Advertisement

ಆರ್ಥಿಕ ಹೊರೆ ತಗ್ಗಿಸುವ ಹೊಸ ಯೋಜನೆ

12:48 AM May 09, 2019 | Lakshmi GovindaRaj |

ಬೆಂಗಳೂರು: ಆರ್ಥಿಕವಾಗಿ ಹೊರೆಯಾಗದಂತೆ, ಬಾಹ್ಯಾಕಾಶ ಯೋಜನಾ ವೆಚ್ಚ ತಗ್ಗಿಸಿ, ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಹೊಸ ಯೋಜನೆಗಳನ್ನು ಕೈಗೊಳ್ಳುವ ಪ್ರಯತ್ನವೂ ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

Advertisement

ಬೊಮ್ಮನಹಳ್ಳಿಯ ಆಕ್ಸ್‌ಫ‌ರ್ಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಜ್ಞಾನ, ಎಂಜಿನಿಯರಿಂಗ್‌ ಹಾಗೂ ವಾಣಿಜ್ಯಶಾಸ್ತ್ರ ಪ್ರಾಜೆಥಾನ್‌-2019ಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿದ್ದು, ಬಾಹ್ಯಾಕಾಶ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉಪಗ್ರಹಗಳಿಂದಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಹವಾಮಾನ ಕುರಿತ ನಿಖರ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದ ಮುಂದಾಗಬಹುದಾದ ಹವಾಮಾನ ವೈಪರಿತ್ಯಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ. ಅಪಾರ ಪ್ರಮಾಣದ ಸಾವು ನೋವು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಹೇಳಿದರು.

ಇದುವರೆಗೂ ಮಾನವ ರಹಿತ ಬಾಹ್ಯಾಕಾಶ ಯೋಜನೆಗಳನ್ನು ನಡೆಸಿ ಯಶಸ್ವಿಯಾಗಿರುವ ಇಸ್ರೋ, ಸದ್ಯದಲ್ಲೇ ಮಾನವ ಸಹಿತ ಉಪಗ್ರಹ ಉಡಾವಣೆಯ ಸಿದ್ಧತೆ ಕೈಗೊಂಡಿದೆ. ನಮ್ಮಲ್ಲಿ 50 ಉಪಗ್ರಹಗಳಿದ್ದು, ಕನಿಷ್ಟ ನೂರು ಉಪಗ್ರಹಗಳ ಅವಶ್ಯಕತೆ ಇದೆ. ಬಾಹ್ಯಾಕಾಶ ಯೋಜನೆಗಳ ಅನುಷ್ಠಾನದ ಬೆಳವಣಿಗೆ ನಿಂತಿಲ್ಲ, ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವೇಗ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದರು.

Advertisement

ಕಾರ್ಯಕ್ರಮದ ಸಂಚಾಲಕ ಡಾ.ಎಂ.ಎಸ್‌.ಶಶಿಧರ್‌ ಮಾತನಾಡಿ, ಕೃಷಿ, ಆರೋಗ್ಯ, ಶಿಕ್ಷಣ, ಸೈನ್ಯ ಹಾಗೂ ರೋಬೋ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಭಾಗಗಳಿಂದ 200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ವಿವರ ನೀಡಿದರು. ಶಿಕ್ಷಣ ಸಂಸ್ಥೆ ನಿರ್ದೇಶಕ ಅಮರನಾಥ್‌, ಪ್ರಾಂಶುಪಾಲ ಡಾ.ಪ್ರವೀಣ್‌ಗೌಡ, ಕಾರ್ಯಕ್ರಮದ ಸಹ ಸಂಚಾಲಕ ಡಾ.ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next