ಮುಳ್ಳೇರಿಯ: ಆದೂರು ಪೊಲೀಸ್ ಠಾಣೆಯ ಸೀನಿಯರ್ ಪೊಲೀಸ್ ಆಫೀಸರ್, ಪೆರ್ಲಡ್ಕ ಕರಿಪ್ಪಾಡಗಂ ನಿವಾಸಿ ಅಶೋಕನ್(47) ಅವರು ಆದೂರು ಪೊಲೀಸ್ ಠಾಣೆಯ ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ. 2005ನೇ ಸಾಲಿನ ಬ್ಯಾಚ್‌ನಲ್ಲಿ ಪೊಲೀಸ್ ಸೇವೆಗೆ ಅಶೋಕನ್ ಸೇರ್ಪಡೆಗೊಂಡಿದ್ದರು.
————————————
ಎಂ.ಡಿ.ಎಂ.ಎ. ಸಹಿತ ಯುವಕನ ಬಂಧನ
ಕಾಸರಗೋಡು: ಕೋಟೆಕಣಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಕಾಸರಗೋಡು ಪೊಲೀಸರು ಕ್ರಿಸ್ಟಲ್ ರೂಪದ 300 ಗ್ರಾಂ ಎಂ.ಡಿ.ಎಂ.ಎ. ವಶಪಡಿಸಿಕೊಂಡಿದ್ದು, ಈ ಸಂಬಂಧ ಕಾಸರಗೋಡು ನುಳ್ಳಿಪ್ಪಾಡಿ ಮೈಮೂನಾ ಕ್ವಾರ್ಟರ್ಸ್‌ನ ಮುಹಮ್ಮದ್ ಶಾನವಾಸ್(22)ನನ್ನು ಬಂಧಿಸಿದ್ದಾರೆ.
————————————–
ಬಾಲಕಿಗೆ ಕಿರುಕುಳ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಹೊಸದುರ್ಗ: ಅಪ್ರಾಪ್ತ ವಯಸ್ಕ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಸ್ಸಾಂ ಮಿಲನ್ ನಗರದ ಶೇಖರ್ ಚೌದರಿ ಯಾನೆ ರಾಮ್ ಪ್ರಸಾದ್ ಚೌದರಿ(42)ಯನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ಚಾಯೋತ್‌ನ ಪ್ಲೈವುಡ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನೀಲೇಶ್ವರ ಪೊಲೀಸರು ಬಂಧಿಸಿದ್ದರು. ಎರಡು ವರ್ಷಗಳ ಕಾಲ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದ ಈತ ಜಾಮೀನು ಪಡೆದು ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದನು. ನ್ಯಾಯಾಲಯ ಈತನ ವಿರುದ್ಧ ವಾರೆಂಟ್ ಹೊರಡಿಸಿತ್ತು.
————————————–
150 ಕಿಲೋ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಕ್ಕೆ
ಕಾಸರಗೋಡು: ಚೆರ್ಕಳದ ವಿವಿಧ ಅಂಗಡಿಗಳಿಂದ 150 ಕಿಲೋ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಿಲ್ಲಾ ಶುಚಿತ್ವ ಮಿಷನ್ ಎನ್‌ಫೋರ್ಸ್‌ಮೆಂಟ್ ಕಚೇರಿಯ ವಿಶೇಷ ಸ್ಕ್ವಾಡ್ ವಶಪಡಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಮಾಂಸದಂಗಡಿಯಿಂದ ಹಳಸಿದ ಮಾಂಸ ವಶಪಡಿಸಿದೆ.
————————————–
ಮಹಿಳೆಯ ಮಾನಭಂಗ: ಕೇಸು ದಾಖಲು
ಕುಂಬಳೆ: ಪತಿ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕುಬಣೂರು ನಿವಾಸಿಯಾದ 21ರ ಹರೆಯದ ಮಹಿಳೆಯ ಮಾನಭಂಗಗೈದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿ ಸಿದ್ದಿಕ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
————————————————-
ಹಲ್ಲೆ ಪ್ರಕರಣ: ಕೇಸು ದಾಖಲು
ಕುಂಬಳೆ: ಬೇಕೂರಿನ ಕೆ.ಎಂ. ಸಿದ್ದಿಕ್ (40) ಅವರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಅಬೂಬಕ್ಕರ್ ಸಿದ್ದಿಕ್, ಸಾಲಿ, ಸುಹೈಬ್, ಬಾತಿ, ಪಪ್ಪು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಮನೆ ಹಿತ್ತಿಲಿನಲ್ಲಿ ಬಚ್ಚಿಡಲಾಗಿದ್ದ ಗಾಂಜಾದ ಕಟ್ಟನ್ನು ನಾಶಗೊಳಿಸಿರುವುದಾಗಿ ಆರೋಪಿಸಿ ಹಲ್ಲೆ ಮಾಡಿದ್ದಾಗಿ ಗಾಯಾಳು ಹೇಳಿದ್ದಾರೆ.
————————————————-
ಅಕ್ರಮ ಕಡವು ನಾಶ
ಕುಂಬಳೆ: ಆರಿಕ್ಕಾಡಿ ಪಿ.ಕೆ. ನಗರದ ಅಕ್ರಮ ಮರಳು ಕಡವಿನಲ್ಲಿ ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದರು. ಕುಂಬಳೆ ಠಾಣೆ ವ್ಯಾಪ್ತಿಯಲ್ಲಿರುವ ಅನಧಿಕೃತ ಕಡವುಗಳಿಗಿರುವ ರಸ್ತೆಗಳನ್ನು ಬಹುತೇಕ ನಾಶಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
————————————————————————————————————–
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶಕ್ಕೆ
ಕಾಸರಗೋಡು: ಬಾಯಿಯೊಳಗೆ ಹಾಗೂ ಜ್ಯೂಸ್ ಬಾಟಲಿಯಲ್ಲಿ ಬಚ್ಚಿಟ್ಟು ವಿದೇಶದಿಂದ ಚಿನ್ನ ತಂದ ಇಬ್ಬರು ಕಾಸರಗೋಡು ನಿವಾಸಿಗಳನ್ನು ನೆಡುಂಬಾಶೆರಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು ನಿವಾಸಿಗಳಾದ ಅಬ್ದುಲ್ಲ ಮತ್ತು ಅಬೂಬಕ್ಕರ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಬ್ದುಲ್ಲನಿಂದ 6.44 ಲಕ್ಷ ರೂ. ಮೌಲ್ಯದ 126 ಗ್ರಾಂ ಚಿನ್ನ ಹಾಗೂ ಅಬೂಬಕ್ಕರ್‌ನಿಂದ 6.4 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ.
Advertisement