Advertisement
ಈಗಾಗಲೇ ಅರಿವಾಗಿರುವಂತೆ ಎಲ್ಲಿಂದ ಆರಂಭಿಸಿರುತ್ತೇವೆಯೋ ಅಲ್ಲಿಗೇ ವಾಪಸ್ ಬರುವುದೇ ಈ ಸುತ್ತು ಹೊಡೆಯುವಿಕೆ. ಜನವರಿ ಒಂದರಿಂದ ಆರಂಭಿಸಿದ ಪಯಣ ಡಿಸೆಂಬರ್ 31ಕ್ಕೆ ಮುಗಿದ ಮೇಲೆ ಮತ್ತೆ ಬಂದು ನಿಲ್ಲುವುದು ಜನವರಿ ಒಂದಕ್ಕೆ. ಜನವರಿ ಎಂಬ ಹೆಸರಲ್ಲೂ ಬದಲಾವಣೆ ಇಲ್ಲ. ಒಂದನೆಯ ತಾರೀಖು ಎಂಬುದರಲ್ಲೂ ಬದಲಾವಣೆ ಇಲ್ಲ. ಬದಲಾಗಿದ್ದು ವರುಷದ ಸಂಖ್ಯೆಯೊಂದೇ ಅಂತ ಅನ್ನಿಸಿದರೂ ಅದಲ್ಲ. ವರ್ಷದ ಸಂಖ್ಯೆ, ನಮ್ಮ ವಯಸ್ಸು, ಭುವಿಯ ವಯಸ್ಸು ಹೀಗೆಯೇ ನಾನಾ ವಿಷಯಗಳು ಒಂದು ವರ್ಷ ಆಯುಷ್ಯ ವೃದ್ಧಿಸಿಕೊಂಡು ಸಾಗಿರುತ್ತದೆ.
Related Articles
Advertisement
ಅಂಕಿ-ಅಂಶಕ್ಕೂ ಯಾವುದೇ ಕ್ರೀಡೆಗೂ ಬಿಡದ ನಂಟು. ಇಂಥಾ ವರ್ಷದಲ್ಲಿ ಇಂತಹ ಆಟಗಾರನ ಸಾಧನೆ ಹೇಗಿತ್ತು ಎಂಬುದು ಎಲ್ಲ ಕ್ರೀಡೆಗಳಿಗೆ ಸಲ್ಲುತ್ತದೆ. ಇಂಥಾ ಸೀಸನ್’ನಲ್ಲಿ ಇಂಥವರ ಆಟ ಹೀಗಿತ್ತು ಎಂಬುದರ ಮೇಲೆ ಸಾಧನೆಗಳ ಹೋಲಿಕೆ ಮಾಡಿ ಸಾಧನೆ ಮೇಲೇರುತ್ತಿದೆಯೇ ಅಥವಾ ಕೆಳಮುಖವಾಗುತ್ತಿದೆಯೇ ಎಂಬುದನ್ನು ನೋಡಲಾಗುತ್ತದೆ. ಮುಂದಿನ ಸೀಸನ್‌ಗಳಿಗೆ ಆ ಆಟಗಾರ ಅಥವಾ ಆಟಗಾರ್ತಿ ಸಲ್ಲುತ್ತಾರೋ ಇಲ್ಲವೋ ಎಂಬುದೂ ನಿರ್ಧಾರವಾಗುತ್ತದೆ.
ಜತೆಗೆ ವರ್ಷ ಕಳೆದಂತೆ ಆ ಕಳೆದ ವರ್ಷದಲ್ಲಿನ ಉತ್ತಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಕ್ರಿಕೆಟ್ ಜಗತ್ತಿನ ವಿಷಯವನ್ನೇ ತೆಗೆದುಕೊಂಡರೆ, ಇಂದಿನ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಬೆಲೆ ಖರೀದಿಸಲಾಗುವ ಆಟಗಾರರ ದರಕ್ಕೂ ಈ ಪಟ್ಟಿ ಸಹಾಯ ಮಾಡುತ್ತದೆ ಎಂಬುದು ಸುಳ್ಳಲ್ಲ. ಜತೆಗೆ ಪ್ರತೀ ವರ್ಷದ ಸಾಧನೆಯು ಆ ಹಿಂದಿನ ವರ್ಷಗಳ ಸಾಧನೆಗೆ ಅಂಕಗಳ ರೂಪದಲ್ಲಿ ಸೇರಿಕೊಂಡು ಅಲ್ಲೊಂದು ಸಾಧನೆಯ ಮೂಟೆಯೇ ರೂಪಗೊಳ್ಳುತ್ತದೆ.
ಇವೆರಡೇ ಉದಾಹರಣೆಗಳನ್ನು ನೋಡಿದರೆ, ಇಲ್ಲೊಂದು ಗಾಢವಾದ ಸೂಕ್ಷ್ಮ ಅಡಗಿದೆ. ಇಷ್ಟೆಲ್ಲ ವಿಚಾರಗಳನ್ನು ಅರಿತು ಜೀರ್ಣಿಸಿಕೊಂಡ ಮನಕ್ಕೆ, ಇವುಗಳಿಂದ ಏನು ಉಪಯೋಗ ಎಂದು ಹಿಂದಿರುಗಿ ನೋಡಿದರೆ ಬಹುಶ: ಒಬ್ಬ ಶ್ರೀಸಾಮಾನ್ಯನಿಗೆ ಏನೂ ಉಪಯೋಗವಾಗಲಾರದು. ಆದರೆ ನಮ್ಮ ಸುತ್ತಲಿರುವ ವಿಚಾರಗಳು ಅನೇಕಾನೇಕ. ಸ್ವಾದಿಸುವುದೆಲ್ಲ ಉಪಯೋಗಕ್ಕೆ ಬರಲೇಬೇಕಿಲ್ಲ ಅಲ್ಲವೇ? ಹಾದಿಯಲ್ಲಿ ಸಾಗುವಾಗ ಒಂದು ಬೇಕರಿಯಿಂದ ಸುವಾಸನೆ ಮೂಗಿಗೆ ಬಡಿದರೂ, ಅಲ್ಲಿಗೆ ಹೋಗಿ ಖರೀದಿಸಲಿಲ್ಲ ಎಂದರೆ ಆ ಸುವಾಸನೆ ಹರಡಿದ್ದೇ ದಂಡ ಎನ್ನಲಾದೀತೆ?
ಹೊಸ ವರ್ಷ ಎಂದಾಗ ಹಳತನ್ನು ನೆನಪಿಸಿಕೊಳ್ಳುವ ಒಂದು ಹಂತದಲ್ಲಿ ಮನೆಯಾಚಿನ ವಿಷಯಗಳೇ ಹಲವು ಬಾರಿ ಹೆಚ್ಚು. ಇಂದಿನ ಜೀವನದಲ್ಲಿ ಸಾಮಾಜಿಕ ತಾಣ ಬಲಿಷ್ಠವಾಗಿರೋದು ಕೂಡಾ ಇದಕ್ಕೆ ಕಾರಣ. ಮೂವತ್ತೂಂದನೆಯ ತಾರೀಖೀನಂದು ಟಿವಿಯ ಮುಂದೆ ಕೂತರೆ ಕಳೆಯುತ್ತಿರುವ ವರ್ಷದ ಹಿನ್ನೋಟ ನೋಡಲೇನೋ ಚೆನ್ನ ಮತ್ತು ಮೆಲುಕು ಹಾಕುವಂತೆಯೂ ಇರುತ್ತದೆ. ಬೇಸರ ಮೂಡಿಸುವುದು ಎಂದರೆ ನಾವು ಯಾರನ್ನು ಕಳೆದುಕೊಂಡೆವು ಎಂಬುದು. ಎದುರಿಗೆ ಕಂಡಿಲ್ಲದಿದ್ದರೂ, ಅವರೊಡನೆ ನಮ್ಮ ಸಂಬಂಧವೇ ಇಲ್ಲದಿದ್ದರೂ ನಂಟು ಮಾತ್ರ ಬಲಿಷ್ಠ. ಸೆಲೆಬ್ರಿಟಿ ಎನಿಸಿಕೊಂಡವರ ಮಕ್ಕಳ ಜನನ, ಸೆಲೆಬ್ರಿಟಿ ಮದುವೆಗಳು, ವಿಚ್ಛೇದನ, ಮನೆಯ ಕದನಗಳು, ವಿವಾಹೇತರ ಸಂಬಂಧಗಳು, ಅವರುಗಳು ಮಾಡಿದ ವಂಚನೆ, ಹಲವೊಮ್ಮೆ ಸಮಾಜಸೇವೆಗಳು ಹೀಗೆ ಎಲ್ಲವೂ ಹಿನ್ನೋಟ.
ವರ್ಷದುದ್ದಕ್ಕೂ ಜಗತ್ತಿನಾದ್ಯಂತ ನಡೆದ ಅನೇಕ ಘಟನಾವಳಿಗಳ ಸಂತೆಯೇ ಈ ಹಿನ್ನೋಟ ಕೂಡ. ಯಾವ ದೇಶಕ್ಕೆ ಯಾರು ಪ್ರಧಾನಿಯಾಗಿದ್ದು, ಯಾರು ಉರುಳಿದ್ದು, ಯಾವ ದೇಶಗಳ ನಡುವೆ ಯುದ್ಧವಾಗಿದ್ದು, ಯಾರ ನಡುವೆ ಈಗ ಚಕಮಕಿ ನಡೆದಿದೆ, ಉಗ್ರರ ದಾಳಿ, ಉಗ್ರರ ಹತ್ಯೆ, ಯಾವ ಪಕ್ಷ ಯಾರನ್ನು ಏನಂದರು ಇತ್ಯಾದಿಗಳು ಹಿನ್ನೋಟ ಸಂತೆಯ ಸಾಮಾಗ್ರಿ. ಒಂದರ್ಥದಲ್ಲಿ ಹೇಳುವುದಾದರೆ ವರ್ಷವಿಡೀ ದಿನನಿತ್ಯದಲ್ಲಿ ನಡೆವ ವಿದ್ಯಮಾನಗಳನ್ನು ಮೆಲುಕು ಹಾಕುವಂತೆ ಮಾಡುವುದೇ ಈ ಹಿನ್ನೋಟ.
ಇವೆಲ್ಲವೂ ಜಗತ್ತಿನ ವಿದ್ಯಮಾನ ನಿಜ, ಆದರೆ ಸುಮ್ಮನೆ ಕೂತು ಆಲೋಚಿಸಿದಾಗ, ಆ ವರ್ಷದಲ್ಲಿ ಮನೆಯಲ್ಲಿ ನಡೆದ ವಿದ್ಯಮಾನಗಳ ಹಿನ್ನೋಟ ಮನದಲ್ಲಿ ಮೂಡಿದೆಯೇ? ನಿಜ, ನಮ್ಮ ಮನೆಯ ವಿಚಾರಗಳು ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಆದರೆ ಮನಸ್ಸಿನಲ್ಲಿ, ಹೃದಯದಲ್ಲಂತೂ ಸ್ಥಾಪನೆಯಾಗಿರುತ್ತದೆ ಅಲ್ಲವೇ? ಏನಂಥಾ ಘಟನೆಗಳು? ಒಂದು ಹುಟ್ಟು, ಒಂದು ಸಾವು, ಮದುವೆ, ಮುಂಜಿ, ಗೃಹಪ್ರವೇಶ, ಬಿಸಿನೆಸ್ ಹುಟ್ಟು ಅಥವಾ ಮುಳುಗು, ವಾಹನ ಖರೀದಿ ಅಥವಾ ಅಪಘಾತ, ಜೀವನದಲ್ಲಿ ಬಂದ ಹೊಸ ಪರಿಚಯ ಅಥವಾ ಬ್ರೇಕಪ್ ಹೀಗೆ ಯಾವುದೂ ಆಗಬಹುದು.
ಕಳೆದದ್ದಂತೂ ವಾಪಸ್ ಬರೋದಿಲ್ಲ ಎಂಬುದು ಎಲ್ಲರಿಗೂ ಅರಿವಿರುವ ವಿಷಯ. ಮೈ ಅಡ್ಡಾದಿಡ್ಡಿ ಬೆಳೆದು ರೂಪ ಹಾಳಾಗಿದ್ದು, ಆರೋಗ್ಯ ಹಾಳಾಗಿದ್ದು ಇತ್ಯಾದಿಗಳು ಉದಾಹರಣೆ ಎಂದುಕೊಂಡರೆ ಜೀವನ ಶೈಲಿ ಬದಲಾಗಬೇಕು ಎಂಬುದೇ ಮುನ್ನೋಟ. ಅದನ್ನು ಸಂಕಲ್ಪ ಅಥವಾ ರೆಸಲ್ಯೂಷನ್ ಎಂದೂ ಕರೆಯುತ್ತಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬುದು ಇದರ ಮೂಲ ಎನ್ನುವವರೂ ಉಂಟು.
ಅದೇನೇ ಇರಲಿ, ಜಗತ್ತಿನ ವಿದ್ಯಮಾನಗಳನ್ನು ನೋಡಿ ಅದು ಮೆಲುಕು ಹಾಕಲು ಮಾತ್ರ ಯೋಗ್ಯ ಆದರೆ ನನ್ನದೇ ಜೀವನ ಸುಧಾರಿಸಬೇಕು ಎಂದರೆ ಆ ಬದಲಾವಣೆ ತನ್ನಲ್ಲೇ ಆಗಬೇಕು ಎಂಬ ಅರಿವು ರೆಸಲ್ಯೂಷನ್ ಆಗಿ ಪರಿವರ್ತನೆ ಆದಲ್ಲಿ, ಅದು ಬಹಳಷ್ಟು ಕಾಲ ಉಳಿಯುತ್ತದೆ. ನಾಳೆಯಿಂದ ಎಲ್ಲವೂ ಬದಲಾಗಬೇಕು, ಎಲ್ಲವನ್ನೂ ಬದಲಿಸಿಬಿಡುತ್ತೇನೆ ಎಂಬ ನಿಲುವು ಶೋಕಿಯೇ ಆದರೆ ಜನವರಿ ಎರಡನೆಯ ವಾರಕ್ಕೆ ಎಲ್ಲ ಸಂಕಲ್ಪಗಳೂ ಮಕಾಡೆ ಮಲಗುತ್ತದೆ.
*ಶ್ರೀನಾಥ್ ಭಲ್ಲೆ