ಪಾಕಿಸ್ಥಾನವು ತನ್ನೊಡಲಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆ ಮತ್ತು ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಬಹಳ ಸಮಯದಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿವೆ. ಭಾರತವು ಇನ್ನೊಂದೆಡೆ ದಶಕಗಳಿಂದ ಪಾಕ್ ಹೇಗೆ ಉಗ್ರರನ್ನು ಪೋಷಿಸುತ್ತಿದೆ ಎನ್ನುವ ಸತ್ಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪುರಾವೆ ಸಹಿತ ಕಾಲಕಾಲಕ್ಕೆ ಎದುರಿಡುತ್ತಲೇ ಇರುತ್ತದೆ. ಆದರೆ ಈ ಎಲ್ಲ ಒತ್ತಡದ ಅನಂತರವೂ ಪಾಕಿಸ್ಥಾನ ತನ್ನ ಬುದ್ಧಿಯನ್ನು ಮಾತ್ರ ಬಿಡುತ್ತಲೇ ಇಲ್ಲ. ಪಾಕ್‌ನಲ್ಲೀಗ ಐಸಿಸ್‌ನಂಥ ಉಗ್ರ ಸಂಘಟನೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿವೆ.
ಆದಾಗ್ಯೂ ಎಫ್ಎಟಿಎಫ್ ಕಪ್ಪುಪಟ್ಟಿಯಲ್ಲಿ ಬೀಳುವ ಅಪಾಯ ಎದುರಾದಾಗಲೆಲ್ಲ ಪಾಕಿಸ್ಥಾನ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ, ಕೆಲವು ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದಂತೆ ತೋರಿಸುತ್ತಿದೆಯಾದರೂ ವಾಸ್ತವ ಇದಕ್ಕೆ ತದ್ವಿರುದ್ಧವಾಗಿರುತ್ತದೆ ಎನ್ನುವುದು ಜಗತ್ತಿಗೆ ಸ್ಪಷ್ಟವಾಗಿದೆ. ಇಮ್ರಾನ್ ಸರಕಾರ, ಪಾಕ್‌ನಲ್ಲಿರುವ ಜಾಗತಿಕ ಮೋಸ್ಟ್ ವಾಂಟೆಡ್ ಉಗ್ರರ ಹೆಸರುಗಳನ್ನು ತನ್ನ ಕಪ್ಪು ಪಟ್ಟಿಯಲ್ಲಿ ಸೇರಿಸದೇ ಇರುವುದು ಇದಕ್ಕೊಂದು ತಾಜಾ ಉದಾಹರಣೆ. ವಿಶ್ವಸಂಸ್ಥೆಯ ಒಂದು ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಲಾಗಿದ್ದು, ಈಗಲೂ ಅಲ್‌ಕಾಯಿದಾ, ಇಸ್ಲಾಮಿಕ್ ಸ್ಟೇಟ್ ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನದಂಥ ದೊಡ್ಡ ಉಗ್ರ ಸಂಘಟನೆಗಳು ಪಾಕಿಸ್ಥಾನಿ ನೆಲದಿಂದಲೇ ನಿರ್ವಿಘ್ನವಾಗಿ ಉಗ್ರಕೃತ್ಯಗಳನ್ನು ನಡೆಸುತ್ತಿವೆ.
ಉಗ್ರ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಡುವ ವಿಶ್ವಸಂಸ್ಥೆಯ ತಂಡವು ಈ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿರುವುದು ಸಹಜವೇ ಆಗಿದೆ. ಯಾವ ಉಗ್ರರ ಹೆಸರು ಕಪ್ಪು ಪಟ್ಟಿಯಲ್ಲಿ ಇರಬೇಕಿತ್ತೋ ಅವರೆಲ್ಲರ ಹೆಸರನ್ನೂ ಪಾಕ್ ಸರಕಾರ ತನ್ನ ಪಟ್ಟಿಯಿಂದ ಹೊರಗಿಟ್ಟು ರಕ್ಷಿಸುತ್ತಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನ್ ಮುಖ್ಯಸ್ಥ ಅಮೀರ್ ನೂರ್ ವಲಿ ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲಾಗಿದೆ. ಆದರೆ ಈಗಲೂ ಇಮ್ರಾನ್ ಖಾನ್ ಸರಕಾರ ಈ ಕ್ರೂರಿಯನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಬದಲಾಗಿ, ಆತ ಮತ್ತಷ್ಟು ಬಲಿಷ್ಠವಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದೆ ಎನ್ನುತ್ತಾರೆ ರಕ್ಷಣಾ ಪರಿಣತರು.
ಆದರೆ ಭಾರತವನ್ನು ಹೊರತುಪಡಿಸಿದರೆ, ಯಾವೊಂದು ದೇಶವೂ ಸಹ ಪಾಕಿಸ್ಥಾನಕ್ಕೆ ಇದಿರೇಟು ನೀಡುವ ಕೆಲಸ ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಲೇಬೇಕಾಗಿದೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟಲು ಇರುವ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್ಎಟಿಎಫ್)ಯ ಕಪ್ಪು ಪಟ್ಟಿಯಲ್ಲಿ ಮುಂದಿನ ಬಾರಿಯಾದರೂ ಪಾಕ್ ಸೇರ್ಪಡೆಗೊಳ್ಳುವಂತೆ ಮಾಡಬೇಕಿದೆ. ಎಫ್ಎಟಿಎಫ್ ಕಪ್ಪುಪಟ್ಟಿಯಿಂದ ಪಾಕ್ ಅನ್ನು ಬಚಾವ್ ಮಾಡುತ್ತಿರುವ ರಾಷ್ಟ್ರಗಳ ಮೇಲೆ ಒತ್ತಡ ಸೃಷ್ಟಿಸುವ ಕೆಲಸವೂ ಮುಖ್ಯವಾಗಿ ಆಗಬೇಕಿದೆ.