“ನಿರ್ಮಾಪಕರು ತಂತ್ರಜ್ಞರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಇಂತಹ ಯಶಸ್ಸು ಖಂಡಿತ ಸಾಧ್ಯವಿದೆ…’ ಹೀಗೆ ಹೇಳಿದ್ದು, ನಿರ್ದೇಶಕ ಮಂಜು ಸ್ವರಾಜ್. ಅವರು ಹೇಳಿಕೊಂಡಿದ್ದು, ತಮ್ಮ ನಿರ್ದೇಶನದ “ಮನೆ ಮಾರಾಟಕ್ಕಿದೆ’ ಚಿತ್ರದ 50 ದಿನಗಳ ಸಂಭ್ರಮಾಚರಣೆಯಲ್ಲಿ. ಹೌದು, ಚಿತ್ರ ಯಶಸ್ವಿ 50 ದಿನ ಮುಗಿಸಿ, ಮುಂದುವರೆಯುತ್ತಿದೆ. ಈ ಸಂಭ್ರಮ ಹಂಚಿಕೊಳ್ಳಲೆಂದೇ, ನಿರ್ಮಾಪಕ ಎಸ್.ವಿ.ಬಾಬು ಅವರು ಅಂದು ಚಿತ್ರಕ್ಕೆ ದುಡಿದ ಕಲಾವಿದರು, ತಂತ್ರಜ್ಞರಿಗೆ ನೆನಪಿನ ಕಾಣಿಕೆ ಕೊಡುವ ಕಾರ್ಯಕ್ರಮ ಆಯೋಜಿಸಿದ್ದರು.
ನೆನಪಿನ ಕಾಣಿಕೆ ಪಡೆದ ಸಂದರ್ಭ ಮಾತನಾಡಿದ ಮಂಜು ಸ್ವರಾಜ್, “ನನ್ನ ನಿರ್ದೇಶನದ ಹಿಂದಿನ ಎರಡು ಚಿತ್ರಗಳು ಯಶಸ್ವಿಗೊಂಡರೂ ನೆನಪಿನ ಕಾಣಿಕೆ ಸ್ವೀಕರಿಸಿರಲಿಲ್ಲ. “ಮನೆ ಮಾರಾಟಕ್ಕಿದೆ’ ಮೂಲಕ ಮೊದಲ ನೆನಪಿನ ಕಾಣಿಕೆ ಪಡೆಯುತ್ತಿರುವ ಖುಷಿ ಇದೆ. ಎಸ್.ವಿ.ಬಾಬು ಅಂತಹ ನಿರ್ಮಾಪಕರು ಇದ್ದರೆ, ಖಂಡಿತ ಒಳ್ಳೆಯ ಸಿನಿಮಾ ಮಾಡಬಹುದು. ಸಿನಿಮಾ ತಂತ್ರಜ್ಞರಿಗೆ ಅವರು ಕೊಡುವ ಪ್ರೋತ್ಸಾಹ ಅನನ್ಯ. ಹಾಗಾಗಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡಿದೆ.
ಈ ಸಕ್ಸಸ್ ತಂಡಕ್ಕೆ ಸೇರಬೇಕು’ ಎಂಬುದು ಮಂಜು ಸ್ವರಾಜ್ ಮಾತು. ನಿರ್ಮಾಪಕ ಎಸ್.ವಿ.ಬಾಬು, “ಎಲ್ಲರ ಶ್ರಮದಿಂದ ಚಿತ್ರ ಯಶಸ್ಸು ಕಂಡಿದೆ. ನಂಬಿಕೆ ಇಟ್ಟು ಕೆಲಸ ಮಾಡಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಇನ್ನು, ಹಿಂದೆ ರಿಷಭ್ ಶೆಟ್ಟಿ “ರಿಕ್ಕಿ’ ಮಾಡಿದ್ದರು. ಆದರೆ, ಅದು ಜನರಿಗೆ ತಲುಪಲಿಲ್ಲ. ಈಗ ಆ ಚಿತ್ರವನ್ನು ಮರು ಬಿಡುಗಡೆ ಮಾಡುವ ಯೋಚನೆ ಇದೆ. ನಿರ್ದೇಶಕ ರಿಷಭ್ ಹಾಗು ನಾಯಕ ರಕ್ಷಿತ್‌ಶೆಟ್ಟಿ ಇಬ್ಬರೂ ಈಗ ಯಶಸ್ಸಿನಲ್ಲಿದ್ದಾರೆ.
ಹಾಗಾಗಿ ಪುನಃ ಚಿತ್ರವನ್ನು ರೀರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ’ ಎಂದರು ಬಾಬು. ಅಂದು ಹಾಜರಿದ್ದ ರಿಷಭ್ ಶೆಟ್ಟಿ ಕೂಡ, ಎಸ್.ವಿ.ಬಾಬು ಅವರ ಗುಣಗಾನ ಮಾಡಿದರು. “ನಾನು “ರಿಕ್ಕಿ’ ಕಥೆಯನ್ನು ಹಲವು ನಿರ್ಮಾಪಕರಿಗೆ ಹೇಳಿದ್ದೆ. ಆದರೆ, ಯಾರಿಂದಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಕೊನೆಗೆ ಬಾಬು ಸರ್, ಕಥೆ ಕೇಳಿ ಎಲ್ಲಾ ವಿಧದಲ್ಲೂ ಸಹಕಾರ ಕೊಟ್ಟರು. ಕೆಲವೇ ನಿರ್ಮಾಪಕರಲ್ಲಿ ಇಂತಹವರು ಸಿಗುತ್ತಾರೆ’ ಅಂದರು.
ಅಂದು ಸಾ.ರಾ.ಗೋವಿಂದು ಮಾತನಾಡಿ, “ಪ್ರಸ್ತುತ ದಿನದಲ್ಲಿ ಪರಭಾಷೆ ಸಿನಿಮಾಗಳ ನಡುವೆಯೂ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಈ ಚಿತ್ರ ಎಲ್ಲಾ ಭಾಷೆಯ ಚಿತ್ರಗಳ ಮಧ್ಯೆ ಸವಾಲು ಸ್ವೀಕರಿಸಿ ಹಿಟ್ ಆಗಿದೆ’ ಅಂದರು. ಶಿವರಾಂ, ಚಿಕ್ಕಣ್ಣ, ರವಿಶಂಕರ್, ಗಿರಿ, ಕಾರುಣ್ಯ ರಾಮ್, ತಬಲನಾಣಿ, ನೀನಾಸಂಅಶ್ವಥ್, ರಾಜೇಶ್‌ನಟರಂಗ ಅಭಿಮನ್‌ರಾಯ್ ಇತರರು ಆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.