ವೇದಿಕೆ ಮೇಲೆ ಶಿವ-ಪಾರ್ವತಿ ಕೂತಿದ್ದರು. ಶಿವ-ಪಾರ್ವತಿ ಎನ್ನುವುದಕ್ಕಿಂತ ಅವರ ಕಾಸ್ಟೂಮ್ ತೊಟ್ಟು ಕೂತಿದ್ದರು. ಇಡೀ ಸಮಾರಂಭದಲ್ಲಿ ಅವರು ಮಾತಾಡಲೇ ಇಲ್ಲ. ತಮಗೂ ಈ ಭೂಲೋಕದ ಜನರಿಗೂ ಸಂಬಂಧವಿಲ್ಲ ಎನ್ನುವಂತೆ ಕುಳಿತಿದ್ದರು. ಹಾಗಾದರೆ, ಅವರನ್ನು ವೇದಿಕೆ ಮೇಲೆ ಕೂರಿಸಿದ್ದಾಕೆ? ಎಂಬ ಪ್ರಶ್ನೆ ಪತ್ರಕರ್ತರಿಗೂ ಬಂತು. “ಶಿವು-ಪಾರು’ ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕ-ಸಂಗೀತ ನಿರ್ದೇಶಕ-ಕಥೆಗಾರ ಎಲ್ಲವೂ ಆಗಿರುವ ಅಮೇರಿಕಾ ಸುರೇಶ್, ಎಲ್ಲವನ್ನೂ ವಿಭಿನ್ನವಾಗಿ ಯೋಚಿಸುವುದರಿಂದ, “ಶಿವು-ಪಾರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಅವರಿಬ್ಬರಿಗೆ ಸಾಂಕೇತಿಕವಾಗಿ ಶಿವ-ಪಾರ್ವತಿಯರ ಕಾಸ್ಟೂéಮ್ ಹಾಕಿ ಕೂರಿಸಿರಬಹುದು ಎಂದು ಅಂದಾಜು ಮಾಡಲಾಯಿತು.
“ಶಿವು-ಪಾರು’ ಚಿತ್ರದ ಪತ್ರಿಕಾಗೋಷ್ಠಿ ಶುರುವಾಗಿದ್ದು ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ತೋರಿಸುವ ಮೂಲಕ. ಅರ್ಧ ಸಿನಿಮಾ ನೋಡಿದ ಅನುಭವವಾದ ಪತ್ರಕರ್ತರೊಂದಿಗೆ ಆ ನಂತರ ಸುರೇಶ್ ಎದುರಾದರು. ಅವರು “ಶಿವು-ಪಾರು’ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಜೂನ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸಿದ್ದು, ಅದಕ್ಕೂ ಮುನ್ನ ಅದನ್ನು ಮಾಧ್ಯಮದವರಿಗೆ ಒಪ್ಪಿಸುವುದಕ್ಕೆ ಕರೆದಿದ್ದರು.
“ಚಿತ್ರ ತಯಾರಾಗಿದೆ. ನಮ್ಮ ಕರ್ತವ್ಯ ಮುಗಿದಿದೆ. ಇನ್ನು ಅದನ್ನು ತಲುಪಿಸುವ ಜವಾಬ್ದಾರಿ ಮಾಧ್ಯಮದವರದ್ದು. ಅದು ನಿಮ್ಮ ಚಿತ್ರ. ಈ ಚಿತ್ರದಲ್ಲಿ ಶಿವ-ಪಾರ್ವತಿಯ ಭೂಲೋಕದ ಅವತಾರ ಇದೆ. ರೋಮಿಯೋ-ಜ್ಯೂಲಿಯಟ್, ಲೈಲಾ-ಮಜು° ಪ್ರೇಮಕಥೆಗಳಿಗಿಂಥ ಈ ಪ್ರೇಮ ಕಥೆ ಕಡಿಮೆ ಇರಬಾರದು, ಇದೊಂದು ಮೆಗಾ ಎಪಿಕ್ ಆಗಿರಬೇಕು ಎಂದು ಚಿತ್ರ ಮಾಡಿದ್ದೇವೆ. ಇಲ್ಲಿ ಕಥೆಯೇ ಹೀರೋ. ಅದೇ ಕಾರಣಕ್ಕೆ ಕಥೆ ಹೀರೋ, ವಿಧಿ ವಿಲನ್ ಎಂಬ ಸಬ್‌ಟೈಟಲ್ ಇದೆ. ಬಹಳ ಗ್ರಾಂಡ್ ಆಗಿ ಈ ಚಿತ್ರವನ್ನು ಮಾಡಿದ್ದೇವೆ. ಈ ಚಿತ್ರದ ಬಿಡುಗಡೆಯ ನಂತರ ಒಂದು ಕಾದಂಬರಿ ಬಿಡುಗಡೆ ಮಾಡುವ ಯೋಚನೆ ಇದೆ. ಈಗಾಗಲೇ ಕಾದಂಬರಿ ರೆಡಿಯಾಗಿದೆ. ಆದರೆ, ಜನ ಈಗಲೇ ಓದಿಬಿಟ್ಟರೆ, ಕಥೆ ಗೊತ್ತಾಗಿಬಿಡಬಹುದು ಎಂಬ ಕಾರಣಕ್ಕೆ ಬಿಡುಗಡೆ ಮಾಡಿಲ್ಲ. ಚಿತ್ರ ಬಿಡುಗಡೆಯಾದ ನಂತರ ಕಾದಂಬರಿಯೂ ಬಿಡುಗಡೆಯಾಗುತ್ತದೆ. ಸಾಯುವ ಮುನ್ನ ಪ್ರತಿ ಮನುಷ್ಯನೂ ಒಮ್ಮೆ ನೋಡಿ ಸಾಯಬೇಕಾದ ಚಿತ್ರ’ ಎಂದು ಹೇಳುವ ಮೂಲಕ ನೆರೆದಿದ್ದವರನ್ನು ಗಾಬರಿಪಡಿಸಿದರು ಸುರೇಶ್. ಅಂದು ಚಿತ್ರದ ನಾಯಕಿ ದಿಷಾ ಪೂವಯ್ಯ ಬಂದಿರಲಿಲ್ಲ. ಅವರ ಬದಲು ವೇದಿಕೆಯ ಮೇಲೆ ಆಲಿಷಾ ಕಾಣಿಸಿಕೊಂಡರು. ಅವರು ಎಂದಿನಂತೆ ಈ ಚಿತ್ರದಲ್ಲೂ ಐಟಂ ಡ್ಯಾನ್ಸ್ ಮಾಡಿದ್ದಾರೆ. ಇದು ಅವರ 99ನೇ ಚಿತ್ರ. ಹಾಗಾಗಿ ಬಹಳ ಖುಷಿಯಾಗಿ ಕಂಡರು ಅವರು.
“ಇದು ನನ್ನ 99ನೇ ಚಿತ್ರ. ಸುರೇಶ್ ಮತ್ತು ಈ ತಂಡವನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದು ಶಶಾಂಕ್ ರಾಜ್. ಇದು ಸುರೇಶ್ ಅವರ ಮೊದಲ ಚಿತ್ರ. ಅವರ ಮುಂದಿನ ಚಿತ್ರಗಳಿಗೂ ನಮ್ಮ ಸಹಕಾರ ಇದ್ದೇ ಇರುತ್ತದೆ’ ಎಂದು ಆಶ್ವಾಸನೆ ನೀಡಿದರು. ಇನ್ನು ಶಶಾಂಕ್ ರಾಜ್ ಸಹ ಹಾಜರಿದ್ದರು. ಅವರಿಗೂ ಸುರೇಶ್‌ಗೂ 15 ವರ್ಷಗಳ ಸ್ನೇಹವಂತೆ. ಕಳೆದ ಒಂದು ವರ್ಷದಿಂದ ಸುರೇಶ್ ಅವರು ತಮ್ಮ ಕುಟುಂಬವನ್ನು ಬಿಟ್ಟು, ಚಿತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ, ಶಶಾಂಕ್ ಖುಷಿಯಾಗಿದ್ದರು. “ಸುರೇಶ್ ಬರೀ ಚಿತ್ರ ಮಾಡಿಲ್ಲ. ಅವರ ಕಟ್ಟಡದಲ್ಲಿ ಒಂದು ಸ್ಟುಡಿಯೋ ಮಾಡಿದ್ದಾರೆ. ಚಿತ್ರಕ್ಕೆ ಬೇಕಾದ ಕ್ಯಾಮೆರಾಗಳನ್ನು ಕೊಂಡಿದ್ದಾರೆ. ಈ ಚಿತ್ರ ಸೋತರೆ ಏನು ಮಾಡುತ್ತೀರಿ ಎಂದು ಕೇಳಿದೆ. ಇದೊಂದು ಪ್ರಯೋಗ ವಾಗಿ ಮಾಡುತ್ತಿದ್ದೇನೆ. ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಎಂದರು. ಅವರಿಗೆ ಎಲ್ಲರ ಸಹಕಾರವಿರಲಿ’ ಎಂದು ಹಾರೈಸಿದರು.