ಅಡ್ಮಿನ್‌ಗಳು: ಮುತ್ತಪ್ಪ ಎಸ್. ಕ್ಯಾಲಕೊಂಡ, ಬಸವರಾಜ, ಶರಣ, ಶಿವಬಸು, ಸಿದ್ದು, ಸುನೀರ್, ಶಮೀರ, ಮಹೇಶ್, ಸಚಿನ್, ಯಲ್ಲಪ್ಪ…
Advertisement
ಇಂದು ನಮ್ಮ ಬೆರಳ ತುದಿಯಲ್ಲೇ ಸಂಬಂಧಗಳು ನಿಂತಿವೆ. ಬೇರೆ ಬೇರೆ ಕಡೆಯಲ್ಲಿ ಕೆಲಸ ಮಾಡುವ ನನ್ನ ಗೆಳೆಯರನ್ನೆಲ್ಲ ಕಲೆಹಾಕಿ, ನಾನೊಂದು ವಾಟ್ಸಾಪ್ ಗ್ರೂಪ್ ರಚಿಸಿದೆ. ಅದರಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ಗೆಳೆಯರೂ ಇದ್ದೇವೆ. ಗ್ರೂಪ್‌ನ ಹೆಸರು, “ಕನ್ನಡ ಶಾಲೆ ದೋಸ್ತರು’ ಅಂತ. ನಿತ್ಯದ ಸಂದೇಶ ವಿನಿಮಯ, ಶುಭಾಶಯಗಳಲ್ಲದೇ, ಹಬ್ಬ-ಹರಿದಿನ, ಜಾತ್ರೆಗಳ ಬಗ್ಗೆ, ಅಂದು ಧರಿಸುವ ಬಟ್ಟೆಯ ಬಗ್ಗೆಯೂ ಇಲ್ಲಿ ಚರ್ಚೆಗಳು ನಡೆಯುತ್ತವೆ. ಅಪ್ಪಿತಪ್ಪಿ ಯಾರದ್ದಾದರೂ ಬರ್ತ್‌ಡೇ ಬಂತು ಅಂತಾದ್ರೆ, ಅವನ ಪಾಕೆಟ್ಟಿನ ಕತೆ ಮುಗಿದಂತೆ. ಪಾರ್ಟಿ ಕೊಡಿಸುವ ತನಕ ಬಿಡುತ್ತಿರಲಿಲ್ಲ. ಹಾಗೆ ಯಾರಾದರೂ, ಹೊಸ ಡ್ರೆಸ್ ಧರಿಸಿದ ಫೋಟೋ ಹಾಕಿಕೊಂಡ್ರೆ, ಆ ಬಗ್ಗೆ ನ್ಯೂಸ್ ಏನಾದ್ರೂ ನಮ್ಮ ಕಿವಿಗೆ ಬಿದ್ರೆ, ಆಗಲೂ ಪಾರ್ಟಿ ಕೇಳದೆ, ಬಿಡುತ್ತಿರಲಿಲ್ಲ. ಅಕಸ್ಮಾತ್ ಆತನೇನಾದರೂ ಟ್ರೀಟ್ ಕೊಡಿಸಲು ಹಿಂದೆಮುಂದೆ ನೋಡಿದರೆ, ತಮಾಷೆ ಮಾಡುತ್ತಾ, ಅವನ ಕಾಲೆಳೆಯುತ್ತೇವೆ. ಕೆಲವು ಸಲವಂತೂ ಅವನ ಪಾಪದ ಕಿವಿಗಳು, ನಮ್ಮ ಬಯುಗಳನ್ನು ಕೇಳಬೇಕಾಗಿ ಬಂದಿದ್ದೂ ಉಂಟು. ಎಷ್ಟೋ ಗೆಳೆಯರು ಹಾಗೆ ಬಯ್ಸಿಕೊಂಡು, ಗ್ರೂಪ್‌ನಿಂದ ಹೊರಕ್ಕೆ ಹೋಗಿ, ನಂತರ ಸಾರ್ವಜನಿಕ ಗೌರವದಲ್ಲಿ ಅವರನ್ನು ಗ್ರೂಪ್ ಒಳಗೆ ಬರಮಾಡಿಕೊಂಡಿದ್ದೂ ಇದೆ. ಎಷ್ಟೇ ಚರ್ಚೆ, ಮುನಿಸು, ಸಂಘರ್ಷ ನಡೆಯಲಿ, ಕೊನೆಗೆ ಗೆಲ್ಲುವುದು ನಮ್ಮ “ಪಾರ್ಟಿ’ಯೇ! ಸೋಲುವುದು ಅವರ “ಜೇಬು’!