Advertisement

ಕುಷ್ಟಗಿ: ಸ್ವಂತ ಖರ್ಚಿನಲ್ಲಿ ಹಿಂದೂ ಧರ್ಮಿಯರ ಸಾಮೂಹಿಕ ವಿವಾಹ ಮಾಡಿಸಿದ ಮುಸ್ಲಿಂ ವ್ಯಕ್ತಿ

02:44 PM Mar 14, 2022 | Team Udayavani |

ಕುಷ್ಟಗಿ: ಸ್ವಂತ ಖರ್ಚಿನಲ್ಲಿ  ಹಿಂದೂ ಧರ್ಮಿಯರ ಸಾಮೂಹಿಕ ವಿವಾಹ ಮಾಡಿಸಿದ ಮುಸ್ಲಿಂ ವ್ಯಕ್ತಿ

Advertisement

ಕುಷ್ಟಗಿ: ಕುಷ್ಟಗಿ ತಾಲೂಕಿನ ಗುತ್ತಿಗೆದಾರ ರಹೇಮಾನಸಾಬ್ ದೊಡ್ಡಮನಿ ತಮ್ಮ ಸ್ವಗ್ರಾಮ ಹಿರೇ ಬನ್ನಿಗೋಳ ಗ್ರಾಮದಲ್ಲಿ ಹಿಂದೂ ಧರ್ಮಿಯರ ಐದು ಜೋಡಿ ಸಾಮೂಹಿಕ ವಿವಾಹವನ್ನು ಮಾಡಿಸಿದ್ದಾರೆ. ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಿಯರ ಮದುವೆ ಮಾಡಿಸುವ ಮೂಲಕ ಭಾವೈಕ್ಯತೆಯನ್ನು ಬಲಗೊಳಿಸಿದ್ದಾರೆ.

ರಹೇಮಾನಸಾಬ್ ದೊಡ್ಡಮನಿ ಅವರು, ತಮ್ಮ ಗ್ರಾಮಕ್ಕೆ ಹೊಂದಿಕೊಂಡಿರುವ ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಭಾರತ ರತ್ನ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರಿನಲ್ಲಿ ಶಾಲೆ ಆರಂಭಿಸಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಹೈಟೆಕ್ ಶಾಲೆ ಆರಂಭಿಸಿದ್ದರು. ಇದಾದ ಬಳಿಕ ಸಾರ್ವಜನಿಕರಿಗೆ ಹಾಗೂ ಗ್ರಾಮೀಣ ಪ್ರದೇಶದವರಿಗೆ ಅನುಕೂಲ ಉದ್ದೇಶ ಹಿನ್ನೆಲೆಯಲ್ಲಿ ಮಾ.13 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಅಟಲ್ ಸಭಾ ಭವನ ನಿರ್ಮಿಸಿದ್ದರು. ಈ ಬೃಹತ್ ಕಟ್ಟಡದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸರ್ವ ಧರ್ಮಿಯ‌ ಸಾಮೂಹಿಕ ಮದುವೆ ನಿರ್ಧರಿಸಿದ್ದರು. ಆದರೆ  ಆ ವೇಳೆ‌ ಮುಸ್ಲಿಂ ಸಮುದಾಯದವರು ಸಾಮೂಹಿಕ ವಿವಾಹಕ್ಕೆ‌ ಮುಂದೆ ಬರಲಿಲ್ಲ. ಹೀಗಾಗಿ ಐದು ಜೋಡಿ ಹಿಂದು ಸಮುದಾಯದದವರ ಉಚಿತ ಸಾಮೂಹಿಕ ವಿವಾಹ ಮಾಡಿಕೊಟ್ಟರು. ಹಸೆ ಮಣೆ ಏರಿದ ವಧು ವರರಿಗೆ ತಾಳಿ, ಬಟ್ಟೆ ಬರೆ ಮದುವೆಗೆ ಬೇಕಿರುವ ಖರ್ಚುಗಳನ್ನು ರಹೇಮಾನಸಾಬ್ ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ,   ಕುರಿ‌ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ, ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಹಸನಸಾಬ್ ದೋಟಿಹಾಳ ಸೇರಿದಂತೆ ಮಠಾದೀಶರು, ಹಿಂದು ಹಾಗೂ ಮುಸ್ಲಿಂ ಸಮುದಾಯದ ಧರ್ಮಗುರುಗಳು ಭಾಗವಹಿಸಿ ನೂತನ ವಧು ವರರನ್ನು ಹಾರೈಸಿದರು.

Advertisement

ಇದೇ ವೇಳೆ ಮಾತನಾಡಿದ ರಹೇಮಾನಸಾಬ್ ದೊಡ್ಡಮನಿ, ನಾನು ಗ್ರಾಮದಲ್ಲಿ ತೀರ ಕಷ್ಟ ದ ಪರಿಸ್ಥಿತಿಯಲ್ಲಿ ಬೆಳೆದಿದ್ದೇನೆ. ಶಿಕ್ಷಕನಾಗಿದ್ದಾರೆ ಈ ಸೇವೆ ನನ್ನಿಂದ ಅಸಾಧ್ಯವಾಗುತ್ತಿತ್ತೇನೋ. ಗ್ರಾಮೀಣ ಕೃಪಾಂಕದ ಹಿನ್ನೆಲೆಯಲ್ಲಿ ಶಿಕ್ಷಕ ಕನಸು ನುಚ್ಚು ನೂರಾಯಿತು. ನಂತರ ಗುತ್ತಿಗೆದಾರನಾಗಿ ಸೇವೆ ಸಲ್ಲಿಸುತ್ತಿದ್ದು ಸಮಾಜದ ಋಣ ಸಮಾಜಕ್ಕೆ ಸಮರ್ಪಿಸಿದ್ದೇನೆ. ಎಪಿಜೆ ಅಬ್ದುಲ್ ಕಲಾಂ ಹಾಗೂ ಅಟಲ್ ಬಿಹಾರಿ ವಾಜಪೇಯಿ ನನಗೆ ಆದರ್ಶವಾಗಿದ್ದವರು ಅವರ ಹೆಸರನಲ್ಲಿ ಶಾಲೆ, ಸಭಾ ಭವನ ನಿರ್ಮಿಸಿದ್ದೇನೆ. ಈ ಸಭಾ ಭವನ ಎಲ್ಲಾ ಧರ್ಮಿಯರು ಮದುವೆ ಮಾಡಿಕೊಳ್ಳಬಹುದು ಕೇವಲ 21 ಸಾವಿರ ರೂ. ವೆಚ್ಚದಲ್ಲಿ ಅಡುಗೆ ಸಾಮಾನು, ಶಾಮೀಯಾನ, ವೇದಿಕೆ ಅಲಂಕಾರ, ನೀರು, ವಿದ್ಯುತ್ ಸರಬರಾಜು, ಜನರೇಟರ್ ಇತ್ಯಾದಿಯಾಗಿ ಉಚಿತವಾಗಿರುತ್ತದೆ ಎಂದರು. ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಕಿ ರಹೇಮಾನಸಾಬ್ ದೊಡ್ಡಮನಿ ಅವರ ಪತ್ನಿ ಸಾಥ್ ನೀಡಿದ್ದಾರೆ.

 

 ವರದಿ: ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next