ತುಮಕೂರು: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಗೆ ಸಂಪುಟ ನಿರ್ಧಾರ ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ತುಮಕೂರು ನಗರದಲ್ಲಿ ಶುಕ್ರವಾರ ದಿಶಾ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡ್ತಾರೆ. ಅಂದು ಸಿಬಿಐನವರು ಅನುಮತಿ ಕೇಳಿದ್ದರು. ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ ಎಂದು ಹೇಳಿದರು.
ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್ ಹಾಕಿದಂತಿದೆ. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡಿಸುತ್ತೇನೆ ಎಂದರು.
ಒಂದು ಸಲ ಎಫ್.ಐಆರ್ ಆದ್ಮೇಲೆ ಚಾರ್ಜ್ ಶೀಟ್ ಕೊಟ್ಟರೆ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. ಪ್ರಕರಣಗಳು ಒಂದು ಸಲ ಕೋರ್ಟ್ ಗೆ ಹೋದ್ರೆ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳಬೇಕು. ಕ್ಯಾಬಿನೆಟ್ ಗೆ ಯಾವುದೇ ಅಧಿಕಾರ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಕಾನೂನಾತ್ಮಕವಾಗಿ ಪ್ರಕ್ರಿಯೆ ನಡೆದಿರಲಿಲ್ಲ ಎಂಬ ಕಾಂಗ್ರೆಸ್ ಸಮರ್ಥನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಷ್ಟು ದಿನ ಏನ್ ಮಾಡುತ್ತಿದ್ದರು. ಸ್ಪೀಕರ್ ಅನುಮತಿ ಪಡೆದೆ ಅಥವಾ ಅಂದಿನ ಅಡ್ವಕೇಟ್ ಜನರಲ್ ಅಡ್ವರ್ಸ್ ರಿಪೋರ್ಟ್ ಇದ್ದಾಗಲೂ ಕೋರ್ಟ್ ಗೆ ಬಂದಿದೆ. ಡಿ.ಕೆ ಶಿವಕುಮಾರ್ ಅವರ ವಿರುದ್ಧ ಅನೇಕ ಪ್ರಕರಣಗಳಿವೆ. ಇದನ್ನು ನ್ಯಾಯಾಲಯದಲ್ಲೇ ವಜಾ ಮಾಡಿಸಬಹುದಿತ್ತು. ರಾಜ್ಯ ಸರ್ಕಾರಕ್ಕೆ ನೀವೇ ಯಾಕೆ ಕಪ್ಪು ಚುಕ್ಕೆಯಿಟ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಗಣತಿ ವಿಚಾರ ಮಾತನಾಡಿ, ಜಾತಿ ಗಣತಿ ವರದಿ ಅವಶ್ಯಕತೆಯಿದೆ. ಜನಗಣತಿ 2011ರಲ್ಲಿ ನಡೆದಿದೆ. ಈವರೆಗೆ ಜಾತಿ ಜನಗಣತಿ ಆಗಿಲ್ಲ. ಯಾವುದೇ ಪಂಚವಾರ್ಷಿಕ ಯೋಜನೆಗಳ ಜಾರಿಗೆ ಜನಸಮುದಾಯಗಳ ಸಾಮಾಜಿಕ, ಅರ್ಥಿಕ ಮಾಹಿತಿ ಅತ್ಯವಶ್ಯಕ ಎಂದು ಸಚಿವ ಎ ನಾರಾಯಣ ಸ್ವಾಮಿ ಜಾತಿ ಗಣತಿ ವರದಿ ಪರ ಬ್ಯಾಟ್ ಬೀಸಿದರು.
ಪ್ರತಿ ಐದು ವರ್ಷಕ್ಕೊಮ್ಮೆ ಜಾತಿಗಣತಿ ವರದಿ ಆಗಬೇಕು ಎಂದ ಸಚಿವರು, ವರದಿ ನಾಪತ್ತೆ ವಿಚಾರ, ಎಲ್ಲಿ ನಾಪತ್ತೆ ಆಯ್ತು ತನಿಖೆ ಆಗಬೇಕಿತ್ತು. ಆದರೆ, ತನಿಖೆ ಮಾಡದೆ ಜನರ ದಿಕ್ಕು ತಪ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.
ಒಳ ಮೀಸಲಾತಿ ಕುರಿತು ಎ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಬದ್ದ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ಒಲವು ತೋರಿಸಿದ್ದಾರೆ. ಸುಪ್ರಿಂ ಕೋರ್ಟ್ ಸಹ ಫೆಬ್ರವರಿಯಲ್ಲಿ ಈ ಬಗ್ಗೆ ತೀರ್ಪು ನೀಡಲಿದೆ ಎಂದು ಹೇಳಿದರು.
ಸಂತರ ದಿಶಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಭೀಕರ ಬರ ಇರುವ ಹಿನ್ನೆಲೆ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಬಗ್ಗೆ ಗಮನ ಹರಿಸ ಬೇಕು,ಕಾಡು ಗೊಲ್ಲರು ವಾಸ ಮಾಡುವ ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಲು ಸೂಚಿಸಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ಜನರಿಗೆ ಸ್ಪಂದಿಸಿ ಕೆಲಸ ಮಾಡಿ ನಿಗದಿತ ಅವಧಿಯೊಳಗೆ ತಮ್ಮ ಯೋಜನೆ ಅನುಷ್ಠಾನ ಮಾಡಿ , ರೈಲ್ವೆ ಯೋಜನೆಗಳ ಕೆಲಸ ಚುರುಕುಗೊಳಿಸಿ ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿಯ ಸಿಇಒ ಜೆ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್, ಪ್ರೇಮಾ ಹೆಗಡೆ, ಎನ್.ಎಸ್ ಜಯಕುಮಾರ್, ಲೋಕೇಶ್ವರಿ ಪ್ರಭು ಹಾಗೂ ಅಧಿಕಾರಿಗಳು ಇದ್ದರು.