ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಐದು ದಿನಗಳ ನವಜಾತ ಶಿಶು ಬಲಿಯಾದ ಘಟನೆ ಶ್ರೀರಾಮಪುರ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದೆ. ಸುಮಿತ್ರಾ ಎಂಬುವವರಿಗೆ ಜ.24ರಂದು ಶ್ರೀರಾಮಪುರ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು.
ಆರೋಗ್ಯವಾಗಿದ್ದ ಮಗುವಿನ ಮೈಬಣ್ಣ ಜ.26ರಂದು ಹಳದಿ ಬಣ್ಣಕ್ಕೆ ತಿರುಗಿದ್ದು, ಆತಂಕಗೊಂಡ ಪೋಷಕರು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಆದರೆ, ನಿರ್ಲಕ್ಷ್ಯ ತೋರಿರುವ ವೈದ್ಯರು, ಏನೂ ಆಗಿಲ್ಲ ಎಂದು ಔಷಧ ನೀಡಿದ್ದಾರೆ. ಆ ನಂತರವೂ ಮಗು ಗುಣವಾಗದ ಹಿನ್ನೆಲೆಯಲ್ಲಿ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ವೆಂಟಿಲೇಟರ್ ಅಳವಡಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಆದರೆ, ಅಂದು ರಾತ್ರಿ 8 ಗಂಟೆಯಿಂದ ವಿದ್ಯುತ್ ವ್ಯತ್ಯಯವಾಗಿದೆ. ಜರೇಟರ್ ಸಹ ಹಾಳಾಗಿದ್ದರಿಂದ ವೆಂಟಿಲೇಟರ್ ಕಾರ್ಯನಿರ್ವಹಿಸಿಲ್ಲ. ಪರಿಣಾಮ ಶನಿವಾರ ಬೆಳಗ್ಗೆ 5 ಗಂಟೆಗೆ ಮಗುವಿನ ಬಾಯಲ್ಲಿ ನೊರೆ ಬಂದಿದ್ದು, ಪೋಷಕರು ಕೂಡಲೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ರಕ್ತ ಪರೀಕ್ಷೆ ನಡೆಸಿರುವ ವೈದ್ಯರು ಮಗುವಿಗೆ ಜಾಂಡಿಸ್ ಇರುವುದಾಗಿ ತಿಳಿಸಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.
ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆದೊಯ್ದರೂ ಮಗು ಬದುಕಲಿಲ್ಲ. “ಮಗುವಿಗೆ ಆಗುತ್ತಿರುವ ತೊಂದರೆಯನ್ನು ವೈದ್ಯರಿಗೆ ಹಲವು ಬಾರಿ ತಿಳಿಸಿದರೂ, ನಿರ್ಲಕ್ಷ್ಯ ತೋರಿದರು. ಅಂದು ರಾತ್ರಿ ವೈದ್ಯರು ಮಗುವನ್ನು ಪರೀಕ್ಷಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರೆ ಮಗು ಉಳಿಯುತ್ತಿತ್ತು,’ ಎಂದು ತಂದೆ ಸಂತೋಷ್ ಕಣ್ಣೀರಿಟ್ಟರು.
ಈ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮಪುರ ಪಾಲಿಕೆಯ ಆಸ್ಪತ್ರೆಯ ವೈದ್ಯೆ ಫಾತೀಮಾ, “ತಾಯಿಯ ಗರ್ಭದಲ್ಲಿರುವಾಗಲೆ ಮಗುವಿಗೆ ಕೆಲ ಸಮಸ್ಯೆಗಳಿದ್ದವು, ಇದರಿಂದಲೇ ಮಗು ಮೃತಪಟ್ಟಿದೆ ಎಂದು ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ,’ ಎಂದು ಸಮಜಾಯಿಷಿ ನೀಡಿದರು.
ಪಾಲಿಕೆಗೆ ಬಾಡಿಗೆ ಮುಖ್ಯ, ಜನರ ಜೀವವಲ್ಲ: “ಕೋಟ್ಯಂತರ ರೂ. ವೆಚ್ಚದಲ್ಲಿ ಶ್ರೀರಾಂಪುರದಲ್ಲೇ ಆಸ್ಪತ್ರೆಗೆಂದು ಅಂಬೇಡ್ಕರ್ ಡೇ ಕೇರ್ ಕಟ್ಟಡ ನಿರ್ಮಿಸಲಾಗಿದೆ. ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಹಲವಾರು ಬಾರಿ ಪತ್ರ ನೀಡಲಾಗಿದೆ.
ಆದರೆ, ಪಾಲಿಕೆ ಅಧಿಕಾರಿಗಳಿಗೆ ಜನರ ಪ್ರಾಣಕ್ಕಿಂತ, ಕಟ್ಟಡದಿಂದ ಬರುವ 7 ಸಾವಿರ ರೂ. ಬಾಡಿಗೆಯೇ ಮುಖ್ಯವಾಗಿದ್ದರಿಂದ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ,’ ಸ್ಥಳೀಯ ಕಾರ್ಪೊರೇಟರ್ ಕುಮಾರಿ ಪಳನಿಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬವೈದ್ಯರಷ್ಟೇ ಇದ್ದು, 24 ಗಂಟೆ ಕಾರ್ಯನಿರ್ವಹಣೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸುವಂತೆ ಪತ್ರ ಬರೆದರೂ ಅಧಿಕಾರಿಗಳು ಸ್ಪಂದಿಸಿಲ್ಲ,’ ಎಂದು ದೂರಿದ್ದಾರೆ.