ನು ಬಲಕ್ಕೆ ತಿರುಗಿಸುವ ಯತ್ನದಲ್ಲಿದ್ದಾಗ ಹಿಂದಿ ನಿಂದ ಬಂದ ಖಾಸಗಿ ಸರ್ವಿಸ್ ಬಸ್ ಚಾಲಕನ ಅಜಾಗರೂಕತೆಯ ಚಾಲನೆ ಯಿಂದ ಸ್ಕೂಟಿಯ ಹ್ಯಾಂಡಲ್‌ಗೆ ತಾಗಿದೆ. ಸ್ಕೂಟಿ ರಸ್ತೆಗೆ ಬಿದ್ದಿದ್ದು, ಬಾಲಕ ಹಾರ್ದಿಕ್ ಬಲ ಭಾಗಕ್ಕೆ ಎಸೆಯಲ್ಪಟ್ಟ.
ಚಾಲಕ ಏಕಾಏಕಿ ಬಸ್ ಚಲಾಯಿಸಿ ಕೊಂಡು ಮುಂದೆ ಹೋದ ವೇಳೆ ರಸ್ತೆಗೆ ಬಿದ್ದಿದ್ದ ಬಾಲಕನ ಕಿಬ್ಬೊಟ್ಟೆ, ಕಾಲು, ತಲೆಯನ್ನು ಉಜ್ಜಿಕೊಂಡು ಟೈರ್ ಹೋಗಿದೆ. ತಾಯಿ ಹೆಲ್ಮೆಟ್ ಹಾಕಿದ್ದರೆ, ಮಗ ಕೂಡ ಸೈಕಲ್ ಹೆಲ್ಮೆಟ್ ಧರಿಸಿದ್ದ, ಆದರೆ ಅದು ಬಿದ್ದು ಹೋಗಿತ್ತು. ತೀವ್ರ ಗಾಯಗೊಂಡ ಬಾಲಕನ ಕಿವಿಯಿಂದ ರಕ್ತ ಬಂದಿದ್ದು, ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹಾರ್ದಿಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾರ್ದಿಕ್‌ನ ಉಪನಯನ ಕೆಲವು ತಿಂಗಳ ಹಿಂದೆಯಷ್ಟೇ ನಡೆದಿತ್ತು ಎಂದು ತಿಳಿದುಬಂದಿದೆ.
ಹಾರ್ದಿಕ್ ನಗರದ ಕೊಡಿಯಾಲ್‌ಬೈಲ್‌ನ ಖಾಸಗಿ ಪ್ರೌಢಶಾಲೆಯ ಐದನೇ ತರಗತಿ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದ. ತಾಯಿ ಸ್ವಾತಿ ಪ್ರಮೋದ್ ಅವರೂ ಶಿಕ್ಷಕಿ ಎಂದು ತಿಳಿದುಬಂದಿದೆ.
ಅಪಾಯಕಾರಿ ಜಂಕ್ಷನ್
ಬೆಂದೂರುವೆಲ್ ಜಂಕ್ಷನ್ ಅತ್ಯಧಿಕ ವಾಹನಗಳು ಸಂಚರಿಸುವ ಪ್ರದೇಶ ವಾಗಿದ್ದು, ಇಲ್ಲಿ ರಸ್ತೆಗಳು ಅಗಲ ಕಿರಿದಾಗಿ ಇರುವುದರಿಂದ ವಾಹನಗಳ ಧಾವಂತ ಅಧಿಕ. ವಾಹನಗಳಿಗೆ ಓವರ್‌ಟೇಕ್ ಮಾಡುವಷ್ಟು ರಸ್ತೆ ವಿಶಾಲ ಇಲ್ಲದಿರುವುದೂ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದರ ನಡುವೆ ವಾಹನ ಚಾಲಕರ ಅಜಾಗರೂಕತೆಯ ಚಾಲನೆ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಕಾಸರಗೋಡು, ಪುತ್ತೂರು, ಧರ್ಮಸ್ಥಳ ಕಡೆಗೆ ತೆರಳುವ, ಮಂಗಳಾದೇವಿ, ನಂತೂರು, ಹಂಪನ ಕಟ್ಟೆಗೆ ಹೋಗುವ ವಾಹನಗಳೂ ಇದೇ ಜಂಕ್ಷನ್ ಮೂಲಕ ಹೋಗುತ್ತವೆ. ಹಾಗಾಗಿ ಇಲ್ಲಿ ವಾಹನ ದಟ್ಟಣೆ ಜಾಸ್ತಿ.
ಶುಕ್ರವಾರದ ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ಬಸ್ ನಿಲ್ಲುವ ಜಾಗದಲ್ಲಿ ಯಾರೂ ಇಳಿಯುವವರಿಲ್ಲ ಎಂಬ ಕಾರಣಕ್ಕೆ ಎಡಕ್ಕೆ ಬಾರದೆ ನೇರವಾಗಿ ಅತೀ ವೇಗದಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರ್‌ಗೆ ಢಿಕ್ಕಿಯಾಗಿರುವುದು ಬಾಲಕನ ಜೀವಕ್ಕೆ ಎರವಾಗಿದೆ.