Advertisement

ಐತಿಹಾಸಿಕ ಕಿಲ್ಲೆ ಮೈದಾನಕ್ಕೆ ಹೊಸ ರೂಪ

10:42 PM Dec 22, 2019 | mahesh |

ಪುತ್ತೂರು: ಪುತ್ತೂರಿನ ಐತಿಹಾಸಿಕ ಹಿನ್ನೆಲೆಯ ಕಿಲ್ಲೆ ಮೈದಾನ ಹಾಗೂ ಸುತ್ತಲಿನ ಪರಿಸರ ನಗರದ ಸೌಂದರ್ಯ ಹೆಚ್ಚಿಸುವಂತೆ ಹೊಸ ರೂಪಕ್ಕೆ ಪರಿವರ್ತನೆ ಹೊಂದುತ್ತಿದೆ. ಹಿಂದಿನ ಸರಕಾರ ಪುತ್ತೂರು ನಗರ ಸಭೆಗೆ ನಗರೋತ್ಥಾನ ಯೋಜನೆಯಲ್ಲಿ ಮಂಜೂರುಗೊಳಿಸಿದ 25 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 38 ಲಕ್ಷ ರೂ. ಅನುದಾನವನ್ನು ಕಿಲ್ಲೆ ಮೈದಾನದ ಅಭಿವೃದ್ಧಿಗೆ ಇರಿಸಲಾಗಿದೆ. ಮೈದಾನದ ಸುತ್ತಲಿನ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ವಿನಿಯೋಗಿಸಲಾಗಿದೆ.

Advertisement

ಮೈದಾನದ ಹೆಗ್ಗಳಿಕೆ
ಶತಮಾನದ ಹಿಂದಿನ ಇತಿಹಾಸವನ್ನು ಹೊಂದಿರುವ ಕಿಲ್ಲೆ ಮೈದಾನಕ್ಕೆ ಬಳಿಕದಲ್ಲಿ ಕೋರ್ಟಿನ ಪಕ್ಕದಲ್ಲಿರುವ ಕಾರಣ ಕೋರ್ಟು ಮೈದಾನ ವೆಂಬ ಹೆಸರು ಬಂದಿತ್ತು. ಅನಂತರದಲ್ಲಿ ಸುಮಾರು 2 ದಶಕಗಳ ಹಿಂದೆ ಮೈದಾನಕ್ಕೆ ದೇಶಭಕ್ತ ಎನ್‌.ಎಸ್‌. ಕಿಲ್ಲೆ ಮೈದಾನ ಎಂದು ಹೆಸರಿಡಲಾಗಿದೆ. ಸೋಮವಾರದ ಸಂತೆ ವ್ಯಾಪಾರದಿಂದ ತೊಡಗಿ ಸಾರ್ವಜನಿಕ ಕಾರ್ಯಕ್ರಮ, ಸರಕಾರಿ, ಖಾಸಗಿ ಹಬ್ಬಗಳ ಆಚರಣೆ ಸೇರಿದಂತೆ ವಿವಿಧ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೂ ಮೈದಾನದ ಚೌಕಟ್ಟು ವ್ಯವಸ್ಥಿತವಾಗಿರಲಿಲ್ಲ. ಹಾಲಿ ನಗರಸಭಾ ಕಚೇರಿಯನ್ನು ಬೇರೆ ಕಡೆಯಲ್ಲಿ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಇದು ಕಾರ್ಯ ರೂಪಕ್ಕೆ ಬಂದಾಗ ಹಾಲಿ ನಗರ ಸಭೆಯ ಭಾಗ ಸಂತೆಗೆ ಮೀಸ ಲಾಗಲಿದೆ. ಆಗ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸುವ ಆವಶ್ಯಕತೆ ಇರುವುದಿಲ್ಲ.

ಮೈದಾನ ಅಭಿವೃದ್ಧಿ
ಕಿಲ್ಲೆ ಮೈದಾನಕ್ಕೆ ಚೌಕಟ್ಟಿನ ಸ್ವರೂಪ ನೀಡಲು ನಿರ್ಧರಿಸಿದ ನಗರಸಭೆ ಆ ಮೂಲಕ ಸುಂದರ ಗೊಳಿಸಲು ಯೋಜನೆ ರೂಪಿಸಿದೆ. ಸುತ್ತಲೂ ಆವರಣಗೋಡೆ, ಪಶ್ಚಿಮ ಭಾಗದಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಪೂರಕವಾಗಿ ಗ್ಯಾಲರಿ, ಎರಡು ದಿಕ್ಕಿನಲ್ಲಿ ಆಕರ್ಷಕ ಪ್ರವೇಶ ದ್ವಾರ, ಇಂಟರ್‌ಲಾಕ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.

ಮತ್ತಷ್ಟು ಸಮತಟ್ಟು
ಪ್ರವೇಶ ದ್ವಾರಕ್ಕೆ ಸುಭದ್ರ ಗೇಟ್‌, ಈಗಾಗಲೇ ಮೈದಾನದಲ್ಲಿರುವ ಶೌಚಾಲಯವನ್ನು ಸುಸಜ್ಜಿತಗೊಳಿಸಲು ನಿರ್ಧರಿಸಲಾಗಿದೆ. ಆ ಭಾಗದಲ್ಲೂ ಗ್ಯಾಲರಿ ನಿರ್ಮಾಣವಾಗಲಿದ್ದು, ಮೈದಾನವನ್ನು ಮತ್ತಷ್ಟು ಸಮತಟ್ಟುಗೊಳಿಸಲಾಗುತ್ತದೆ.

ಸುತ್ತಲೂ ಸೌಂದರ್ಯ
ಹಾಲಿ ಮೈದಾನದ ಮೇಲ್ಭಾಗದಲ್ಲಿರುವ ಹಾಗೂ ಮಿನಿ ವಿಧಾನಸೌಧದ ಮುಂಭಾಗ ದಲ್ಲಿರುವ ಪುತ್ತೂರಿಗೆ ವಿಶೇಷ ಗೌರವವನ್ನು ತಂದಿರುವ ವೀರ ಯೋಧರ ಸ್ಮಾರಕ ಅಮರ್‌ ಜವಾನ್‌ ಜ್ಯೋತಿ, ಮಂಗಲ್‌ಪಾಂಡೆ ಚೌಕ ಪರಿಸರದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಸುಂದರಗೊಳಿಸಲಾಗಿದೆ. ಅಲ್ಲಿರುವ ಆಕರ್ಷಕ ಮರಗಳಿಗೆ ಸುಂದರ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇಲ್ಲೇ ಇರುವ ಹಿಂದಿನ ಸೈರನ್‌ ಟವರ್‌ ಹಾಗೂ ರೇಡಿಯೋ ಟವರ್‌ಗಳನ್ನು ನವೀಕರಣಗೊಳಿಸಲಾಗಿದೆ. ಜತೆಗೆ ನಗರವಾಸಿಗಳಿಗೆ ವಾಯುವಿಹಾರಕ್ಕೆ ಸಣ್ಣ ಪಾರ್ಕ್‌ನಂತಿರುವ ಈ ಸ್ಥಳದಲ್ಲಿ ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಕಿಲ್ಲೆ ಮೈದಾನ ಹಾಗೂ ಸುತ್ತಲಿನ ಪರಿಸರದ ಸೌಂದ ರ್ಯ ನಗರದ ಘನತೆಯನ್ನು ಹೆಚ್ಚಿಸಲಿದೆ.

Advertisement

ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣ
ತ್ವರಿತ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಕ್ರೀಡಾಕೂಟ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೂರಕವಾಗಿ ಹಾಗೂ ಸುಂದರವಾಗಿ ಕಿಲ್ಲೆ ಮೈದಾನ ತೆರೆದುಕೊಳ್ಳಲಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next