ವರ್ಷ, ವರ್ಷ ಕಳೆಯುತ್ತಿದೆ. ವ್ಯಕ್ತಿ ಹಳೇ ನೆನಪುಗಳನ್ನು ಹೊತ್ತು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಾನೆ. ಆತನ ಗುಣ, ಸ್ವಭಾವಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಿಲ್ಲಾ. ವ್ಯಕ್ತಿ ಹೊಸ ಬಟ್ಟೆ ಹಾಕಿದ ಮಾತ್ರಕ್ಕೆ ಮನುಷ್ಯನೇ ಬದಲಾಗುವುದಿಲ್ಲ. ಎರಡು ದಿನದ ಖುಷಿ, ಮೋಜಿಗೆ ಹೊಸ ವರ್ಷದ ಹೆಸರು ಕೊಟ್ಟು ಸಂಭ್ರಮಿಸುವುದೇಕೆ ?
ವ್ಯಕ್ತಿ ತನ್ನಲಿರುವ ಕೆಟ್ಟವಿಚಾರಗಳನ್ನು ಬಿಟ್ಟು ಮುಂದೆ ಸಾಗಿದರೆ ಅವನಿಗೆ ಪ್ರತಿ ದಿನವೂ ಹೊಸ ದಿನವೇ, ಹೊಸ ವರ್ಷವೇ.
ಕೆಲವರಿಗೆ “ಈ ವರ್ಷ ಸಾಕಾಗಿ ಹೋಯ್ತು, ಈ ತರದ ವರ್ಷ ಮತ್ತೆ ಯಾವತ್ತು ಬರುವುದು ಬೇಡ ” ಎನ್ನುವ ಮಾತಾದರೆ, ಇನ್ನು ಕೆಲವರಿಗೆ “ಎಷ್ಟೊಂದು ಖುಷಿಕೊಟ್ಟ ವರ್ಷವಿದು, ಇದೇ ತರಹ ಮುಂದಿನ ವರ್ಷವೂ ಕೂಡ ಸುಖವಾಗಿರಲಿ” ಎನ್ನುತ್ತಾರೆ. ಇನ್ನು ಕೆಲವರು ವರ್ಷದ ಮೇಲೆ ಪಟ್ಟ ಅನುಭವ. ಎಲ್ಲವೂ ಸರಿ. ಒಬ್ಬರದು ಒಂದೊಂದು ರೀತಿಯ ಅನುಭವಗಳು. ಹಳೆಯ ವರ್ಷದಲ್ಲಿ ಹುಟ್ಟು-ಸಾವು, ನೋವು-ನಲಿವು, ಸಂತೋಷ, ಕುತೂಹಲ, ಹೀಗೆ ಎಲ್ಲಾ ರೀತಿಯಲ್ಲೂ ಒಬ್ಬ ವ್ಯಕ್ತಿಗೆ ಸಿಕ್ಕಂತಹ ಭಾವನೆಯಲ್ಲಿ, ಯಾವ ವಿಚಾರ ಎಷ್ಟು ಮಟ್ಟದಲ್ಲಿ ತಾನು ಪಡೆದುಕೊಂಡೆ ಎಂಬುದನ್ನು ಆತನು ಅನುಭವಿಸಿದ ಆಧಾರದ ಮೇಲೆ ವ್ಯಕ್ತಿ ಆ ವರ್ಷವನ್ನು ಅಳೆಯುತ್ತಾನೆ.
ಪ್ರತಿ ವರ್ಷವೂ ಕೂಡ ಪರೀಕ್ಷೆ ಇದ್ದಂತೆ, ಸವಾಲುಗಳಂತೆ ನಮ್ಮೆದುರು ಬಂದು ನಿಲ್ಲುತ್ತದೆ. ಹೆದರಿ ಹಿಂದಕ್ಕೆ ನಡೆಯುವರು ಕೆಲವರು, ಧೈರ್ಯದಿಂದ ಮುನ್ನುಗ್ಗಿ ಜಯಶಾಲಿಗಳಾದವರು ಇನ್ನೂ ಕೆಲವರು. ಪರೀಕ್ಷೆಯಲ್ಲಿ ಪಾಸು -ಫೇಲು ಎನ್ನುವುದಕ್ಕಿಂತ, ಪಟ್ಟಂತಹ ಪರಿಶ್ರಮ ಮೇಲು. ಹಾಗೆಯೇ ಇರುವ – ಬರುವ ವರ್ಷದಲ್ಲಿ ನಾವು ಹೇಗೆ ಜೀವನವನ್ನು ಸಾಗಿಸುತ್ತೇವೆ ಎನ್ನುವುದು ಮುಖ್ಯ.
ಹಳೆಯ ವರ್ಷದಲ್ಲಿ ಕಲಿತ ಎಲ್ಲಾ ಅನುಭವದ ಪಾಠಗಳನ್ನು ತಲೆಯಲ್ಲಿಟ್ಟು, ಹೊಸ ವರ್ಷದಲ್ಲಿ ಎಚ್ಚರಿಕೆ ವಹಿಸಿ, ಪರಿಶ್ರಮ ಹಾಗೂ ಬುದ್ಧಿಶಕ್ತಿಯಿಂದ ನಮ್ಮನ್ನು ನಾವು ಹೊಸ ವರ್ಷಕ್ಕೆ ತಕ್ಕಂತೆ, ಹೊಸ ವ್ಯಕ್ತಿಯಾಗಿ ಬದಲಾಯಿಸಿಕೊಂಡು ಮುನ್ನಡೆಯಲು ಸಾಧ್ಯ.
ಹೊಸ ವರ್ಷದ ರೆಸಲ್ಯೂಷನ್ ಅನ್ನುವ ಪಟ್ಟಿಗೆ ಒಂದು ದಿನದ ದಿನಾಂಕ, ಮೂರು ಸಾಲುಗಳು, ಎರಡು ಗೆರೆ ಸಾಕಾಗದು. ಪಟ್ಟಿಯಲ್ಲಿ ಸೇರಿದ ಎಲ್ಲಾ ಹಾಳೆಗಳನ್ನು ಸೇರಿಸಿ ಅಕ್ಷರಗಳೊಟ್ಟಿಗೆ, ಸುಂದರ ಚಿತ್ರವನ್ನು ಚಿತ್ರಿಸುವುದು ನಮ್ಮದೇ ಕೆಲಸ. ಅದು ಕೇವಲ ಎರಡು ಪುಟಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಕಲಿತ ಪುಸ್ತಕವಾಗಬೇಕು. ಆಗ ಮಾತ್ರ ಕಲಿತ ಪಾಠಕ್ಕೆ, ಬರೆದ ವ್ಯಕ್ತಿಗೆ ಗೌರವ ಸಿಗುವುದು.
-ವಿದ್ಯಾ ಗಾವಂಕರ್
ಶಿರಸಿ