Advertisement

ಮುಂದಿನ ಚುನಾವಣೆಗೆ ಕೈ ಬೆಂಬಲಿಸಿದರೆ ಹೊಸ ಇತಿಹಾಸ ಸೃಷ್ಟಿ: ಡಿ.ಕೆ. ಶಿವಕುಮಾರ್‌

09:19 PM Mar 28, 2023 | Team Udayavani |

ಶ್ರೀರಂಗಪಟ್ಟಣ: ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿದ್ದೀರಿ. ಇದರಿಂದ ಜಿಲ್ಲೆಯಲ್ಲಿ ಯಾವ ಬದಲಾವಣೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

Advertisement

ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ ಕಾಂಗ್ರೆಸ್‌ ಪಕ್ಷ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಜಿಲ್ಲೆ ಅಭಿವೃದ್ಧಿಯಾಗಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಮತದಾರರು 7 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿದ್ದರು. ಈ 7 ಶಾಸಕರನ್ನು ಗೆಲ್ಲಿಸಿ ಮಂಡ್ಯದಲ್ಲಿ ಯಾವ ಬದಲಾವಣೆ ಆಗಿದೆ ಎಂಬುದನ್ನು ನೀವು ಯೋಚಿಸಬೇಕು ಎಂದರು.

ವರ್ತಕರಿಗೆ ನಷ್ಟ
ಈ ಭಾಗದಲ್ಲಿ ಅನೇಕ ವರ್ತಕರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆದ ಅನಂತರ ಈ ಭಾಗದ ವರ್ತಕರಿಗೆ ನಷ್ಟವಾಗಿದೆ. ಇದಕ್ಕಾಗಿ ಈ 7 ಶಾಸಕರು ನಮ್ಮ ಜನರಿಗೆ ಅನ್ಯಾಯ ಆಗಿದೆ ಎಂದು ಧ್ವನಿ ಎತ್ತಿದ್ದಾರಾ? ಇಲ್ಲ. ಇಂದು ಅವರ ವ್ಯಾಪಾರ ವಹಿವಾಟು ನಾಶವಾಗಿದೆ ಎಂದು ಹೇಳಿದರು.

ರೈತರ ಪರ ಧ್ವನಿ ಎತ್ತಲಿಲ್ಲ
ಜಿಲ್ಲೆಯ ಶಾಸಕರು ರೈತರ ಪರವಾಗಿ ಧ್ವನಿ ಎತ್ತಲಿಲ್ಲ. ಇಂದು ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಖರ್ಚು ಮಾತ್ರ ಗಗನಕ್ಕೇರಿದೆ. ಈ ಪರಿಸ್ಥಿತಿಯಲ್ಲಿ ಜನರನ್ನು ಆರ್ಥಿಕವಾಗಿ ಸದೃಢ ಮಾಡಲು ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಇದಕ್ಕಾಗಿ 50 ಸಾವಿರ ಕೋಟಿಯಾಗಲೀ, ಭ್ರಷ್ಟಾಚಾರ ತಡೆದು, ಹೇಗೆ ಹಣ ತಂದು ಅದನ್ನು ಪ್ರತೀ ಮನೆಗೆ ಹೇಗೆ ತಲುಪಿಸಬೇಕು ಎಂದು ಗೊತ್ತಿದೆ ಎಂದರು.

Advertisement

ಪ್ರತೀ ಮನೆಗೂ ಗ್ಯಾರಂಟಿ ಕಾರ್ಡ್‌
ಪ್ರತೀ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಆ ಮೂಲಕ ಹಳ್ಳಿ ಜನರು ಯಾರೂ ಕೂಡ ಇನ್ನು ಮುಂದೆ ವಿದ್ಯುತ್‌ ಬಿಲ್‌ ಕಟ್ಟುವಂತಿಲ್ಲ. ಇನ್ನು ಬೆಲೆ ಏರಿಕೆಯಿಂದ ಮಹಿಳೆಯರು ಮನೆ ವೆಚ್ಚ ಸರಿದೂಗಿಸಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತೀ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಇನ್ನು ಅನ್ನ ಭಾಗ್ಯ ಯೋಜನೆ ಮೂಲಕ ಪ್ರತೀ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು. ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಲು ಪದವೀಧರರಿಗೆ ಪ್ರತೀ ತಿಂಗಳು 3 ಸಾವಿರ ರೂ. ಹಾಗೂ ಡಿಪ್ಲೋಮಾ ಮಾಡಿರುವವರಿಗೆ 1,500 ರೂ. ನಿರುದ್ಯೋಗ ಭತ್ತೆ ನೀಡಲಾಗುವುದು. ಈ ಕುರಿತ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರತೀ ಮನೆಗೆ ತಲುಪಿಸುತ್ತಿದ್ದೇವೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next