Advertisement
ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಬೇಸಗೆಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಈ ಬೇಸಗೆಯಲ್ಲಿ ಕೆಲವು ಪ್ರದೇಶಗಳಲ್ಲಿ ಸಮಸ್ಯೆ ಉಂಟಾ ಗುವ ಸಾಧ್ಯತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಗ್ರಾ.ಪಂ. ಮುಂದಾಗಿದೆ.
ಕಳೆದ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸದ್ಯ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಎಪ್ರಿಲ್ – ಮೇ ತಿಂಗಳಲ್ಲಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕಳೆದ ಬಾರಿ ನೀರಿನ ಸಮಸ್ಯೆಗೆ ಟ್ಯಾಂಕರ್ ನೀರು ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು. ಈ ಬಾರಿ ಬೇಸಗೆಗೆ ಮುನ್ನ ಬಾವಿ, ಹ್ಯಾಡ್ ಬೋರ್‌ವೆಲ್‌ಗಳನ್ನು ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಗ್ರಾಮ ಪಂಚಾಯತ್ ಮುಂದಾಗಿದೆ.
Related Articles
ನವಗ್ರಾಮ ಕಾಲನಿಯಲ್ಲಿನ ಮನೆಗಳಿಗೆ ಬವಳಾಡಿಯಲಿರುವ ಟ್ಯಾಂಕ್‌ನಿಂದ ನಲ್ಲಿ ಮೂಲಕ ನೀರು ನೀಡಲಾಗುತ್ತದೆ. ಇಲ್ಲಿನ ಬಾವಿಯಲ್ಲಿ ನೀರು ಕಡಿಮೆಯಾದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
Advertisement
3 ಮತ್ತು 4ನೇ ವಾರ್ಡ್‌ನ ಮನೆಗಳ ಎದುರು ಹರಿಯುತ್ತಿರುವ ನದಿ ನೀರು ಉಪ್ಪು ಮಿಶ್ರಿತವಾಗಿರುವುದರಿಂದ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನವರ ನೀರಿನ ಸಮಸ್ಯೆ ಮುಕ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಯತ್ನದಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗಿದೆ.
4ನೇ ವಾರ್ಡ್ ಪ್ರದೇಶಗಳಾದ ಗರಡಿ, ಕಳಿಸಾಲು, ನಿಸರ್ಗಕೇರಿ, ದೊಂಬ್ಲಿಕೇರಿ ಪ್ರದೇಶಗಳಲ್ಲಿ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಇಲ್ಲಿನ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಹುತೇಕ ಮನೆಗಳಲ್ಲಿ ಸಿಹಿನೀರಿನ ಕೊರತೆ ಇದೆ. ಇಲ್ಲಿಗೆ ಬಿಜೂರು ಶಾಲೆಯಲ್ಲಿನ ಟ್ಯಾಂಕ್‌ನಿಂದ ನಲ್ಲಿ ಮೂಲಕ ನೀರು ನೀಡಲಾಗುತ್ತಿದೆ. 3ನೇ ವಾರ್ಡ್‌ನ ಶೆಟ್ರಕೇರಿ, ಕಳಿನಬಾಗಿಲು ವ್ಯಾಪ್ತಿಯ ಕೆಲವು ಮನೆಗಳಿಗೆ ನೀರಿನ ಸಮಸ್ಯೆ ಇದೆ.
ಇನ್ನು ದಾಸೋಡಿ ಮನೆಯ ಬಳಿ ಇರುವ ಬಾವಿಯ ನೀರನ್ನು ಸದುಪಯೋಗಪಡಿಸಿಕೊಳ್ಳಲು ಪೈಪ್‌ಲೈನ್‌ಗೆ 1.45 ಲ.ರೂ. ಹಾಗೂ 1 ಲಕ್ಷ ವಿದ್ಯುತ್ ಪಂಪ್‌ಸೆಟ್ ಕೊಠಡಿ ನಿರ್ಮಾಣಕ್ಕೆ 14ನೇ ಹಣಕಾಸು ಯೋಜನೆಯಲ್ಲಿ ಅನುದಾನ ತೆಗೆದಿರಿಸಲಾಗಿದೆ.
ಕೈಗೊಂಡ ಕ್ರಮಗಳೇನು?3ನೇ ವಾರ್ಡ್‌ನ ಶೆಟ್ರಕೇರಿಯ ಅಂಗನವಾಡಿ ಸಮೀಪ ಜಿ.ಪಂ. ಗ್ರಾಮೀಣ ಕುಡಿಯುವ ನೀರು ಮತ್ತು
ನೈಮಲ್ಯ ಉಪವಿಭಾಗ ಬೈಂದೂರು ಯೋಜನೆಯಿಂದ 10 ಲಕ್ಷ ರೂ. ವೆಚ್ಚದ 50 ಸಾವಿರ ಲೀ. ಸಾಮರ್ಥ್ಯದ ವಾಟರ್ ಟ್ಯಾಂಕನ್ನು ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲೇ ಜಿಲ್ಲಾ ಪಂಚಾಯತ್‌ನಿಂದ 10 ಲಕ್ಷ ರೂ. ಅನುದಾನದಲ್ಲಿ ಬಾವಿ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಸಾಕಷ್ಟು ನೀರು ಇರುವುದರಿಂದ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುವುದು ನಾಗರಿಕರ ಅಭಿಪ್ರಾಯ. ಸಮಸ್ಯೆ ನಿವಾರಣೆಗೆ ಕ್ರಮ
ಗ್ರಾಮದ 3 ಮತ್ತು 4ನೇ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಶೆಟ್ರಕೇರಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ ಹಾಗೂ ಒಂದು ಬಾವಿ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಸಾಕಷ್ಟು ನೀರಿದೆ. ಅಲ್ಲದೆ ದಾಸೋಡಿ ಮನೆ ಬಳಿಯ ಬಾವಿಯಲ್ಲಿನ ನೀರು ಬಳಸಿಕೊಳ್ಳಲು ಅನುದಾನ ನೀಡಲಾಗಿದೆ. ಉಳಿದ ಭಾಗದಲ್ಲಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
– ಸತೀಶ ತೋಳಾರ್, ಪಿಡಿಓ ಕೃಷ್ಣ ಬಿಜೂರು