Advertisement

ಮರುಬಳಕೆಯಾಗದ ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಜಾಥಾ

09:57 PM Oct 08, 2019 | Lakshmi GovindaRaju |

ಅರಸೀಕೆರೆ: ಮರುಬಳಕೆಯಾಗದ ಪ್ಲಾಸ್ಟಿಕ್‌ ಕೈ ಚೀಲಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಖರೀದಿಸುವುದನ್ನು ಸರ್ಕಾರ ನಿಷೇಧಿಸಿರುವ ಕಾರಣ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು.

Advertisement

ಸ್ವತ್ಛ ಭಾರತ್‌ ಮಿಷನ್‌ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯ ಏರ್ಪಡಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯಮುಕ್ತ ಆಂದೋಲನ ಸ್ವತ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರುಬಳಕೆಯಾಗದ ಪ್ಲಾಸ್ಟಿಕ್‌ ಕೈಚೀಲ ಸೇರಿದಂತೆ ವಿವಿಧ ಪ್ಲಾಸ್ಟಿಕ್‌ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸ್ವತ್ಛ ಭಾರತ್‌ ಆಂದೋಲನದ ಮೂಲಕ ಈ ಬಗ್ಗೆ ಜನರಲ್ಲಿ ಪ್ಲಾಸ್ಟಿಕ್‌ ವಸ್ತುಗಳ ತ್ಯಾಜ್ಯದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಶಿಕ್ಷಾರ್ಹ ಅಪರಾಧ: ನಗರದ ವ್ಯಾಪಾರ ವಾಣಿಜ್ಯ ಕೇಂದ್ರಗಳಲ್ಲಿ ಹೋಟಲ್‌ಗ‌ಳಲ್ಲಿ , ಕಲ್ಯಾಣ ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ ಚೀಲಗಳು ಲೋಟ ಹಾಳೆಗಳು ಇತ್ಯಾದಿ ವಸ್ತುಗಳನ್ನು ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಹೆಚ್ಚಿನ ಮೊತ್ತದ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಕಸ ವಿಲೇವಾರಿ ಸಮಸ್ಯೆ: ಪೌರಾಯುಕ್ತ ಕಾಂತರಾಜ್‌ ಮಾತನಾಡಿ, ನಗರದ ಸ್ವತ್ಛತೆಗೆ ಮಾರಕವಾಗಿರುವ ಪ್ಲಾಸ್ಟಿಕ್‌ ಕೈ ಚೀಲಗಳ ಬಳಕೆಯಿಂದ ಎಲ್ಲೆಡೆ ಕಸದ ರಾಶಿಯನ್ನು ಕಾಣಬಹುದಾಗಿದ್ದು, ನಿರುಪಯುಕ್ತ ಪ್ಲಾಸ್ಟಿಕ್‌ ವಿಲೇವಾರಿ ಮಾಡುವುದೇ ನಗರಸಭೆ ಆಡಳಿತಕ್ಕೆ ಸವಾಲಿನ ಕೆಲಸವಾಗಿದೆ ಎಂದರು.

Advertisement

ಪ್ರತಿನಿತ್ಯ ಸಾವಿರಾದ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನಾವು ವಿಲೇವಾರಿ ಮಾಡಬೇಕಾಗಿದೆ. ಆದ್ದರಿಂದ ಪರಿಸರ ನಾಶಕ್ಕೆ ಕಾರಣವಾಗಿರುವ ಪ್ಲಾಸ್ಟಿಕ್‌ ಕೈ ಚೀಲದ ಬದಲಿಗೆ ಬಟ್ಟೆ ಬ್ಯಾಗ್‌ಬಳಕೆ ಮಾಡುವ ಮೂಲಕ ನಗರಸಭೆ ಆಡಳಿತದೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದರು. ಯಾರಾದರೂ ಕಾನೂನು ಉಲ್ಲಂ ಸಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಮುಂದಾದರೇ ನಿರ್ದಾಕ್ಷ್ಯಣವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಜಾಗೃತಿ ಕಾರ್ಯಕ್ರಮ: ನಗರದ ಪ್ರವಾಸಿ ಮಂದಿರದ ಆವರಣದಿಂದ ಹೊಯ್ಸಳೇಶ್ವರ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ನಡೆದ ಜನಜಾಗೃತಿ ಜಾಥಾವು ಪಿ.ಪಿ.ವೃತ್ತದಲ್ಲಿ ಸ್ವಲ್ಪ ಸಮಯ ರಸ್ತೆ ಬಂದ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ನಂತರ ಶ್ಯಾನುಭೋಗರ ಬೀದಿಯ ಮಾರ್ಗವಾಗಿ ಪುನಃ ಪ್ರವಾಸಿ ಮಂದಿರದ ಆವರಣಕ್ಕೆ ಬಂದು ಮುಕ್ತಾಯಗೊಳಿಸಲಾಯಿತು.

ಜನಜಾಗೃತಿ ಜಾಥಾದಲ್ಲಿ ತಾ.ಪಂ.ಇ.ಓ.ಎಸ್‌.ಪಿ,ನಟರಾಜ್‌, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ನಗರಸಭೆ ವ್ಯವಸ್ಥಾಪಕ ಜೆ.ಮಹಾತ್ಮ ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರಸ್ವಾಮಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next