Advertisement

ಒಂದು ಪರಿಪೂರ್ಣ ಸಂಗೀತ ಕಛೇರಿ

06:53 PM Apr 18, 2019 | mahesh |

ಶ್ರೀ ಮಹಾಬಲ – ಲಲಿತ ಕಲಾ ಸಂಸ್ಥೆಯ ಆಶ್ರಯದಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆದ ವಿ|ಸೂರ್ಯಪ್ರಕಾಶರ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ಒಂದು ಪರಿಪೂರ್ಣ ಕಾರ್ಯಕ್ರಮವಾಗಿ ದಾಖಲಾಯಿತು. ಕಲಾವಿದರ ಅತ್ಯುನ್ನತ ಮನೋಭೂಮಿಕೆಯೊಂದಿಗೆ ಉನ್ನತ ಮಟ್ಟದ ಸಹವಾದಕ ಕಲಾವಿದರ ನಿರ್ವಹಣೆ ಒಳಗೊಂಡಾಗ ಕಾರ್ಯಕ್ರಮದ ಒಟ್ಟಂದ ಉನ್ನತ ದರ್ಜೆಯದಾಗುವುದು ಸಹಜವೇ. ಸುಮಾರು ನಾಲ್ಕು ಗಂಟೆಗಳ ಅವಧಿಯ ಕಾರ್ಯಕ್ರಮದ ಆದಿಗಣಪತಿ ಸ್ತುತಿ ರೂಪವಾದ ಶ್ಲೋಕದಿಂದ ಮೊದಲ್ಗೊಂಡು ಅಂತ್ಯದ ತನಕ ಉನ್ನತ ಶ್ರೇಣಿಯ ಲವಲವಿಕೆಯಿಂದ ಕೂಡಿದ ನಿರ್ವಹಣೆ ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳಲು ಕಾರಣವಾಯಿತು.

Advertisement

ಸಾಮಾನ್ಯವಾಗಿ ಕೇಳಿ ಬರುವ ಶ್ರೀ ಮುತ್ತಯ್ಯ ಭಾಗವತರ “ಆಂದೋಳಿಕಾ’ ವರ್ಣದಿಂದ ಕಾರ್ಯಕ್ರಮ ಪ್ರಾರಂಭಿಸಿದಾಗಲೇ ಶ್ರೋತೃಗಳಿಗೆ ಕಲಾವಿದರ ಧೋರಣೆ ವಿಷದವಾಯಿತು. ಮುಂದೆ ಕಲಾವಿದರು ಆಯ್ದ ಕೃತಿಗಳು ಹಾಗೂ ಮಾಡಿದ ನಿರ್ವಹಣೆ ಎಲ್ಲವೂ ವಿಶೇಷ ಅನಿಸಿದವು. ಶ್ರೀ ತ್ಯಾಗರಾಜ ಸ್ವಾಮಿಗಳ “ಶ್ರೀ ರಘುಕುಲ’ (ಹಂಸದ್ವನಿ) ಅದರಲ್ಲಿ ಬಂದ ಸ್ವರಾಲಂಕಾರಗಳು ಗಮನೀಯ. ಮುಂದೆ ಬಂದ “ಈ ಪರಿಯ ಸೊಬಗಾವ’ ರಾಗ ಮಾಲಿಕೆಯಾಗಿ ಬಂದರೆ ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಿಶಾಲಾಕ್ಷಿ – ವಿಶ್ವೇಸಿ’ಗಾಗಿ ಕಾಮವರ್ಧಿನಿ “ಗೃಹಭೇಧ’ಗಳೊಂದಿಗೆ ವಿಸ್ತಾರವಾಗಿ ಮಂಡಿತವಾಯಿತು. ಮಿಶ್ರಛಾಪು ತಾಳದ ಈ ಕೃತಿಯ “ಕಾಶೀರಾಜಿ ಕೃಪಾಲಿನಿ’ ಎಂಬಲ್ಲಿ ಸವಿಸ್ತಾರವಾದ ನೆರಮ್‌ ಮತ್ತು ಕಲ್ಪನಾ ಸ್ವರಗಳ ಎರಡು ಎಡುಪುಗಳ ನಿರ್ವಹಣೆ ವಿಶಿಷ್ಟವಾಗಿದ್ದಿತು. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ರಾಗದ ಆರೈಕೆಯಾಗಿ ಕಾಣಿಸಿಕೊಳ್ಳದ “ದೇವಗಾಂಧಾರಿ’ ತ್ಯಾಗರಾಜರ “ನಾಮೊರಾಲಗಿರಿಪವೇಮೊ’ ಕೃತಿಗಾಗಿ ಸವಿಸ್ತಾರವಾಗಿ ಮಂಡನೆಯಾದುದು ಕಲಾವಿದರ ವಿಭಿನ್ನ ಧೋರಣೆಯ ಕಾರಣದಿಂದ. ಅನಂತರ ಬಂದ ಕಾ.ವಾ.ವಾ. (ಪಾಪನಾ ಶಂಶಿವನ್‌ – ವರಾಳಿ) ಸರಳವಾಗಿದ್ದರೆ “ಸಕಲ ಗೃಹಬಲ’ದ ಅನಂತರ ಸರಸಸಾಮದಾನ ಮತ್ತು “ಹಿತವು ಮಾಟ’ ಎಂಬಲ್ಲಿ ಉತ್ತಮ ಲೆಕ್ಕಾಚಾರದ ಕಲ್ಪನಾ ಸ್ವರಗಳು ಹಿಂದಿನ ತಲೆಮಾರಿನ ಸ್ವರಕಲ್ಪನೆಯನ್ನು ನೆನಪಿಸಿದರೆ ವಿಶೇಷವಲ್ಲ. ಮುಂದೆ ಬಂದುದು ಕಾರ್ಯಕ್ರಮದ ಪ್ರಧಾನ ರಾಗವಾಗಿ ಮೂಡಿದ ಭೈರವಿ. ಮಧು ಮಾದರಿ ಎನ್ನಬಹುದಾದ ಸೌಂದರ್ಯದೊಂದಿಗೆ ವಿವಿಧ ಆಯಾಮಗಳನ್ನು ನಿರಾಯಾಸವಾಗಿ ಮಂಡಿಸಿ “ಕೋಲುವೈಯುನ್ನಾಡೆ’ ಕೃತಿಯನ್ನು ಎತ್ತಿಕೊಂಡರು. ಕೃತಿಯನ್ನು ಸಾವಧಾನವಾಗಿ ಮಂಡಿಸಿ “ಮನಸುರಂಜಿಲ್ಲು’ ಎಂಬಲ್ಲಿ ವಿಸ್ತಾರವಾಗಿ ಸಾಹಿತ್ಯ ವಿಸ್ತಾರ ಮಾಡಿ ಅತ್ಯುನ್ನತ ಮಟ್ಟದ ಕಲ್ಪನಾ ಸ್ವರಗಳೊಂದಿಗೆ ಕಾರ್ಯಕ್ರಮವನ್ನು ಮುನ್ನಡೆಸಿದರು.

ತನಿ ಆವರ್ತನದಲ್ಲಿ ವಿ| ತ್ರಿವೆಂಡ್ರಂ ಬಾಲಾಜಿ ಹಾಗೂ ಖಂಜಿರದಲ್ಲಿ ವಿ|ವ್ಯಾಸ್‌ ವಿಠಲ್‌ ವಿಧ ನಡೆ ಮುಕ್ತಾಯಗಳ ಅನಾವರಣದ ಹೃದ್ಯ ಆರೋಗ್ಯಕರ ಸ್ಪರ್ಧೆಯನ್ನು ನಡೆಸಿ ಮೆಚ್ಚುಗೆಗೆ ಪಾತ್ರರಾದರು. ಬೃಂದಾವನ ಸಾರಂಗವನ್ನು ಆಹ್ಲಾದಕರವಾಗಿ ಪ್ರಸ್ತುತಪಡಿಸಿ ಎರಡು ವಿಭಿನ್ನ ನಡೆಗಳ ಚತುರ ತ್ರಿಪುಟ ಪಲ್ಲವಿಯನ್ನು ಪಲ್ಲವಿ ಗಾಯನದ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿ ಬಹುಕಾಲ ಸ್ಮತಿಯಲ್ಲಿ ಉಳಿಯುವ ಅನುಭವವನ್ನು ನೀಡಿದ್ದಾರೆ. ಬಾಗೇಶ್ರೀ ಮುನ್ನುಡಿಯೊಂದಿಗೆ ಮುಂದಿನ ಶ್ರೀಕಾಂತ ಎನಗಿಷ್ಟು’ ಸರಳವಾಗಿತ್ತು. ಮುಂದೆ ಸ್ವರಚಿತ ರಾಗಮಾಲಿಕೆ ವಿವಿಧ ರಾಗಗಳ ನಾಮಧೇಯಗಳನ್ನು ಪೋಣಿಸಿ ಮಾಡಿದ ವಿಶಿಷ್ಟ ಕೃತಿ ಕುತೂಹಲಕಾರಿಯಾಗಿತ್ತು. ಮುತ್ತಯ್ಯ ಭಾಗವತರ ಇಂಗ್ಲೀಷ್‌ ನೊಟ್ಟು ಸ್ವರ ಹಾಗೂ ಮಂಗಳದೊಂದಿಗೆ ಕಛೇರಿ ಸಂಪನ್ನಗೊಂಡಿತು.

ವಿ| ರಾಮಕೃಷ್ಣ ಭಟ್ಟ ಯು.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next