Advertisement

ರಾಜ್ಯ ವಿಧಾನಸಭೆ ಚುನಾವಣೆಯ ಫ‌ಲಿತಾಂಶ: BJP ವಿರೋಧಿ ಒಕ್ಕೂಟ ರಚನೆಗೆ ಮುನ್ನುಡಿ

11:24 PM May 19, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫ‌ಲಿತಾಂಶದಿಂದ ಬೀಗುತ್ತಿರುವ ಕಾಂಗ್ರೆಸ್‌ ಈ ಫ‌ಲಿತಾಂಶ ಮುಂದಿಟ್ಟುಕೊಂಡು ಬಿಜೆಪಿಗೆ ದೇಶವ್ಯಾಪಿ ಎಚ್ಚರಿಕೆಯ ಗಂಟೆ ಬಾರಿಸಲು ಕಾಂಗ್ರೆಸ್‌ ಸಜ್ಜಾಗುತ್ತಿದೆ.

Advertisement

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್‌ ಜನಸಾಗರದ ಮುಂದೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿ ವಿರೋಧಿ ಪಕ್ಷಗಳನ್ನು ಆಹ್ವಾನಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ಮುನ್ನುಡಿ ಬರೆಯಲು ಕಾಂಗ್ರೆಸ್‌ ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ.

ಕರ್ನಾಟಕದ ಫ‌ಲಿತಾಂಶವು ಬಿಜೆಪಿಗೆ ದೊಡ್ಡ ಆಘಾತ ನೀಡಿರುವುದು ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಚುನಾವಣ ತಂತ್ರಗಾರಿಕೆ ಹಾಗೂ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿರುವ ರಾಜ್ಯದ ಮತದಾರರಿಗೆ ಬಿಜೆಪಿ ವಿರೋಧಿ ಪಕ್ಷಗಳಿಂದ ಅಭೂತಪೂರ್ವ ಅಭಿನಂದನೆಗಳು ಸಲ್ಲಿಕೆಯಾಗಿವೆ. ಈ ರೀತಿಯ ತೀರ್ಪಿನ ಮೂಲಕ ರಾಜ್ಯದ ಮತದಾರರು ರಾಜಕೀಯ ಪ್ರೌಢಿಮೆ ಹಾಗೂ ಪ್ರಜ್ಞೆ ಮೆರೆದಿದ್ದಾರೆಂಬ ಶ್ಲಾಘನೆಗೂ ಒಳಗಾಗಿದ್ದಾರೆ.

ಹೀಗಾಗಿ ಈ ಫ‌ಲಿತಾಂಶ ಮುಂದಿಟ್ಟುಕೊಂಡು ಬಿಜೆಪಿಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರಮಟ್ಟದಲ್ಲಿರುವ ಬಿಜೆಪಿ ವಿರೋಧಿ ಪಕ್ಷಗಳಿಗೆ ಶನಿವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದು ಬಹುತೇಕ ಎಲ್ಲರೂ ಸಮ್ಮತಿಸಿದ್ದಾರೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರತುಪಡಿಸಿದರೆ ಇತರ 7 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಜತೆಗೆ ಎನ್‌ಸಿಪಿಯ ಶರದ್‌ ಪವಾರ್‌, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲ ಹಾಗೂ ಜೆಡಿಯು, ಸಿಪಿಐ, ಸಿಪಿಎಂ, ಮತ್ತಿತರ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ನೇತೃತ್ವದಲ್ಲಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ವೇದಿಕೆಯಾಗಿ ಈ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ನಡೆಸಿದೆ. ಹೀಗಾಗಿ ಬಿಜೆಪಿಗೆ ಕರ್ನಾಟಕದಿಂದಲೇ ದೊಡ್ಡ ಸಂದೇಶ ಕೊಡುವ ಪ್ರಯತ್ನ ಇದಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ.

ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿರುವ ನಾಯಕರು 
ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ, ಎಂ.ಕೆ.ಸ್ಟಾಲಿನ್‌ (ತಮಿಳುನಾಡು ಸಿಎಂ), ನಿತೀಶ್‌ ಕುಮಾರ್‌ (ಬಿಹಾರ ಸಿಎಂ), ಹೇಮಂತ್‌ ಸೊರೇನ್‌ (ಜಾರ್ಖಂಡ್‌ ಸಿಎಂ), ತೇಜಸ್ವಿ ಯಾದವ್‌ (ಬಿಹಾರ ಡಿಸಿಎಂ), ಶರದ್‌ ಪವಾರ್‌ (ಎನ್‌ಸಿಪಿ ಮುಖ್ಯಸ್ಥ).

Advertisement

ಉದ್ಧವ್‌ ಠಾಕ್ರೆ (ಮಹಾರಾಷ್ಟ್ರ ಮಾಜಿ ಸಿಎಂ), ಅಖೀಲೇಶ್‌ ಯಾದವ್‌ (ಉತ್ತರ ಪ್ರದೇಶ ಮಾಜಿ ಸಿಎಂ), ಫಾರೂಕ್‌ ಅಬ್ದುಲ್ಲ (ಜಮ್ಮು-ಕಾಶ್ಮೀರ ಮಾಜಿ ಸಿಎಂ), ಮೆಹಬೂಬ ಮುಫ್ತಿ (ಜಮ್ಮು-ಕಾಶ್ಮೀರ ಮಾಜಿ ಸಿಎಂ), ಸಿಪಿಎಂ ಮುಖಂಡರಾದ ಸೀತಾರಾಂ ಯೆಚೂರಿ, ಡಿ.ರಾಜಾ.

ಮಧ್ಯಪ್ರದೇಶ ಜೆಡಿಯು ಅಧ್ಯಕ್ಷ ಲಲ್ಲನ್‌ ಸಿಂಗ್‌, ಎಂಡಿಎಂಕೆ ಅಧ್ಯಕ್ಷ ವೈಕೋ, ಆರ್‌ಎಸ್‌ಪಿ ಮುಖ್ಯಸ್ಥ ಎನ್‌.ಕೆ. ಪ್ರೇಮಾನಂದನ್‌, ಸಿಪಿಐಎಂಎಲ್‌ ಮುಖಂಡ ದಿಪ್ನಾಕರ್‌ ಭಟ್ಟಾಚಾರ್ಯ, ವಿಸಿಕೆ ಮುಖ್ಯಸ್ಥ ತೋಲ್‌ ತಿರುಮಾವಲನ್‌. ಆರ್‌ಎಲ್‌ಡಿ ಅಧ್ಯಕ್ಷ ಜಯಂತ್‌ ಚೌಧರಿ, ಕೇರಳ ಕಾಂಗ್ರೆಸ್‌ ಮುಖ್ಯಸ್ಥ ಜೋಸೆ ಕೆ ಮಣಿ, ಐಯುಎಂಎಲ್‌ ಮುಖ್ಯಸ್ಥ ಸಾದಿಕ್‌ ಅಲಿ ಥಂಗಲ್‌ ಹಾಗೂ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಪರವಾಗಿ ಕಾಕೋಲಿ ಘೋಷ್‌ ಭಾಗವಹಿಸಲಿದ್ದಾರೆ.

2018ರಲ್ಲೂ ಗಣ್ಯರ ಭಾಗಿ
2018 ರಲ್ಲಿ ವಿಧಾನಸೌಧ ಮುಂಭಾಗ ಆಯೋಜಿಸದ್ದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ – ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌ ಸಹಿತ ಡಿಎಂಕೆ, ಎನ್‌ಸಿಪಿ, ಎಡಪಕ್ಷಗಳ ನಾಯಕರು ಆಗಮಿಸಿದ್ದರು. ಈ ಬಾರಿಯೂ ಬಿಜೆಪಿಯೇತರ ನಾಯಕರು ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೆ ಈ ಕಾರ್ಯಕ್ರಮದ ಮೂಲಕ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಸಂದೇಶ ರವಾನೆಗೆ ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next