Advertisement

ಸೆಮಿಕಂಡಕ್ಟರ್‌ಗೆ ನವ ಚೈತನ್ಯ

12:29 AM Jul 29, 2023 | Team Udayavani |

ಗಾಂಧಿನಗರ: ದೇಶವನ್ನು “ಸೆಮಿಕಂಡಕ್ಟರ್‌ ಹಬ್‌” ಆಗಿಸುವ ಕನಸನ್ನು ಸಾಕಾರಗೊಳಿಸುವತ್ತ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ದೇಶದಲ್ಲಿ ಸೆಮಿಕಂಡಕ್ಟರ್‌ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ತಂತ್ರಜ್ಞಾನ ಕಂಪೆನಿಗಳಿಗೆ ಶೇ. 50ರಷ್ಟು ಆರ್ಥಿಕ ನೆರವನ್ನು ಘೋಷಿಸಿದೆ.

Advertisement

ಗುಜರಾತ್‌ನ ಗಾಂಧಿನಗರದಲ್ಲಿ ಶುಕ್ರವಾರ “ಸೆಮಿಕಾನ್‌ ಇಂಡಿಯಾ 2023” ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ. ಸೆಮಿಕಂಡಕ್ಟರ್‌ ಉದ್ಯಮಕ್ಕೆ ದೇಶದಲ್ಲಿ ಸಂಪೂರ್ಣ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಉದ್ಯಮವು ಭಾರತದಲ್ಲಿ ತೀವ್ರ ಬೆಳವಣಿಗೆ ಕಾಣಲಿದೆ. ಸೆಮಿಕಂಡಕ್ಟರ್‌ ವಿನ್ಯಾಸದ ಕೋರ್ಸ್‌ ಗಳನ್ನು ಆರಂಭಿಸಲು ದೇಶದಲ್ಲಿ 300 ಕಾಲೇಜುಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆಮಿಕಂಡಕ್ಟರ್‌: ಏಕೆ ಒತ್ತು?

l  ಸೆಮಿಕಂಡಕ್ಟರ್‌ಗಳು ಆಧುನಿಕ ತಂತ್ರಜ್ಞಾನ ಉತ್ಪನ್ನಗಳ ಅವಿಭಾಜ್ಯ ಅಂಗ. ಕಾರುಗಳು, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು, ವೈದ್ಯಕೀಯ ಉಪಕರಣಗಳ ಸಹಿತ ಎಲ್ಲ ಎಲೆಕ್ಟ್ರಾನಿಕ್‌, ಡಿಜಿಟಲ್‌ ಸಾಧನಗಳಿಗೆ ಜೀವಾಳ.

l  ಸೆಮಿಕಂಡಕ್ಟರ್‌ ಆಮದು ಅವಲಂಬನೆ ತಗ್ಗಿಸಲು ದೇಶದಲ್ಲೇ ಸೆಮಿಕಂಡಕ್ಟರ್‌ ಚಿಪ್‌ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ.

Advertisement

l  ಸೆಮಿಕಂಡಕ್ಟರ್‌ ಘಟಕಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗಲಿವೆ. ಒಂದು ಅಂದಾಜಿನ ಪ್ರಕಾರ ಕೇಂದ್ರ ಸರಕಾರದ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯಿಂದ ಈ ಉದ್ಯಮದಲ್ಲಿ ಭವಿಷ್ಯದಲ್ಲಿ 35 ಸಾವಿರ ನೇರ ಉದ್ಯೋಗಗಳು, 1 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಲ್ಲದೆ ದೇಶದಲ್ಲಿ ವಿದೇಶಿ ಕಂಪೆನಿಗಳ ಘಟಕಗಳ ಸ್ಥಾಪನೆಯಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ.

l  ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ “ಮೇಕ್‌ ಇನ್‌ ಇಂಡಿಯಾ’, “ಆತ್ಮನಿರ್ಭರ ಭಾರತ’ ಉಪಕ್ರಮಗಳಿಗೂ ಒತ್ತು.

ಬೆಂಗಳೂರಿನಲ್ಲಿ ಎಎಂಡಿ ಘಟಕ

ಅಮೆರಿಕದ ಚಿಪ್‌ ತಯಾರಕ ಸಂಸ್ಥೆ ಎಎಂಡಿ ಭಾರತದಲ್ಲಿ 400 ದಶಲಕ್ಷ ಡಾಲರ್‌ ಹೂಡಿಕೆ ಮಾಡಲಿದ್ದು, ಬೆಂಗಳೂರಿನಲ್ಲಿ ಬೃಹತ್‌ ಘಟಕ ತೆರೆಯಲು ಒಪ್ಪಂದ ಮಾಡಿಕೊಂಡಿದೆ. ಗಾಂಧಿನಗರದಲ್ಲಿ ನಡೆದ ಸೆಮಿಕಂಡಕ್ಟರ್‌ ಸಮಾವೇಶದಲ್ಲಿ ಎಎಂಡಿ ಮುಖ್ಯ ತಾಂತ್ರಿಕ ಅಧಿಕಾರಿ ಮಾರ್ಕ್‌ ಪೇಪರ್‌ ಮಾಸ್ಟರ್‌ ಈ ಬಗ್ಗೆ ಘೋಷಣೆ ಮಾಡಿದ್ದಾರೆ.  ಈ ಮಧ್ಯೆ ವೇದಾಂತ ಕಂಪೆನಿ ಇನ್ನು ಎರಡೂವರೆ ವರ್ಷಗಳಲ್ಲಿ ಭಾರತದಲ್ಲಿ ಚಿಪ್‌ ಉತ್ಪಾದಕ ಘಟಕ ಆರಂಭಿಸುವುದಾಗಿ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next