ಶನಿವಾರಸಂತೆ: ಶುಕ್ರವಾರ ಸಂಜೆ ನಿಡ್ತ ಮೀಸಲು ಅರಣ್ಯದ ಕಾರ್ಗೊಡು ಅರಣ್ಯ ಬದಿಯಲ್ಲಿ ಜೋಡಿ ಮೃತದೇಹ ಪತ್ತೆಯಾಗಿದೆ.
ಗಂಡು ಮತ್ತು ಹೆಣ್ಣಿನ ಮೃತದೇಹ ಕೊಳೆತ ಸ್ಥಿತಿಯಲ್ಲಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ತೆರಳಿ ಶವಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿಟ್ಟಿದ್ದರು.
ಶವಗಳ ಪಕ್ಕ ಒಟ್ಟು 4 ಬೇಸಿಕ್ ಮೊಬೈಲ್‌ಗಳು ಹಾಗೂ ವಿಷದ ಬಾಟಲಿಗಳು ಪತ್ತೆಯಾಗಿವೆ. ಮೊಬೈಲ್‌ಗಳ ಸಹಾಯದಿಂದ ಪೊಲೀಸರು ಈ ಜೋಡಿಯ ಮನೆಯವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಸೋಮವಾರಪೇಟೆ ಸಮಿಪದ ಬಂಜೆಗುಂಡಿಯ ವಿವಾಹಿತ ದಿಲೀಪ್ ಗಿಲ್ಬರ್ಟ್ (35) ಮತ್ತು ಕೊತ್ನಳ್ಳಿ ಸಮಿಪದ ಹೊನ್ನಳ್ಳಿ ಗ್ರಾಮದ ವಿವಾಹಿತೆ ಸಾವಿತ್ರಿ (25) ಆತ್ಮಹತ್ಯೆ ಮಾಡಿಕೊಂಡವ ರು. ದಿಲೀಪ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸಾವಿತ್ರಿಯ ಪತಿ ಆರು ತಿಂಗಳ ಹಿಂದೆ ತೀರಿ ಕೊಂಡಿದ್ದು, ಆಕೆಗೂ ಇಬ್ಬರು ಮಕ್ಕಳಿದ್ದಾರೆ. ದಿಲೀಪ್ ಮತ್ತು ಸಾವಿತ್ರಿಗೆ ಎರಡೂ¾ರು ತಿಂಗಳ ಹಿಂದೆ ಪರಿಚಯವಾಗಿದ್ದು, ಬಳಿಕ ಅನೈತಿಕ ಸಂಬಂಧ ಹೊಂದಿದ್ದರು. ಇದು ದಿಲೀಪ್ ಪತ್ನಿ ಮತ್ತು ಸಾವಿತ್ರಿಯ ಪೋಷಕರಿಗೆ ಗೊತ್ತಾಗಿ ಅವರ ಮನೆಗಳಲ್ಲಿ ಗಲಾಟೆಯಾಗುತ್ತಿತ್ತು ಎಂದು ಹೇಳಲಾಗಿದೆ.
ಅ. 23ರಿಂದ ದಿಲೀಪ್ ಮತ್ತು ಸಾವಿತ್ರಿ ನಾಪತ್ತೆಯಾಗಿರುವ ಬಗ್ಗೆ ಉಭಯ ಕಡೆಯವರು ಸೋಮವಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಮನೆತೊರೆದ ಜೋಡಿ ವಾರದ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿದರು. ಶನಿವಾರಸಂತೆ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಯಿತು.