ಚಿತ್ರದುರ್ಗ: ಚಿತ್ರದುರ್ಗದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಎ.ನಾರಾಯಣಸ್ವಾಮಿ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ.
ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡುವುದು ಖಚಿತವಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಕ್ರಿಯಾಯೋಜನೆ: ಬಸವರಾಜ ಬೊಮ್ಮಾಯಿ
ಮಂಗಳವಾರವೇ ಸಂಸದ ಎ.ನಾರಾಯಣಸ್ವಾಮಿ ಅವರು ಕುಟುಂಬ ಸಮೇತ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಈಗ ಅಧಿಕೃತವಾಗಿ ನಾರಾಯಣಸ್ವಾಮಿ ಅವರೇ ಈ ವಿಷಯ ಬಹಿರಂಗಪಡಿಸಿದ್ದು, ಎಡಗೈ ದಲಿತ ಸಮುದಾಯದಿಂದ ಬಂದ ನನ್ನನ್ನು ಬಿಜೆಪಿ ಗುರುತಿಸಿ ಸಚಿವ ಸ್ಥಾನ ನೀಡಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸದಸ್ಯನಾಗಿರುವುದು ನನ್ನ ಭಾಗ್ಯ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ, ಅಸಹಾಯಕರ ಧ್ವನಿಯಾಗುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ನಾಲ್ಕು ಬಾರಿ ಆನೆಕಲ್ ಶಾಸಕರಾಗಿದ್ದ ನಾರಾಯಣಸ್ವಾಮಿ 2010 ರಲ್ಲಿ ರಾಜ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈಗ ಮೊದಲ ಬಾರಿಗೆ ಚಿತ್ರದುರ್ಗ ಸಂಸದರಾದ ಎ. ನಾರಾಯಣಸ್ವಾಮಿ ಮೊದಲ ಅವಧಿಯಲ್ಲೇ ಕೇಂದ್ರದ ಸಚಿವರಾಗುವ ಮೂಲಕ ಅದೃಷ್ಟವಂತರಾಗಿದ್ದಾರೆ. ಈ ಮೂಲಕ ಬಹುದಿನಗಳಿಂದ ಬಾಕಿ ಇರುವ ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ದಿನಗಳು ಹತ್ತಿರವಾಗಲಿವೆ ಎಂದು ಚಿತ್ರದುರ್ಗದ ಜನತೆ ಸಂಭ್ರಮಿಸುತ್ತಿದ್ದಾರೆ.