Advertisement

Nanjangud: ಬಾಲಕಿಯನ್ನು ಮದುವೆಯಾದ ಗ್ರಾಪಂ ಅಧ್ಯಕ್ಷ

02:34 PM Sep 12, 2023 | Team Udayavani |

ನಂಜನಗೂಡು: ತಾಲೂಕಿನ ಗ್ರಾಮ ಪಂಚಾಯ್ತಿಅಧ್ಯಕ್ಷರೊಬ್ಬರು ಬಾಲಕಿಯನ್ನು ಮದುವೆಯಾದ ಘಟನೆ ವರದಿಯಾಗಿದೆ. ಬಾಲಕಿಯನ್ನು ಮದುವೆಯಾಗಿ ತಂದೆಯಾಗಲು ಹೊರಟ ಈ ಗ್ರಾಪಂ ಅಧ್ಯಕ್ಷನ ವಿರುದ್ಧ ನಂಜನಗೂಡು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಈ ಸಂಬಂಧ ರೈತ ಸಂಘದ ಉಪಾಧ್ಯಕ್ಷ ಮಹೇಶ್‌ ಸೇರಿದಂತೆ ಗ್ರಾಮದ ಪ್ರಮುಖರು ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ಮಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ ದೂರಿನ ಮೇರೆಗೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕವಿತಾ ಮುಂದಿನ ಕ್ರಮ ಜರುಗಿಸಿದ್ದಾರೆ.

ಹಾಡ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಹರೀಶ್‌ ಕುಮಾರ್‌ ಎಂಬುವರು ಅರಿಯೂರು ಗ್ರಾಮದ ಬಾಲಕಿಯನ್ನು 2023ರ ಫೆಬ್ರವರಿ 15ರಂದು ಬುಧವಾರ ನಂಜನಗೂಡಿನ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯಾಗಿದ್ದಾರೆ. ಶಾಲಾ ದಾಖಲಾತಿ ಪ್ರಕಾರ ಬಾಲಕಿಯ ಜನ್ಮ ದಿನಾಂಕವು 2005ರ ಮೇ 19 ಆಗಿದೆ. ಆಕೆಗೆ ಇನ್ನು 18 ವರ್ಷ ತುಂಬಿಲ್ಲ. ಹೀಗಾಗಿ ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಾಲಕಿ ಅರಿಯೂರು ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹುರಾದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಾಲಕಿಯನ್ನು ಮದುವೆ ಮಾಡಿಕೊಂಡಿರುವುದಲ್ಲದೇ ಆಕೆ ಈಗ ಗರ್ಭಿಣಿಯಾಗಿದ್ದು, ಇದು ಕೂಡ ಕಾನೂನು ಉಲ್ಲಂಘನೆಯಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ತಮ್ಮ ಸಹಿಯೊಂದಿಗೆ ದೂರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಹಾಲಿ ಗ್ರಾಪಂ ಅಧ್ಯಕ್ಷ ಹರೀಶ್‌ಕುಮಾರ್‌ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನಂಜನಗೂಡು ಪೊಲೀಸರಿಗ ಈ ಕುರಿತು ಸೋಮವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next