ಅಕಡೆಮಿಕ್ ವಲಯದ ಹೊರಗಿದ್ದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವವರಲ್ಲಿ ಎದ್ದು ಕಾಣುತ್ತಿರುವ ರಾಜೇಂದ್ರ ಪ್ರಸಾದ್ ಭರವಸೆಯ ಕವಿ. ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸುತ್ತಲಿನ ಪರಿಸರವನ್ನು, ಒಡನಾಡಿಗಳ ಬದುಕನ್ನು ಪ್ರಕೃತಿಯ ವೈಚಿತ್ರಗಳನ್ನು, ಬೆರಗಿನಿಂದ ನೋಡುತ್ತ ಆ ನೋಟಕ್ಕೆ ವಿಸ್ಮಯವನ್ನು, ಅನುಭೂತಿಯನ್ನು ತಾಳೆ ಹಾಕುತ್ತಾ, ಧ್ಯಾನಸ್ಥ ಚಿಂತನೆಯಿಂದ ಕವನ ಬರೆಯುವಿಕೆಯನ್ನು ರೂಢಿಸಿಕೊಂಡವರು. ಹೊಸ ರೀತಿ ಭಾಷಾಬಳಕೆ, ಪ್ರತಿಮಾ ನಿರ್ಮಾಣ, ಶಬ್ಧಚಿತ್ರಗಳ ಚಿತ್ರಣ ಮುಂತಾದವುಗಳ ಮೂಲಕ ಇವರ ಕವನಗಳು ಸೆಳೆಯುತ್ತವೆ. 2006ರಲ್ಲಿ ರಾಜೇಂದ್ರ ಅವರ ವಯಸ್ಸು ಹತ್ತೂಂಬತ್ತು ದಾಟಿರಲಿಲ್ಲ. ಮೊದಲ ಕವನ ಸಂಕಲನ ಭೂಮಿಗಂಧ ಪ್ರಕಟವಾಯಿತು. ಮುಂದಿನ 12 ವರ್ಷಗಳಲ್ಲಿ ಆರು ಮಹತ್ತರ ಕವನ ಸಂಕಲನಗಳು ಪ್ರಕಟಗೊಂಡಿದ್ದು ಕಾವ್ಯಾಸಕ್ತರ ಪ್ರಶಂಸೆಗೆ ಗುರಿಯಾಗಿವೆ. ಅಷ್ಟೇ ಅಲ್ಲ, ಅವರ ಕಾವ್ಯಶ್ರದ್ಧೆಯ ಬಗೆಗೂ ಕುತೂಹಲ ಮೂಡುತ್ತದೆ. ಈಗಾಗಲೇ ಬೇಂದ್ರೆ ಗ್ರಂಥ ಬಹುಮಾನ, ಟೋಟೋ ಪುರಸ್ಕಾರ, ಕಡೆಂಗೋಡ್ಲು ಕಾವ್ಯಪುರಸ್ಕಾರಗಳಿಂದ ಪುರಸ್ಕೃತರಾಗಿರುವ ಇವರಿಗೆ 2019ರ “ನರಹಳ್ಳಿ ಪ್ರಶಸ್ತಿ’ಯು ಸಂದಿದೆ.
ರಾಜೇಂದ್ರ ಪ್ರಸಾದ್ ಹೊಸ ತಲೆಮಾರಿನ ಕವಿ. ನವೋದಯ, ನವ್ಯ, ಬಂಡಾಯ, ದಲಿತ ಕಾವ್ಯಮಾರ್ಗದ ನಂತರ ಕನ್ನಡ ಕಾವ್ಯ ಹೊಸದಿಕ್ಕಿಗೆ ಹೊರಳುತ್ತಿದೆ. ಈ ಸ್ಥಿತಿಯಲ್ಲಿ ಪರಂಪರೆಯ ಅರಿವೂ ಇದ್ದು ಅದನ್ನು ಮೀರುವ ಹಂಬಲ ಉಳ್ಳಂತವರು ಮುಖ್ಯರಾಗುತ್ತಾರೆ. ಕನ್ನಡ ಕಾವ್ಯ ಸಂಪ್ರದಾಯದ ಹೆಜ್ಜೆಗುರುತುಗಳನ್ನು ಅರಿತಿರುವ ರಾಜೇಂದ್ರ ಪ್ರಸಾದ್ ಹೊಸಬಗೆಯ ವಿನ್ಯಾಸ, ಭಾಷೆ, ಲಯಗಾರಿಕೆ, ನುಡಿಗಟ್ಟು ಮತ್ತು ಆಶಯಗಳ ಮೂಲಕ ಕವನಗಳನ್ನು ರಚಿಸುತ್ತಿದ್ದಾರೆ. ಆಧುನಿಕ ಬದುಕಿನ ಎಳೆಯನ್ನು ಹಿಡಿದು, ಪರಂಪರೆಯ ಕೊಂಡಿಯನ್ನು ಜೋಡಿಸಿ ಬೆರಗನ್ನು ಸೃಷ್ಟಿಸುವ ಪರಿಯೇ ಇವರ ಕಾವ್ಯಕಟ್ಟುವ ಕಲೆಯಾಗಿದೆ. ಕವಿ ಪ್ಯಾಬ್ಲೊ ನೆರೋಡಾನ ಕವನಗಳಂತೆ ಇವರ ಕವನಗಳ ವಸ್ತುಗಳು ಹೆಚ್ಚಾಗಿ ದೈನಿಕದವೇ. ದೈನಿಕದಿಂದ ದಿವ್ಯತೆಗೆ ಜಿಗಿಯುವ ಗುಣ ರಾಜೇಂದ್ರಪ್ರಸಾದ್‌ರ ಕವಿತ್ವದಲ್ಲಿದೆ.
ರಾಜೇಂದ್ರ ಪ್ರಸಾದ್ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಗಡಿಯಂತಿರುವ ಕುಡವತ್ತಿ ಗ್ರಾಮದವರು. ಹುಟ್ಟಿದ್ದು 1987ರಲ್ಲಿ. ಸಾಹಿತ್ಯದ ಗಂಧಗಾಳಿ ಇಲ್ಲದ ಊರಿನಲ್ಲಿ ಓದು, ಸ್ನಾತಕೋತ್ತರ ಪದವಿಗಳಿಸಿದ್ದು ವಾಣಿಜ್ಯ ಶಾಸ್ತ್ರದಲ್ಲಿ, ದುಡಿಯುತ್ತಿರುವುದು ಉದ್ಯಮ ರಂಗದಲ್ಲಿ. ಹೀಗಿದ್ದೂ ಕವಿತೆ ಕಟ್ಟುವ ಕಲೆ ಇವರಿಗೆ ಒಲಿದದ್ದು ಅಚ್ಚರಿಯ ಸಂಗತಿ. ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಉಳ್ಳ ಇವರು, ಬೌದ್ಧ ಮತ, ಜೆನ್ ಪೇಂಟಿಂಗ್, ತತ್ವ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳಿಗೆ ಸ್ಪಂದಿಸುತ್ತಿರುವ ರಾಜೇಂದ್ರಪ್ರಸಾದ್ ಸಂಕಥನ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ವಲಯದಲ್ಲಿ ಪರಿಚಿತರು. ಹೀಗೆ ಹೊಸದನಿಯ ಕವಿಯಾಗಿ ಬೆಳೆಯುತ್ತಿರುವ ರಾಜೇಂದ್ರಪ್ರಸಾದ್ ಅವರ ಏಳು ಕವನ ಸಂಕಲನಗಳಲ್ಲಿರುವ ವೈವಿಧ್ಯಮಯ ಚಿಂತನ ಕ್ರಮವನ್ನು, ಪ್ರತಿಮಾನಿಷ್ಠ ನಿರೂಪಣೆಯನ್ನು, ವರ್ತಮಾನ ಕಾಲಕ್ಕೆ ಸ್ಪಂದಿಸುವ ಬಗೆಯನ್ನು ಗುರುತಿಸಿ ನರಹಳ್ಳಿ ಪ್ರತಿಷ್ಠಾನವು ಇತ್ತೀ ಚೆಗೆ 2019ರ ನರಹಳ್ಳಿ ಪ್ರಶಸ್ತಿಯನ್ನು ನೀಡಿದೆ.
ಆನಂದ ರಾಮ ಉಪಾಧ್ಯ