Advertisement

ಸುಗಮ ಸಂಚಾರಕ್ಕೆ ಹೊಸ ಪ್ಲಾನ್‌

09:11 AM Jun 07, 2019 | Team Udayavani |

ಗದಗ: ದಿನಕಳೆದಂತೆ ಅವಳಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಅಡ್ಡಾದಿಡ್ಡಿ ವಾಹನಗಳ ಚಲಾವಣೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಕೈಗೊಳ್ಳಬೇಕಾದ ಉಪಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಅಧ್ಯಯನ ಶುರುಮಾಡಿದ್ದಾರೆ.

Advertisement

ಜಿಲ್ಲಾ ಕೇಂದ್ರವಾಗಿರುವ ಗದಗ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಆದರೆ, ರಸ್ತೆಗಳ ಅಗಲೀಕರಣವಾಗದೇ ಇಕ್ಕಟ್ಟಿನ ರಸ್ತೆಗಳಲ್ಲೇ ವಾಹನಗಳ ಚಾಲನೆಗೆ ಸವಾರರು ಪ್ರಯಾಸ ಪಡುವಂತಾಗಿದೆ. ಅದರೊಂದಿಗೆ ಮುಖ್ಯ ರಸ್ತೆಗಳ ಎರಡೂ ಬದಿ ಫುಟ್ಪಾತ್‌ಗಳನ್ನು ತಳ್ಳುಗಾಡಿಗಳು, ಬೀದಿ ಬದಿ ವ್ಯಾಪಾರಸ್ಥರು ಅತಿಕ್ರಮಿಸಿದ್ದರಿಂದ ಪಾದಚಾರಿಗಳು ರಸ್ತೆಗಿಳಿಯುತ್ತಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಅದರಲ್ಲೂ ನಗರದ ಹೃದಯ ಭಾಗದಲ್ಲಿರುವ ರೋಟರಿ ಸರ್ಕಲ್ ಹಾಗೂ ತೋಂಟದಾರ್ಯ ಮಠದ ಹೆಬ್ಟಾಗಿಲು, ಗಾಂಧಿ ಸರ್ಕಲ್ನಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಗದಗದಿಂದ ರೋಣ, ಗಜೇಂದ್ರಗಡ, ನರೇಗಲ್ ಸೇರಿದಂತೆ ಬೆಟಗೇರಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್‌ಗಳು, ಟಂಟಂ ಆಟೋಗಳನ್ನು ಬೇಕಾಬಿಟ್ಟಿ ಯಾಗಿ ರಸ್ತೆ ಮಧ್ಯೆದಲ್ಲೇ ನಿಲ್ಲಿಸಲಾಗುತ್ತಿದೆ. ರೋಟರಿ ಸರ್ಕಲ್ ಮತ್ತು ಮಹಾತ್ಮಗಾಂಧಿ ವೃತ್ತದಲ್ಲಿ ನೋಪಾರ್ಕಿಂಗ್‌ಎಂದು ಗುರುತಿಸಿರುವ ಸ್ಥಳದಲ್ಲೇ ಸಾರಿಗೆ ಬಸ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಉಭಯ ವೃತ್ತಗಳಲ್ಲಿ ಸಂಚಾರ ಸಮಸ್ಯೆಗೆ ಕಾರಣವಾಗುತ್ತಿದೆ. ಮೊದಲೇ ಇಕ್ಕಟ್ಟಾಗಿರುವ ರಸ್ತೆಗಳಲ್ಲಿ ಸಾರಿಗೆ ಬಸ್‌ ಚಾಲಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳೂ ವ್ಯಕ್ತವಾಗುತ್ತಿವೆ. ಪ್ರಮುಖ ವೃತ್ತಗಳಿಂದ ಸ್ವಲ್ಪ ದೂರದಲ್ಲಿ ಬಸ್‌ಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಮನವಿಗೂ ಬಸ್‌ ಚಾಲಕರು ಸ್ಪಂದಿಸುತ್ತಿಲ್ಲ. ಕೆಲವೊಮ್ಮೆ ಸರ್ಕಲ್ನಿಂದ ದೂರ ಬಸ್‌ ನಿಲ್ಲಿಸಿದರೆ, ನಮಗೆ ಕಲೆಕ್ಷನ್‌ ಹೇಗಾಗುತ್ತದೆ ಎಂದು ಚಾಲಕ, ನಿರ್ವಾಹಕರು ತಮ್ಮೊಂದಿಗೇ ವಾಗ್ವಾದಕ್ಕಿಳಿಯುತ್ತಾರೆ. ಹೀಗಾಗಿ ಕೆಲವೊಮ್ಮೆ ಬಸ್‌ ಚಾಲಕರಿಗೆ ನೋಪಾರ್ಕಿಂಗ್‌ ಪಾರ್ಕಿಂಗ್‌ಗಾಗಿ 100 ದಂಡ ವಿಧಿಸಲಾಗುತ್ತದೆ. ಇದರಿಂದ ಟಂಟಂ ಆಟೋಗಳ ಆವಳಿ ಬಗ್ಗೆ ಹೇಳುವಂತಿಲ್ಲ ಎಂಬುದು ಹೆಸರು ಹೇಳಲಿಚ್ಛಿಸದ ಟ್ರಾಫಿಕ್ಸ್‌ ಪೊಲೀಸರ ಅಳಲು.

ಸುಗಮ ಸಂಚಾರಕ್ಕೆ ಹೊಸ ಪ್ಲಾನ್‌:

ನಗರದ ಎಲ್ಲ ಅವ್ಯವಸ್ಥೆ ಸರಿಪಡಿಸಲು ಈಗಾಗಲೇ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ಹೊಸ ಹೊಸ ಉಪಾಯ ಹುಡುಕುತ್ತಿದ್ದಾರೆ. ಅದರ ಭಾಗವಾಗಿ ಗುರುವಾರ ನಗರದ ರೋಟರಿ ಸರ್ಕಲ್, ತೋಂಟದಾರ್ಯ ಮಠದ ಹೆಬ್ಟಾಗಿಲು, ಗ್ರೇನ್‌ ಮಾರ್ಕೆಟ್ ಭಾಗಕ್ಕೆ ಭೇಟಿ ನೀಡಿದ ಎಸ್‌ಪಿ ಶ್ರೀನಾಥ ಜೋಶಿ ಹಾಗೂ ನಗರಸಭೆ ಮುಖ್ಯ ಅಭಿಯಂತರ ಎಲ್.ಜಿ. ಪತ್ತಾರ ಜಂಟಿಯಾಗಿ ಸಂಚಾರ ಸಮಸ್ಯೆ ಅಧ್ಯಯನ ನಡೆಸಿದರು.

Advertisement

ತೋಂಟದಾರ್ಯ ಮಠದ ಹೆಬ್ಟಾಗಿಲಿನಿಂದ ಕೆಸಿ ರಸ್ತೆ ಪ್ರವೇಶಿಸುವ ಮಾರ್ಗ ರದ್ದುಗೊಳಿಸಿ ಪಾಲಾ ಬದಾಮಿ ರಸ್ತೆಯಿಂದ ಮೊದಲ 50 ಮೀಟರ್‌ ವರೆಗೆ ಪಾರ್ಕಿಂಗ್‌ ಏರಿಯಾ ಮಾಡಬೇಕು. ಈ ಮಾರ್ಗಕ್ಕೆ ಪರ್ಯಾಯವಾಗಿರುವ ಹೆಡ್‌ ಪೋಸ್ಟ್‌ ಮಾರ್ಗವಾಗಿ ಕೆಸಿ ರಾಣಿ ರಸ್ತೆಗೆ ಹಾಗೂ ಕೆಸಿ ರಾಣಿ ರಸ್ತೆಯಿಂದ ಹೊಸ ಕಾಮತ್‌ ಹೋಟೆಲ್ ಮುಂಭಾಗಕ್ಕೆ ಏಕಮುಖ ಚಾಲನೆಯಲ್ಲಿ ಸಂಚಾರ ವ್ಯವಸ್ಥೆ ಮಾಡಬೇಕು. ಇಲ್ಲಿನ ಹಳೇ ಬಸ್‌ ನಿಲ್ದಾಣ ಸಮೀಪದ ವೃತ್ತದಿಂದ ಕೆ.ಎಚ್.ಪಾಟೀಲ ವೃತ್ತದವರೆಗೆ ಒಂದು ಬದಿಯಲ್ಲಿ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸುವುದು, ಸುತ್ತಲಿನ ಬೀದಿ ಬದಿ ವ್ಯಾಪಾರಿಗಳನ್ನು ಸೊಸೈಟಿ ಸೀಮೆ ಎಣ್ಣೆ ಡಿಪೋ ಭಾಗದ ಖಾಲಿ ಜಾಗೆಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅದರೊಂದಿಗೆ ಅಲ್ಲಲ್ಲಿ ಪಾರ್ಕಿಂಗ್‌ ಜಾಗ ಗುರುತಿಸಲಾಗುತ್ತಿದೆ ಎಂದು ನಗರಸಭೆ ಅಭಿಯಂತರ ಎಲ್.ಜಿ.ಪತ್ತಾರ ಮಾಹಿತಿ ನೀಡಿದರು.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next