Advertisement

ದೇವರ ಮೂರ್ತಿಗೆ ಹೊಸ ನೆಲೆ

12:31 AM Sep 04, 2022 | Team Udayavani |

ಈ ವರ್ಷದ ಗಣೇಶ ಹಬ್ಬ ಅದ್ದೂರಿಯಾಗಿದೆ ನಡೆದಿದೆ. ಹಲವು ಸ್ಥಳಗಳಲ್ಲಿ ಗಣಪತಿಯ ವಿಸರ್ಜನೆ ಆಗಿದೆಯಾದರೂ ಇನ್ನು ಕೆಲವು ಕಡೆ ಗಣಪತಿ ಹಬ್ಬದ ಗಮ್ಮತ್ತು ಇಳಿದಿಲ್ಲ. ಭೂಲೋಕದ ಜನರಿಗೆ ಒಳಿತು ಮಾಡುವ ಗಣೇಶನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ, “ಗಣಪತಿ ಬಪ್ಪಾ ಮೋರಿಯಾ’ ಎಂದು ಹರ್ಷೋದ್ಘಾರ ಮಾಡಿದ ಅನಂತರವೇ ಹಬ್ಬ ಮುಗಿದಂತೆ. ಆದರೆ ನೀರಿನಲ್ಲಿ ಮುಳುಗುವ ಗಣಪನ ಮೂರ್ತಿಯಿಂದ ಮನುಷ್ಯನಿಗಾಗುವ ತೊಂದರೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಅಂಶಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಗಣೇಶ ಸೇರಿದಂತೆ ಎಲ್ಲ ದೇವರ ಮೂರ್ತಿ, ಫೋಟೋಗಳಿಗೆ ನೆಲೆ ಕಲ್ಪಿಸಿಕೊಡಲು ಹೆಜ್ಜೆ ಇಟ್ಟವರು ನಾಸಿಕ್‌ನ ತೃಪ್ತಿ ಗಾಯಕ್‌ವಾಡ್‌.

Advertisement

ತೃಪ್ತಿ ಗಾಯಕ್‌ವಾಡ್‌ (34) ವಕೀಲ ವೃತ್ತಿಯಲ್ಲಿ ತೊಡಗಿಸಿ ಕೊಂಡವರು. 2019ರಲ್ಲಿ ನಾಸಿಕ್‌ನಲ್ಲಿ ಮೈದುಂಬಿ ಹರಿಯು ತ್ತಿದ್ದ ಗೋದಾವರಿಯನ್ನು ನೋಡಲೆಂದು ಹೋಗಿದ್ದರು. ಆಗ ಪಕ್ಕದಲ್ಲೇ ಹಾದು ಹೋದ ವ್ಯಕ್ತಿಯೊಬ್ಬ, ದೊಡ್ಡ ದೊಡ್ಡ ದೇವರ ಫೋಟೋಗಳನ್ನು ನದಿಗೆ ವಿಸರ್ಜಿಸುವುದಕ್ಕೆ ಮುಂದಾದದ್ದು ತೃಪ್ತಿಯ ಕಣ್ಣಿಗೆ ಕಂಡಿತು. ತತ್‌ಕ್ಷಣ ಆತನ ಬಳಿ ಓಡಿದ ತೃಪ್ತಿ “ಹೀಗೇಕೆ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು. ಅದಕ್ಕೆ ಆತ, “ಫೋಟೋಗಳು ಹಳೆಯದಾಗಿವೆ. ಹಳೆಯ ಫೋಟೋ ಅಥವಾ ಒಡೆದ ಫೋಟೋವನ್ನಿಟ್ಟು ಪೂಜಿಸ   ಬಾರದು. ಹಾಗಾಗಿ ಅದನ್ನು ಗೋದಾವರಿಯಲ್ಲಿ ವಿಸರ್ಜಿಸು ತ್ತಿದ್ದೇನೆ’ ಎಂದಿದ್ದರು. ಆ ಹೊತ್ತಿಗೆ ಏನು ಹೇಳಬೇಕೆಂದು ಅರಿಯದ ತೃಪ್ತಿ, “ಇಲ್ಲ, ನೀವು ಇದನ್ನು ಬೇರೆ ರೂಪದಲ್ಲಿ ಮರುಬಳಕೆ ಮಾಡಬಹುದು’ ಎಂದಿದ್ದರು. ಅದಕ್ಕೆ ಆತ ಮರು ಪ್ರಶ್ನೆ ಮಾಡಿದಾಗ ಸ್ವಲ್ಪ ಸಮಯ ಯೋಚಿಸಿ, “ಆ ಪೇಪರನ್ನು ನೀರಿನಲ್ಲಿ ಕರಗಿಸಿ ಗಿಡಗಳಿಗೆ ಹಾಕಬಹುದು. ಫೋಟೋ ಫ್ರೆàಮನ್ನು ಆಟಿಕೆ ಮಾಡ ಬಹುದು’ ಎಂದು ಉತ್ತರಿಸಿದ್ದಾರೆ. ಅಲ್ಲಿಂದಲೇ ಆರಂಭವಾದದ್ದು “ಸಂಪೂರ್ಣಂ’.

ನದಿಗೆ ಫೋಟೋ ಎಸೆಯಲು ಬಂದಿದ್ದ ವ್ಯಕ್ತಿಯನ್ನೇನೋ ತೃಪ್ತಿ ಮನವೊಲಿಸಿ ವಾಪಸು ಕಳುಹಿಸಿದ್ದರು. ಆದರೆ ಆ ದಿನವೆಲ್ಲ ಅವರಿಗೆ ಈ ಫೋಟೋಗಳ ಮರುಬಳಕೆಯ ವಿಚಾರವೇ ತಲೆಯಲ್ಲಿ ಓಡಿತ್ತು. ಇದೇ ರೀತಿ ದೇವರ ಫೋಟೋಗಳನ್ನು, ಮೂರ್ತಿಯನ್ನು ನದಿಗೆ ಎಸೆ  ಯುವವರು ಅದೆಷ್ಟು ಜನರಿದ್ದಾರೆ! ಅದೆಲ್ಲ  ವನ್ನು ಮರುಬಳಕೆ ಮಾಡಬಹುದಲ್ಲವೇ? ಆ ರೀತಿ ಮಾಡುವುದರಿಂದ ಪರಿಸರ ಮಾಲಿನ್ಯ ವನ್ನೂ ತಡೆಯಬಹುದು, ಜತೆಗೆ ದೇವರಿಗೂ ಗೌರವ ಸೂಚಿಸಿದಂತಾಗುತ್ತದೆಯಲ್ಲವೇ ಎನ್ನುವ ಪ್ರಶ್ನೆಗಳು ಮೂಡಿತ್ತು.

ತಲೆಗೆ ಬಂದ ವಿಚಾರವನ್ನು ತೃಪ್ತಿ ತಂದೆಯೊಂದಿಗೆ ಚರ್ಚಿ ಸಿದ್ದರು. ಈ ರೀತಿ ಫೋಟೋ, ಮೂರ್ತಿಗಳನ್ನು ಸಂಗ್ರಹಿಸಿ ನಾವೇ ಏನಾದರೂ ಮಾಡಬಹುದು ಎಂದು ತಂದೆ ಸೂಚಿಸಿದ್ದರು. ಇದಕ್ಕಾಗಿಯೇ ಸಂಘಟನೆಯೊಂದನ್ನು ರಚಿಸು ಎಂದು ತಂದೆ ಮಗಳಿಗೆ ಮಾರ್ಗದರ್ಶನ ನೀಡಿದ್ದರು. ಅದರಂತೆ “ಸಂಪೂರ್ಣಂ ಸೇವಾ ಟ್ರಸ್ಟ್‌’ ಹೆಸರಿನಲ್ಲಿ ತೃಪ್ತಿ ಟ್ರಸ್ಟ್‌ ಒಂದನ್ನು ಆರಂಭಿಸಿದರು.

ಒಬ್ಬಂಟಿಯಾಗಿ ಟ್ರಸ್ಟ್‌ ಆರಂಭಿಸಿದ ತೃಪ್ತಿ, “ನಾವು ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮರುಬಳಕೆ ಮಾಡು ತ್ತೇವೆ. ಅವುಗಳನ್ನು ಎಲ್ಲಿಯೂ ಎಸೆಯದೆ ನಮಗೆ ತಲುಪಿಸಿ’ ಎನ್ನುವ ವಾಟ್ಸ್‌ಆ್ಯಪ್‌ ಸಂದೇಶವನ್ನು ಒಂದಷ್ಟು ಸ್ನೇಹಿತರಿಗೆ ಕಳುಹಿಸಿದರು. ಈ ಸಂದೇಶ ಒಬ್ಬರಿಂದ ಒಬ್ಬರಿಗೆ ಹರಡುತ್ತ ನೂರಾರು ಜನರನ್ನು ತಲುಪಿತ್ತು. ಭರಪೂರ ಪ್ರತಿಕ್ರಿಯೆಯೂ ಸಿಕ್ಕಿತು. “ನಮ್ಮ ಮನೆಯಲ್ಲಿ ದೇವರ ಫೋಟೋ ಜತೆ ಹಾಳು ಬಿದ್ದಿರುವ ಹಿರಿಯರ ಫೋಟೋ ಚೌಕಟ್ಟುಗಳೂ ಇವೆ. ಅವುಗಳನ್ನೂ ಹೇಗಾದರೂ ಮರುಬಳಕೆ ಮಾಡಿ’ ಎಂದು ಅನೇಕರು ಕರೆ ಮಾಡಿ ಕೋರಿಕೊಂಡಿದ್ದರು.

Advertisement

ಈ ಎಲ್ಲ ಕೋರಿಕೆಗಳು ಬಂದ ಅನಂತರ ಒಂದಷ್ಟು ಸ್ನೇಹಿತರು ಒಟ್ಟಾಗಿ ಫೋಟೋ, ಮೂರ್ತಿಗಳನ್ನು ಸಂಗ್ರಹಿಸಿ ದರು. ಮೂರ್ತಿಗಳನ್ನು ಪುಡಿ ಮಾಡಿ ಅದರಿಂದ ಮಕ್ಕಳ ಆಟಿಕೆ ತಯಾರಿಸಿದರು. ಫೋಟೋ ಚೌಕಟ್ಟುಗಳನ್ನು ಕತ್ತರಿಸಿ, ಅದರಿಂದ ಆಟಿಕೆಯ ಮನೆಗಳು, ಚಂದದ ನೇಮ್‌ಬೋರ್ಡ್‌ ಗಳು ಮತ್ತಿತರ ಗೃಹ ಉಪಯೋಗಿ ವಸ್ತುಗಳನ್ನು ತಯಾ ರಿಸಿದರು. ಬೀದಿ ನಾಯಿಗಳಿಗೆ ಊಟ ಹಾಕುವು ದಕ್ಕೆಂದು ತಟ್ಟೆಗಳನ್ನೂ ಅದರಲ್ಲೇ ತಯಾರಿಸಿದರು. ಈ ರೀತಿ ತಯಾರಿಸಲಾದ ಆಟಿಕೆಗಳನ್ನು ನಾಸಿಕ್‌ನ ಕೊಳಗೇರಿಗೆ ತೆರಳಿ ಅಲ್ಲಿದ್ದ ಮಕ್ಕಳಿಗೆ ಕೊಟ್ಟರು. ಈ ಆಟಿಕೆ ಎಲ್ಲಿಂದ ಬಂದಿತೆನ್ನುವ ಅರಿವೂ ಇರದ ಮಕ್ಕಳ ಅದರೊಂದಿಗೆ ಸಂತಸದಿಂದ ಆಟವಾಡಿದ್ದನ್ನು ಕಂಡು ತಂಡಕ್ಕೆ ಉತ್ಸಾಹ ಇನ್ನಷ್ಟು ಹೆಚ್ಚಿತು.

ಗಣೇಶ ಹಬ್ಬದ ಸಮಯದಲ್ಲಿ ಗಣಪತಿಯ ಮೂರ್ತಿ ಯನ್ನು ನೀರಿಗೆ ವಿಸರ್ಜಿಸದೆ ನಮಗೆ ಕೊಡಿ. ನಾವು ಅದನ್ನು ಮರುಬಳಕೆ ಮಾಡುತ್ತೇವೆ ಎಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಕೊಟ್ಟಿದ್ದರು. ಅದಕ್ಕೂ ಭರಪೂರ ಪ್ರತಿಕ್ರಿಯೆ ಸಿಕ್ಕಿದ್ದು, ಸಾಕಷ್ಟು ಗಣೇಶ ಮೂರ್ತಿ ಸಂಗ್ರಹ ವಾಗಿದೆ. ಮೂರ್ತಿಗಳನ್ನು ಕುಟ್ಟಿ ಪುಡಿ ಮಾಡಿ ಅದರಿಂದಲೂ ವಿವಿಧ ಆಟಿಕೆ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸಲಾಗಿದೆ.

ಮೂರು ವರ್ಷಗಳ ಹಿಂದೆ ಆರಂಭವಾದ ಈ ಟ್ರಸ್ಟ್‌ ಈವರೆಗೆ ಒಟ್ಟು 50 ಸಾವಿರ ಟನ್‌ಗೂ ಅಧಿಕ ತೂಕದ ಮೂರ್ತಿ, ಫೋಟೋಗಳನ್ನು ಮರುಬಳಕೆ ಮಾಡಿದೆ. ಹಲವು ಕಲಾಕಾರ ಸಂಸ್ಥೆಗಳು ಈ ಟ್ರಸ್ಟ್‌ನ ಬಳಿ ಬಂದು ವಿಗ್ರಹಗಳ ಪುಡಿ ಸಂಗ್ರಹಿಸಿಕೊಂಡು ಹೋಗುತ್ತಿವೆ. ಎಲ್ಲ ಧರ್ಮದ, ಎಲ್ಲ ರೀತಿಯ ದೇವರ ಮೂರ್ತಿ, ಫೋಟೋಗಳಿಗೂ ಈ ಟ್ರಸ್ಟ್‌ ನೆಲೆ ಕಲ್ಪಿಸಿಕೊಡುತ್ತಿದೆ. ಬಾಲ್ಯದಿಂದಲೂ ಧಾರ್ಮಿಕ ಭಾವನೆಗಳನ್ನು ತುಂಬಿಕೊಂಡು ಬೆಳೆದಿರುವ ತೃಪ್ತಿ, ಯಾವುದೇ ಕಾರಣಕ್ಕೂ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ಬರಬಾರದು ಎನ್ನುವ ಆಲೋಚನೆ ಹೊಂದಿದವರು. ಹಾಗಾಗಿಯೇ ಜನರು ನೀಡುವ ಮೂರ್ತಿ ಅಥವಾ ಫೋಟೋಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಪೂಜೆ ಮಾಡಿ ಅನಂತರವೇ ಮರುಬಳಕೆಗೆ ಬಳಸುತ್ತಿದ್ದಾರೆ.

ಸಂಪೂರ್ಣಂ ಸೇವಾ ಟ್ರಸ್ಟ್‌ ಈಗ ನಾಸಿಕ್‌ ಎಂಬ ಒಂದೇ ನಗರಕ್ಕೆ ಸೀಮಿತವಾಗಿಲ್ಲ. ವಾಣಿಜ್ಯ ನಗರಿ ಮುಂಬಯಿ, ದಿಲ್ಲಿ, ಔರಂಗಾಬಾದ್‌ ಹಾಗೂ ನಮ್ಮ ಬೆಂಗಳೂರಿಗೂ ಈ ತಂಡ ಕಾಲಿಟ್ಟಿದೆ. ಯಾವ ನಗರಗಳಲ್ಲಿ ಹೆಚ್ಚಾಗಿ ಮೂರ್ತಿ ಮತ್ತು ಫೋಟೋ ಮರುಬಳಕೆಗಾಗಿ ಕರೆ ಬರುತ್ತದೆಯೋ ಅಲ್ಲಿಗೆ ತಾವೇ ಹೋಗಿ ಮೂರ್ತಿಗಳನ್ನು ಸಂಗ್ರಹ ಮಾಡುವ ಕೆಲಸವನ್ನೂ ತಂಡ ಮಾಡುತ್ತಿದೆ. ನೂರಕ್ಕೂ ಅಧಿಕ ಸ್ವಯಂ ಸೇವಕರು ತೃಪ್ತಿ ಅವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ.

“ಬಹುಶಃ ದೇವರ ವಿಗ್ರಹ, ಫೋಟೋ ವಿಸರ್ಜನೆ ಮಾಡುವ   ಸರಿ ಯಾದ ಕ್ರಮ ಯಾವುದಾದರೂ ಇದೆ ಎಂದರೆ ಅದು ಇದೇ ಎನ್ನುವುದು ನನ್ನ ನಂಬಿಕೆ. ನಾವು ಪೂಜಿಸುವ ದೇವರ ಮೂರ್ತಿ ಮುಂದೆ ಒಂದೊಳ್ಳೆ ಕೆಲಸಕ್ಕೆ ಬಳಕೆಯಾಗುತ್ತದೆ ಎಂದರೆ ಅದರಲ್ಲಿ ಸಾರ್ಥಕ್ಯ ಇರುತ್ತದೆ. ಈ ಕೆಲಸ ಮಾಡಲಾ ರಂಭಿಸಿದಾಗಿನಿಂದ ನನ್ನ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ವಕೀಲ ವೃತ್ತಿಯಲ್ಲಿ ನನ್ನ ಬಳಿ ಬರುವ ಕ್ಲೈಂಟ್‌ಗಳು ಕೂಡ ನನ್ನನ್ನು ಅತೀ ಹೆಚ್ಚು ನಂಬಲಾ ರಂಭಿಸಿದ್ದಾರೆ. ಈ ನಮ್ಮ ಟ್ರಸ್ಟ್‌ ಅನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕು. ದೇಶದ ಪ್ರತೀ ರಾಜ್ಯದ ಸಣ್ಣ ಸಣ್ಣ ನಗರದಲ್ಲೂ ನಮ್ಮ ಟ್ರಸ್ಟ್‌ನ ಕಚೇರಿ ಇರಬೇಕು. ಯಾವ ದೇವರ ಮೂರ್ತಿಯೂ ನೀರು ಅಥವಾ ಮಣ್ಣು ಪಾಲಾಗದೆ, ಮರುಬಳಕೆಯಾಗಬೇಕು ಎನ್ನುವುದು ನನ್ನ ಹೆಬ್ಬಯಕೆ’ ಎನ್ನುತ್ತಾರೆ ಸಂಪೂರ್ಣಂ ಸೇವಾ ಟ್ರಸ್ಟ್‌ನ ಸಂಸ್ಥಾಪಕಿ ತೃಪ್ತಿ ಗಾಯಕ್‌ವಾಡ್‌.

ಮನೆ ಎಂದ ಮೇಲೆ ದೇವರ ಫೋಟೋಗಳು ಇರಲೇ ಬೇಕು. ಅದರಲ್ಲಿ ಅದೆಷ್ಟೋ ಫೋಟೋಗಳು ಹಳೆಯದಾಗಿ ಮೂಲೆ ಸೇರಿರಬಹುದು. ಎಲ್ಲೋ ಯಾವುದೋ ಮರದ ಕೆಳಗೆ ಕದ್ದುಮುಚ್ಚಿ ದೇವರ ಹಳೆ ಫೋಟೋಗಳನ್ನು ಇಟ್ಟು ಬರುವ ಬದಲು ಅದೇ ಫೋಟೋ ಚೌಕಟ್ಟುಗಳಿಂದ ಒಂದಿಷ್ಟು ಮಕ್ಕಳ ಮುಖದಲ್ಲಿ ನಗು ತರಿಸುವ ಕೆಲಸವನ್ನು ನೀವೂ ಮಾಡಬಹುದು. ಇಂಥ ದೇವರ ಫೋಟೋಗಳ ನ್ನಾಗಲಿ, ಮೂರ್ತಿಯನ್ನಾಗಲಿ, ಮನೆಯ ಹಿರಿಯರ ಫೋಟೋ ಆಗಲಿ ಮರುಬಳಕೆ ಮಾಡಬೇಕು ಎನ್ನುವ ಆಲೋಚನೆ ಇದ್ದರೆ ತೃಪ್ತಿ ಅವರನ್ನು ಸಂಪರ್ಕಿಸಬಹುದು.
ತೃಪ್ತಿ ಗಾಯಕ್‌ವಾಡ್‌- 8850328225
sampurnam2019@gmail.com

– ಮಂದಾರ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next