Advertisement
ಕಾಡು ಪ್ರಾಣಿಗಳಿಂದ ಕೃಷಿ ರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ಬಂದೂಕು ಪರವಾನಿಗೆ ನೀಡಲಾಗುತ್ತಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವುದರಿಂದ ಬಂದೂಕು ಪರವಾನಿಗೆ ಹೊಂದಿರುವವರು, ಪರವಾನಿಗೆ ಬಯಸಿರುವವರ ಸಂಖ್ಯೆಯೂ ಹೆಚ್ಚು. ವಿವಿಧ ಕಾರಣಗಳಿಂದಾಗಿ ಆತ್ಮರಕ್ಷಣೆಗಾಗಿ ಬಂದೂಕು ಪರವಾನಿಗೆಗೂ ಬೇಡಿಕೆ ಇದೆ. ಈಗಾಗಲೇ ಪರವಾನಿಗೆ ಹೊಂದಿರುವವರಿಂದಲೂ ತರಬೇತಿಗೆ ಬೇಡಿಕೆ ಇದೆ. ಅಲ್ಲದೆ ಕಳೆದ ಒಂದು ವರ್ಷದಿಂದ ಪರವಾನಿಗೆಗೆ ತರಬೇತಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ತರಬೇತಿ ನೀಡುವ ಜವಾಬ್ದಾರಿ ಪೊಲೀಸರ ಮೇಲಿದ್ದು ಅವರು ಸಮರ್ಪಕ “ಫೈರಿಂಗ್ ರೇಂಜ್’ ಇಲ್ಲದೆ ಪರದಾಡುವಂತಾಗಿದೆ.
ತರಬೇತಿ ನಿರಂತರವಾಗಿ ಬೇಕಿರುವುದರಿಂದ ಶೂಟಿಂಗ್ ಅಕಾಡೆಮಿ ಇದ್ದರೆ ಸೂಕ್ತ. ಗೋವಾ, ಬೆಂಗಳೂರು, ಚೆನ್ನೈ ಮಾದರಿಯಲ್ಲಿ ಕರಾವಳಿಯಲ್ಲಿಯೂ ಶೂಟಿಂಗ್ ಅಕಾಡೆಮಿ ಆರಂಭಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಅಕಾಡೆಮಿ ಆರಂಭವಾದರೆ ಅಲ್ಲಿ ಬಂದೂಕು ತರಬೇತಿಯ ಜತೆಗೆ ಶೂಟಿಂಗ್ ಕ್ರೀಡಾಸಕ್ತರ ತರಬೇತಿಗೂ ಸಹಾಯಕವಾಗಲಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
Related Articles
ಹಲವು ವರ್ಷಗಳಿಂದಲೂ ಬಂದೂಕು ಪರವಾನಿಗೆ ಹೊಂದಿರುವ ಸಾವಿರಾರು ಮಂದಿ ಜಿಲ್ಲೆಯಲ್ಲಿ ಇದ್ದಾರೆ. ಕುಟುಂಬದ ಹಿರಿಯರಿಂದ ವರ್ಗಾವಣೆಯಾಗಿರುವ ಬಂದೂಕು ಪರವಾನಿಗೆಗಳೂ ಹೆಚ್ಚಿನ ಸಂಖೆಯಲ್ಲಿವೆ. ಆದರೆ ಅನೇಕ ಮಂದಿಗೆ ಸೂಕ್ತ ತರಬೇತಿ ಇಲ್ಲ. ಇದೇ ಕಾರಣದಿಂದ ಕೆಲವೆಡೆ ಅನಾಹುತಗಳು ಸಂಭವಿಸುತ್ತಿವೆ. ಅಕಾಡೆಮಿ ಇದ್ದರೆ ವ್ಯವಸ್ಥಿತ, ನಿರಂತರ ತರಬೇತಿ, ನಿಗಾ ಸಾಧ್ಯವಾಗಲಿದೆ ಎನ್ನುತ್ತಾರೆ ಬಂದೂಕು ತರಬೇತಿದಾರರು.
Advertisement
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ
14,000ಕ್ಕೂ ಅಧಿಕ ಪರವಾನಿಗೆದಾರರು!ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 1,500ಕ್ಕೂ ಅಧಿಕ, ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 10,000ಕ್ಕೂ ಅಧಿಕ ಹಾಗೂ ಉಡುಪಿ ಜಿಲ್ಲೆಯಲ್ಲಿ 3,000ಕ್ಕೂ ಅಧಿಕ ಮಂದಿ ಬಂದೂಕು ಪರವಾನಿಗೆ ಹೊಂದಿದ್ದಾರೆ.ಪ್ರಸ್ತುತ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 300ಕ್ಕೂ ಅಧಿಕ ಮಂದಿ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದು ವಿಲೇವಾರಿಗೆ ಬಾಕಿ ಇದೆ. ಸದ್ಯ ದ.ಕ. ಜಿಲ್ಲೆಯಲ್ಲಿ ಫೈರಿಂಗ್ ರೇಂಜ್ ಇಲ್ಲ. ಅಗತ್ಯ ಸಂದರ್ಭದಲ್ಲಿ ಕಾರ್ಕಳದ ಫೈರಿಂಗ್ ರೇಂಜ್ ಬಳಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸೂಕ್ತ ಸ್ಥಳಕ್ಕಾಗಿ ಗಮನ ಹರಿಸಲಾಗುತ್ತಿದೆ.
– ಹೃಷಿಕೇಶ್ ಸೋನಾವಣೆ,
ಎಸ್‌ಪಿ, ದ.ಕ. ಜಿಲ್ಲೆ -ಸಂತೋಷ್ ಬೊಳ್ಳೆಟ್ಟು