Advertisement
1948ರ ಜನವರಿ 31 ರಂದು ವಿಶ್ವಸಂಸ್ಥೆಯ 55 ಸದಸ್ಯ ರಾಷ್ಟ್ರಗಳ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಿದವು. ಕಾರಣ ಅಂದು ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ.
Related Articles
Advertisement
ಗಾಂಧಿ ಜಯಂತಿ ಮತ್ತು ಪುಣ್ಯ ತಿಥಿಯಂದು ಅವರ ಪ್ರತಿಮೆಗೆ ಹೂಹಾರ ಹಾಕಿ ಬಾಯಿ ತುಂಬಾ ಗುಣಗಾನ ಮಾಡುತ್ತೇವೆ. ಆದರೆ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವುದು ಆ ಮಹಾನ್ ಚೇತನಕ್ಕೆ ಸರ್ಮಪಿಸುವ ನೈಜ ಮತ್ತು ಪ್ರಾಮಾಣಿಕ ಶ್ರದ್ಧಾಂಜಲಿ ಎಂಬುದನ್ನು ಮರೆತಿರುತ್ತೇವೆ.
ಶಾಂತಿ ಮತ್ತು ಅಹಿಂಸೆಯ ತತ್ವಕ್ಕೆ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿ ಇದೆ. ಸರ್ವೋದಯವು ಗಾಂಧೀಜಿಯವರ ಗುರಿಯಾಗಿತ್ತು. ಸ್ವಾತಂತ್ರ್ಯ ಸಿಕ್ಕಿ ಪೂರ್ತಿ ಏಳು ದಶಕಗಳು ಕಳೆದರೂ ಬಹುಪಾಲು ಜನ ಅನ್ನ, ಅರಿವೆ ಮತ್ತು ಅಕ್ಷರದಿಂದ ವಂಚಿತರಾಗಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ.
ಇಂದು ಪ್ರಜಾಪ್ರಭುತ್ವವೇ ಡೋಲಾಯಮಾನ ಪರಿಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರು ಪ್ರಜಾಪ್ರಭುತ್ವದ ಬಗ್ಗೆ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ಅದೇನೆಂದರೆ “ಒಂದು ವ್ಯವಸ್ಥೆ ದೊಡ್ಡದಾದಷ್ಟೂ ಅದರ ದುರುಪಯೋಗದ ಅವಕಾಶಗಳು ಹೆಚ್ಚಿಗೆ ಇರುತ್ತವೆ. ಪ್ರಜಾಪ್ರಭುತ್ವ ಎನ್ನುವುದು ಒಂದು ದೊಡ್ಡ ವ್ಯವಸ್ಥೆಯಾಗಿರುವುದರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗಕ್ಕೆ ಒಳಗಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಪ್ರಜಾಪ್ರಭುತ್ವವನ್ನು ತೊರೆದು ಬಿಡುವುದಲ್ಲ. ದುರಪಯೋಗದ ಸಾಧ್ಯತೆಯನ್ನು ತಗ್ಗಿಸುವುದೇ ಆಗಿದೆ.’ ಆದರೆ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣ ಸ್ವಾರ್ಥಕ್ಕೆ ಬಳಸಿಕೊಂಡು, ಅಧಿಕಾರ ದುರಪಯೋಗದ ಪರಮಾವಧಿಯನ್ನು ನಾವು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಳಲ್ಲಿ ಕಾಣುತ್ತಿರುವುದು ಒಂದು ದುರಂತ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತಲೂ ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದು ಸೂಕ್ತ.
ಈ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಅವರು ತಳೆದ ನೀತಿಯ ಬಗ್ಗೆ ಉಲ್ಲೇಖೀಸುವುದು ಸೂಕ್ತ. ಈ ಜಗತ್ತು ನೂರಾರು ಹಿಟ್ಲರ್‌ಗಳನ್ನು ಸೃಷ್ಟಿಸಬಹುದು. ಆದರೆ ಒಬ್ಬ ಗಾಂಧಿಯನ್ನು ಸೃಷ್ಟಿಸಲು ಅಸಾಧ್ಯ. ಸತ್ಯ, ನ್ಯಾಯ, ಧರ್ಮ, ನೀತಿ, ಪ್ರಾಮಾಣಿಕತೆ, ನಿಷ್ಠೆ, ಅಹಿಂಸೆ ಮತ್ತು ಸರಳ ತತ್ವಗಳಿಂದ ಇಡಿ ಜಗತ್ತೇ ಬೆರಗಾಗುವಷ್ಟು ಎತ್ತರಕ್ಕೆ ಬೆಳೆದರು. ಸತ್ಯವು ಶಾಂತಿಗಿಂತ ಹಿರಿದಾದದ್ದು, ಸತ್ಯವೇ ದೇವರು. ಅಹಿಂಸೆಯಿಲ್ಲದೆ ಸತ್ಯ ಸಾಕ್ಷಾತ್ಕಾರವಾಗಲಾರದು. ಸತ್ಯಕ್ಕಾಗಿ ಏನನ್ನಾದರೂ ತ್ಯಾಗಮಾಡಿ ಆದರೆ ಸತ್ಯವನ್ನು ಯಾವ ಕಾರಣಕ್ಕೂ ತ್ಯಾಗ ಮಾಡಬೇಡಿ’ ಎಂಬುದನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನ.
ವಿಶ್ವದ ವಿವಿಧ ದೇಶಗಳು ಗಾಂಧಿ ಸ್ಮಾರಕ ಮತ್ತು ಪ್ರತಿಮೆಗಳನ್ನು ಸ್ಥಾಪಿಸಿವೆಯಲ್ಲದೆ ಪ್ರಮುಖ ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನು ಇಟ್ಟಿವೆ. ನೆದರ್‌ಲ್ಯಾಂಡ್ 29 ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನಿಟ್ಟಿದೆ.
ಅಹಿಂಸಾ ಸಂತನ ಹಿಂಸಾತ್ಮಕ ಅಂತ್ಯದ ಬಗ್ಗೆ ಜಾರ್ಜ್ ಬರ್ನಾಡ್ ಷಾರವರು ಅತ್ಯಂತ ಸದ್ಗುಣಗಳು ಮತ್ತು ಮಾನವೀಯತೆಯನ್ನು ಹೊಂದಿರುವುದೂ ಅಪಾಯಕಾರಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ