Advertisement

ಸಚ್ಚಾರಿತ್ರ್ಯದ ರಾಜಕಾರಣಿ 

12:50 AM Jan 30, 2019 | Harsha Rao |

ಧೀಮಂತ ರಾಜಕಾರಣಿ, ಸಮಾಜವಾದಿ ಮತ್ತು ಕಾರ್ಮಿಕ ನಾಯಕ ಜಾರ್ಜ್‌ ಫೆರ್ನಾಂಡಿಸ್‌ರನ್ನು ದೇಶ ಕಳೆದುಕೊಂಡಿದೆ. ಹೋರಾಟಗಳ ಮೂಲಕವೇ  ಗುರುತಿಸಿಕೊಂಡು ರಕ್ಷಣಾ ಖಾತೆಯಂಥ  ಉನ್ನತ ಹೊಣೆಗಾರಿಕೆಯನ್ನು  ಸಮರ್ಥವಾಗಿ ನಿರ್ವಹಿಸಿದ್ದವರು. ತನ್ನ ನೇರ, ದಿಟ್ಟ  ನಡೆ-ನುಡಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ಅವರು, ರಾಜಕೀಯವಲ್ಲದೇ ಸಾಮಾಜಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಒತ್ತಿದ್ದರು. 

Advertisement

ಬಾಲ್ಯದ ದಿನಗಳನ್ನಷ್ಟೇ ಹುಟ್ಟೂರಲ್ಲಿ  ಕಳೆದು ಬಳಿಕ ಮುಂಬಯಿಯನ್ನು  ಕಾರ್ಯಕ್ಷೇತ್ರವಾಗಿ ಆಯ್ದುಕೊಂಡರು. ರೈಲ್ವೇ ಇಲಾಖೆಯಲ್ಲಿ  ಉದ್ಯೋಗಕ್ಕೆ  ಸೇರಿದ ಬಳಿಕ ಅಲ್ಲಿನ ಕಾರ್ಮಿಕರ ಸಮಸ್ಯೆಗಳು, ಮತ್ತವರ ಹಕ್ಕುಗಳಿಗಾಗಿ ಮುಂಚೂಣಿಯಲ್ಲಿ  ನಿಂತು ಹೋರಾಡಿದರು. ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣರಿಂದ ಪ್ರಭಾವಿತರಾಗಿದ್ದ  ಜಾರ್ಜ್‌, ಇವರನ್ನೇ  ತಮ್ಮ ಆದರ್ಶ ವ್ಯಕ್ತಿಗಳನ್ನಾಗಿಸಿಕೊಂಡು  ಸಮಾಜವಾದಿ ನಾಯಕರಾಗಿ ರೂಪುಗೊಂಡರು. 1967ರಲ್ಲಿ  ಚುನಾಕಣಾ ಕಣಕ್ಕೆ ಧುಮುಕಿ ಬಾಂಬೆ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಮುಂದೆ ಬಿಹಾರದ ಮುಜಾಫ‌ರ್‌ಪುರಕ್ಕೆ ಕ್ಷೇತ್ರವನ್ನು ಬದಲಿಸಿದರೂ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ವಿರೋಧಿಗಳಿಗೆ ಸಾಧ್ಯವಾಗಲಿಲ್ಲ. 1974ರಲ್ಲಿ  ರೈಲ್ವೇ ವಿರುದ್ಧ ನಡೆದ ಬೃಹತ್‌ ಪ್ರತಿಭಟನೆ ಜಾರ್ಜ್‌ ಫೆರ್ನಾಂಡಿಸ್‌ ಅವರನ್ನು ಮುನ್ನೆಲೆಗೆ ತಂದಿತು. 1975-77ರ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದರು. ಈ  ಹೋರಾಟ ಜಾರ್ಜ್‌  ಪಾಲಿಗಂತೂ  ರಾಜಕೀಯ ರಂಗದಲ್ಲಿ  ಅವಕಾಶಗಳ ಬಾಗಿಲನ್ನು ತೆರೆಯಿತು. ಜನತಾ ಪಕ್ಷ ಸರಕಾರದಲ್ಲಿ  ಕೈಗಾರಿಕಾ ಸಚಿವರಾಗಿ ಕೆಲ ವಿದೇಶಿ ಕಂಪೆನಿಗಳ ಬಾಗಿಲು ಮುಚ್ಚಿಸಿ ತಮ್ಮ ಸ್ಪಷ್ಟ ನಿಲುವನ್ನು ಪ್ರದರ್ಶಿಸಿದ್ದರು.

1989ರಲ್ಲಿ  ಅಧಿಕಾರಕ್ಕೆ ಬಂದಿದ್ದ  ವಿ.ಪಿ. ಸಿಂಗ್‌ ಸರಕಾರದಲ್ಲಿ  ರೈಲ್ವೇ ಸಚಿವರಾಗಿ  ಇಲಾಖೆಯಲ್ಲಿ  ಮಹತ್ತರ ಸುಧಾರಣೆಗಳನ್ನು ತಂದರು. ಮಂಗಳೂರು-ಮುಂಬಯಿ ನಡುವಣ ಕೊಂಕಣ ರೈಲ್ವೇಯ ರೂವಾರಿ ಇವರೇ ಎಂಬುದನ್ನು ಮರೆಯು ವಂತಿಲ್ಲ. ಕರಾವಳಿಯ ಆರ್ಥಿಕತೆಯ ಸುಧಾರಣೆಗೆ ಬಹಳ ಕೊಡುಗೆ ನೀಡಿದರು. ಸದಾ ಜಾತ್ಯತೀತ ನಿಲುವನ್ನು ಪ್ರತಿಪಾದಿಸುತ್ತಿದ್ದ  ಜಾರ್ಜ್‌, 90ರ ದಶಕದಲ್ಲಿ  ಬದಲಾದ ರಾಜಕೀಯ ಸನ್ನಿವೇಶದಲ್ಲಿ  ಬಿಜೆಪಿ ಜತೆಗೆ ಕೈಜೋಡಿಸಿದ್ದರು. ಅವರ ಈ ನಿರ್ಧಾರ ಇತರ ಪಕ್ಷಗಳೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಪ್ರೇರಣೆ ನೀಡಿತು. ಕೇಂದ್ರದಲ್ಲಿ  ಎನ್‌ಡಿಎ ಅಧಿಕಾರಕ್ಕೇರಿತು. 1999ರಲ್ಲಿ ವಾಜಪೇಯಿ ಸರಕಾರದಲ್ಲಿ ಜಾರ್ಜ್‌ ರಕ್ಷಣಾ ಸಚಿವರಾದರು. 1998ರಲ್ಲಿ  ನಡೆದ ಪೋಖಾÅಣ್‌ ಪರಮಾಣು ಪರೀಕ್ಷೆ, 1999ರ ಕಾರ್ಗಿಲ್‌ ಯುದ್ಧ ಈ ಅವಧಿಯಲ್ಲೇ ನಡೆದದ್ದು. ಇನ್ನು ಕಾರವಾರದ ಸೀಬರ್ಡ್‌ ನೌಕಾನೆಲೆ ಯೋಜನೆ ಜಾರ್ಜ್‌ರ ಕನಸಿನ ಕೂಸು. 

ರಕ್ಷಣಾ ಸಚಿವರಾಗಿದ್ದಾಗ 9 ಬಾರಿ ಸಿಯಾಚಿನ್‌ಗೆ  ಭೇಟಿ ನೀಡಿ ಗಡಿ ರಕ್ಷಣೆಯಲ್ಲಿ  ತೊಡಗಿದ್ದ ಯೋಧರಿಗೆ  ಧೈರ್ಯ ತುಂಬಿದ್ದರು.  ಐದು ದಶಕಗಳ ತಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ  ತಮ್ಮ ತಣ್ತೀ- ಸಿದ್ಧಾಂತಗಳಿಗೆ ಬದ್ಧರಾಗಿದ್ದರೂ ವಿವಾದಗಳೇನೂ ಬಿಟ್ಟಿರಲಿಲ್ಲ. “ಶವ ಪೆಟ್ಟಿಗೆ’ ಹಗರಣಕ್ಕೆ  ಸಂಬಂಧಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದವಾದರೂ  ಎಲ್ಲ ತನಿಖೆಗಳಲ್ಲಿ “ಕ್ಲೀನ್‌ಚಿಟ್‌’ ಲಭಿಸಿತ್ತು. ಆದರೆ  ದುರದೃಷ್ಟಕ್ಕೆ ಜಾರ್ಜ್‌ ಫೆರ್ನಾಂಡಿಸ್‌ “ಮರೆಗುಳಿ’ ರೋಗಕ್ಕೆ  ತುತ್ತಾದರು. ಇದು ಅವರನ್ನು ಇನ್ನಿಲ್ಲದಂತೆ ಕಾಡಿತು. ಬಹುಮುಖೀ ವ್ಯಕ್ತಿತ್ವಕ್ಕೆ  ಪರ್ಯಾಯ ಎಂದರೆ ಜಾರ್ಜ್‌. ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟದಲ್ಲಿ  ತೊಡಗಿಸಿಕೊಂಡು ಬಳಿಕ ಕಾರ್ಮಿಕ ಸಂಘಟನೆಗಳ ಮುಂದಾಳತ್ವವನ್ನು ವಹಿಸಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ  ಕೊಂಡೊಯ್ಯುತ್ತಿದ್ದ ರು. ಈ ಹೋರಾಟಗಳೇ ರಾಜಕೀಯ ರಂಗಕ್ಕೆ  ಧುಮುಕಲು ಸಹಾಯ ಮಾಡಿದವು. ತಮ್ಮ ನೇರ ನಡೆ-ನುಡಿಗಳಿಂದಾಗಿ ರಾಜಕೀಯದಲ್ಲೂ  ಎಲ್ಲರಿಗೂ  ಪ್ರೀತಿಪಾತ್ರರಾಗಿದ್ದ ಅವರು ಜಾತಿ, ಧರ್ಮ, ಪ್ರಾದೇಶಿಕ ಅಸ್ಮಿತೆಗಳನ್ನು  ಮೆಟ್ಟಿ ನಿಂತವರು.

ಸಮಾಜವಾದ, ಸಮತಾವಾದ ಇದೀಗ ರಾಜಕೀಯವಾಗಿ ಅಪ್ರಸ್ತುತ ಎಂಬ ವಾದಗಳ ನಡುವೆಯೇ ಜಾರ್ಜ್‌ , ಎಲ್ಲ  ಆರೋಪಗಳನ್ನು  ಮೆಟ್ಟಿ ನಿಂತು ತಮ್ಮ ಸರಳತೆ, ಸಜ್ಜನಿಕೆಗೆ ಹೆಸರಾದರು. ಪ್ರಚಾರದ ಮೇಲಾಟವೇ ಹೆಚ್ಚಾಗಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇವೆಲ್ಲದರಿಂದ ದೂರ ಉಳಿದು ತಮ್ಮಷ್ಟಕ್ಕೇ ಕಾರ್ಯ ತತ್ಪರರಾದರು. 

Advertisement

ಇವರಂಥ ಮತ್ತೋರ್ವ ನಾಯಕನನ್ನು ಈ ದಿನಗಳಲ್ಲಿ ಊಹಿಸುವುದೂ ಕಷ್ಟಸಾಧ್ಯ. ಸಚ್ಚಾರಿತ್ರ್ಯದ ರಾಜಕಾರಣಕ್ಕೆ ಜಾರ್ಜ್‌ ಉತ್ತಮ ಉದಾಹರಣೆ ಆಗಬಲ್ಲರು. 

Advertisement

Udayavani is now on Telegram. Click here to join our channel and stay updated with the latest news.

Next