ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಕೆಲವರು ರಾತೋರಾತ್ರಿ ಭೇಟಿ ಮಾಡುತ್ತಾರೆ. ನಾನು ರಾಜಾರೋಷವಾಗಿ ಬೆಳಗ್ಗಿನ ಹೊತ್ತಿನಲ್ಲೇ ಭೇಟಿ ಮಾಡುತ್ತೇನೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್ ನಾಯಕ ರೊಂದಿಗೆ ಪದೇಪದೆ ಕಾಣಿಸಿಕೊಳ್ಳುವ ಮಾಜಿ ಸಚಿವ ಸೋಮಶೇಖರ್ ಅವರು ಸೋಮವಾರ ಡಿಸಿಎಂ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತೆ ಕುತೂಹಲ ಕೆರಳಿಸಿದೆ. ಸಾಲದ್ದಕ್ಕೆ ಬಿಜೆಪಿಯ ಕೆಲವರು ರಾತೋರಾತ್ರಿ ಭೇಟಿ ಮಾಡುತ್ತಾರೆ. ಮಾಧ್ಯಮಗಳ ಕಣ್ತಪ್ಪಿಸಿ ಬರುತ್ತಾರೆ ಎನ್ನುವ ಮೂಲಕ ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.
ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡು ಬರುತ್ತಿರುವ ಸೋಮಶೇಖರ್, ಸ್ಥಳೀಯ ಬಿಜೆಪಿ ಮುಖಂಡರಿಂದ ತೊಂದರೆ ಆಗುತ್ತಿದೆಯಲ್ಲದೆ, ತಮ್ಮನ್ನು ಪಕ್ಷದಿಂದ ಹೊರಕಳುಹಿಸಲು ಅನೇಕರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಇದಾದ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡು, ಕಾಂಗ್ರೆಸ್ ಜತೆಗಿನ ನಂಟು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳೂ ಎರಗಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರೂ ಸೋಮಶೇಖರ್ ಮಾತ್ರ ಶಾಸನಸಭೆಯಲ್ಲೇ ಇರುತ್ತಿದ್ದರು. ಡಿಸಿಎಂ ಭೋಜನಕೂಟದಲ್ಲೂ ಭಾಗವಹಿಸಿದ್ದರು. ಈಗ ಹೊಸ ವರ್ಷದಂದು ಡಿಸಿಎಂ ಶಿವಕುಮಾರ್‌ರನ್ನು ಭೇಟಿ ಮಾಡಿದ್ದು, ಶುಭಾಶಯ ಕೋರುವುದಕ್ಕಷ್ಟೇ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಹೊಸ ವರ್ಷದ ಶುಭಾಶಯ ಹೇಳಿದ್ದೇನೆ. ಹೊಸವರ್ಷದಲ್ಲಿ ನಿಮ್ಮ ನೇತೃತ್ವದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ವೇಗ ಸಿಗಲಿ ಎಂದು ಹಾರೈಸಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.