Advertisement

ಸದ್ದಾಮನ ಶ್ರೀರಾಮ ನವಮಿ

01:37 PM Apr 20, 2019 | Lakshmi GovindaRaju |

ರಾಜಾಜಿನಗರದ ರಾಮಮಂದಿರದಲ್ಲಿ ದೇವರಾಗಿ ಶ್ರೀರಾಮನಿದ್ದರೆ, ಭಕ್ತನಾಗಿ ಸದ್ದಾಂ ಹುಸೇನ್‌ ಇದ್ದಾನೆ! ರಾಮನವಮಿಯಂದು ನಡೆವ ಬ್ರಹ್ಮ ರಥೋತ್ಸವಕ್ಕೆ ರಥವನ್ನು ಚೆಂದಗಾಣಿಸುವುದು ಇದೇ ಸದ್ದಾಂ ಹುಸೇನ್‌. ಅಷ್ಟೇ ಅಲ್ಲ; ರಾಮಮಂದಿರದಲ್ಲಿರುವ ಸೀತಾ-ರಾಮ, ಲಕ್ಷ್ಮಣರ ಮೂರ್ತಿಗಳನ್ನು ತೊಳೆದು ಶುಚಿಗೊಳಿಸುವ ಕೆಲಸಕ್ಕೂ ಇವನೇ ಮುಂದಾಳು…

Advertisement

ಅಲ್ಲೇ ಮೈಕಿನಿಂದ ಕೌಸಲ್ಯ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೆ… ಶ್ಲೋಕ ಕಿವಿಗೆ ಬೀಳುತ್ತಿತ್ತು. ರಾಮನ ತುಂಬುಗೆನ್ನೆಗೆ ಅಂಟಿದ ಧೂಳನ್ನು ಕೊಡವುತ್ತಾ ನಿಂತಿದ್ದ ಸದ್ದಾಂ ಹುಸೇನ್‌ಗೆ ಅದ್ಯಾವ ಭಾಷೆ, ಅದ್ಯಾವ ಶ್ಲೋಕವೆಂದೇನೂ ತಿಳಿದಿಲ್ಲ. ವಿಶ್ವಾಮಿತ್ರರಂತೆ ಈತನೂ ರಾಮನ ಅಂದ- ಚೆಂದಕ್ಕೆ ಮಾರುಹೋದ ಸಾಮಾನ್ಯ ಮನುಷ್ಯ. ಕಮಾನು ಮೇಲಿನ ರಾಮನ ಪಾದ ತೊಳೆದು, ಹೆಗಲಿಗೆ ನೇತುಬಿದ್ದ ಬಿಲ್ಲನ್ನು ಶುಚಿಗೊಳಿಸಿ, ಸೀತೆ- ಲಕ್ಷ್ಮಣರಿಗೂ ಸ್ನಾನ ಮಾಡಿಸಿ, ಸದ್ದಾಂನ ದೇಹಕ್ಕೆ ಸುಸ್ತಾಯಿತು ನೋಡಿ… ಆಗ ಆತನ ಬಾಯಿಂದ ಬಂದಿದ್ದೂ ರಾಮನೆ!

ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಹೊಮ್ಮುವ ಭಾವೈಕ್ಯತೆಯ ಚೆಲುವು ಈ ಬಗೆಯದ್ದು. ಇಲ್ಲಿನ ರಾಮನ ಅಂಗಳದಲ್ಲಿ ನಿಂತ ಭಕ್ತಾದಿಗಳ ಕಾಲು ತಂಪಾದರೆ, ಕಮಾನಿನ ಬಣ್ಣದಲ್ಲಿ ಆಕರ್ಷಣೆ ತುಳುಕಿದರೆ, ರಥಕ್ಕೆ ಬಳಿದ ಚಿತ್ತಾರದಲ್ಲಿ ಸೊಬಗು ತೋರಿದರೆ, ಪ್ರಾಕಾರದ ಎಲ್ಲೆಲ್ಲೂ ಶುಚಿ ಎನ್ನುವ ಭಾವ ಹುಟ್ಟಿದರೆ, ಆ ಪುಣ್ಯ ಕೆಲಸಗಳ ಹಿಂದೆ ಸದ್ದಾಂ ಎಂಬ ಇಪ್ಪತ್ತೇಳರ ಯುವಕನ ಶ್ರದ್ಧೆ ಇಣುಕಿರುತ್ತದೆ.

ರಥಕ್ಕೆ ಮೆರುಗು ತರುವ ಸದ್ದಾಂ: ರಾವನವಮಿಯ ದಿನ ನಡೆಯುವ ಬ್ರಹ್ಮರಥೋತ್ಸವ ಇಲ್ಲಿನ ಪ್ರಮುಖ ಸಂಪ್ರದಾಯ. ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಓಡಾಡುವ ಈ ರಥವನ್ನು ಅಂದಗಾಣಿಸುವುದು ಕೂಡ ಸದ್ದಾಮನೇ. ರಥದ ಕ್ಲೀನಿಂಗ್‌ ಅಂದರೆ, ಅದು ದಿನವಿಡೀ ಹಿಡಿಯುವ ಕೆಲಸ. ಚಕ್ರಗಳನ್ನೆಲ್ಲ ಬಿಚ್ಚಬೇಕು. ಗಟ್ಟಿಯಾದ ಹಳೇ ಗ್ರೀಸ್‌ ಅನ್ನು ಸ್ವತ್ಛ ಮಾಡಬೇಕು. ಅದರ ಮೇಲೆ ಓವರ್‌ ಆಯಿಲಿಂಗ್‌ ಮಾಡಿ, ಒಂದು ಟ್ರಯಲ್ ರನ್‌ ಮಾಡಿ ನಿಲ್ಲಿಸಬೇಕು. ಕಳೆದ ನಾಲ್ಕು ವರ್ಷದಿಂದ ಸದ್ದಾಂ ಈ ಕೆಲಸದಲ್ಲಿ ಪಳಗಿದವನು. ಅಗತ್ಯಬಿದ್ದರೆ, ರಥಕ್ಕೆ ಚೆಂದದ ಪೇಂಟಿಂಗನ್ನೂ ಮಾಡುವ ಕಲಾವಿದ.

Advertisement

ಐದು ದಿನ ಮೊದಲೇ ಹಾಜರ್‌: ರಾಮನವಮಿ ದಿನ ವಿಶೇಷ ಪೂಜೆ ನಡೆಯುತ್ತೆ, ಹೋದವರಿಗೆಲ್ಲ ಪಾನಕ- ಕೋಸಂಬರಿ ಕೊಡುತ್ತಾರೆ ಅನ್ನೋದಷ್ಟೇ ರಾಮಮಂದಿರಗಳ ಕೆಲಸವಲ್ಲ. ನವಮಿಗೆ ಇರುವ ಪೂರ್ವತಯಾರಿ ಸಾಕಷ್ಟು ಶ್ರಮ ಬೇಡುವಂಥದ್ದು. ಅದರಲ್ಲಿ ದೇಗುಲದ ಸ್ವತ್ಛತೆ, ವಿಗ್ರಹಗಳನ್ನು ಹೊಳಪೇರಿಸುವ ಕೆಲಸವೂ ಪ್ರಮುಖ. ರಾಮನವಮಿಗೆ ಐದು ದಿನ ಇರುವ ಮೊದಲೇ ಈ ಕೆಲಸಕ್ಕೆ ಕೈಹಾಕುತ್ತಾರೆ, ಗೋಪುರಕ್ಕೆ ನೀರು ಹಾಕಿ, ದೇವರುಗಳನ್ನು ಬ್ರಶ್‌ನಲ್ಲಿ ಉಜ್ಜಿ, ಚೆಂದ ಮಾಡುವ ಈ ಕೆಲಸದಲ್ಲಿ ಏನೋ ಸಮಾಧಾನ ಇದೆ ಎನ್ನುತ್ತಾನೆ ಸದ್ದಾಂ. ದೇವಸ್ಥಾನದಿಂದ ಕೊಟ್ಟ ಸಂಬಳದ ಒಂದು ಪಾಲನ್ನು ಬಡವರಿಗೆ ದಾನ ಮಾಡಿ, ಅಲ್ಪ ಹಣದಲ್ಲಿ ಬದುಕಿನ ಖುಷಿ ಕಾಣುವ ಫ‌ಕೀರನೀತ.

ರಾಮನ ನಂಟು ಬೆಸೆದಿದ್ದು ಹೇಗೆ?: ಎರಡನೇ ತರಗತಿಗೇ ಶಾಲೆ ಬಿಟ್ಟ ಸದ್ದಾಂನನ್ನು ಚೌತಿಯ ಗಣೇಶ ಸೆಳೆದುಬಿಟ್ಟ. ವೆಂಕಟೇಶ ಬಾಬು ಎಂಬುವರ ಅಂಗಡಿಯಲ್ಲಿ ಇಟ್ಟಿದ್ದ ಗಣೇಶ ಮೂರ್ತಿಗಳನ್ನೇ ಸದ್ದಾಂ ನೋಡುತ್ತಾ ನಿಂತನಂತೆ. ನಾನೂ ಈ ಗಣೇಶನನ್ನು ಎತ್ತಿಡಲಾ? ಅಂತ ಪದೇಪದೆ ಕೇಳಿದನಂತೆ. ಕೊನೆಗೂ, ಬಾಬು ಅವರು ಅನುಮತಿಕೊಟ್ಟ ಮೇಲೆ, ನೀಟಾಗಿ ಗಣೇಶನನ್ನು ಎತ್ತಿ ಇಟ್ಟನಂತೆ. ಅಂದಿನಿಂದ ಪ್ರತಿವರ್ಷ ಅವರ ಅಂಗಡಿಗೆ ಗಣೇಶ ಬಂದರೆ, ಅದರ ಉಸ್ತುವಾರಿ ಸದ್ದಾಮನದ್ದೇ ಆಗಿಹೋಯಿತು.

ಕಳೆದ 19 ವರ್ಷಗಳಿಂದ ಹೀಗೆ ಗಣೇಶ ವಿಗ್ರಹಗಳ ಲೋಡ್‌ ಇಳಿಸಿ, ಅದನ್ನು ಎತ್ತಿ, ರ್ಯಾಕ್‌ನಲ್ಲಿಡುವ ಕೆಲಸ ಮಾಡುವ ಸದ್ದಾಂ, ಗ್ರಾಹಕರ ಮನೆ ಮನೆಗೂ ಗಜಮುಖನನ್ನು ತಲುಪಿಸುತ್ತಾನೆ. ಆ ಗ್ರಾಹಕರೂ ನೆಮ್ಮದಿಯಿಂದ ಪೂಜೆ ಮಾಡುತ್ತಾರೆ ಎನ್ನುತ್ತಾರೆ ವೆಂಕಟೇಶ ಬಾಬು. ನಾಲ್ಕು ವರ್ಷಗಳ ಹಿಂದೆ ಇವರು ಶ್ರೀರಾಮ ಮಂದಿರದ ಸೇವಾ ಮಂಡಳಿಯ ನಿರ್ದೇಶಕರಾದ ಮೇಲೆ, ಸದ್ದಾಂನನ್ನು ರಾಮಮಂದಿರದ ಅಂಗಳಕ್ಕೆ ಕರೆತಂದರು.

ಅಂದಹಾಗೆ, ಸದ್ದಾಂ ಇದೊಂದೇ ಕೆಲಸ ಮಾಡುವುದಿಲ್ಲ. ಮನೆ ಶಿಫ್ಟಿಂಗ್‌, ಗಾರೆ ಕೆಲಸ, ಕ್ಯಾಬ್‌ ಡ್ರೈವಿಂಗ್‌ಗೂ ಸೈ. ಮಸೀದಿ, ಜೈನ ಮಂದಿರಗಳನ್ನೂ ತೊಳೆದು, ಹೊಳಪು ಮಾಡಿದ ಹೆಮ್ಮೆ ಈತನಿಗಿದೆ. ಒಟ್ಟಿನಲ್ಲಿ ಈತ ಭಾವೈಕ್ಯತೆಯ ರಾಯಭಾರಿಯಂತೆ ಕಾಣುತ್ತಾನೆ.

ಇದೊಂದು ಭಾವೈಕ್ಯ ಧಾಮ: ರಾಜಾಜಿನಗರದ ರಾಮಮಂದಿರದಲ್ಲಿ ಕೇವಲ ಸದ್ದಾಂ ಮಾತ್ರವೇ ಅಲ್ಲ, ಅವರ ತಾಯಿಯೂ ಕೆಲಸಕ್ಕೆ ಬರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಕಾರ್ಯಕ್ರಮಗಳಾದಾಗ, 15 ಮುಸ್ಲಿಂ ಮಹಿಳೆಯರು ಕೆಲಸಕ್ಕೆ ಬರುತ್ತಾರೆ.

ಇಸ್ಕಾನ್‌ನಲ್ಲಿ ರಿಯಾಜ್‌
ಇಸ್ಕಾನ್‌ ಕೃಷ್ಣ-ರಾಧೆಯ ವಿಗ್ರಹವನ್ನು ಗಮನಿಸಿದ್ದೀರಾ? ಇಲ್ಲವಾದರೆ ಗಮನಿಸಿ. ದೇವರ ಉಡುಗೆ ತೊಡುಗೆಗಳನ್ನು ನೋಡಿ ಆಶ್ಚರ್ಯಪಡುತ್ತೀರಿ. ಇದರ ಕಾಸ್ಟ್ಯೂಮ್‌ ಡಿಸೈನರ್‌ ಯಾರು ಗೊತ್ತೆ? ಕಮರ್ಷಿಯಲ್‌ ಸ್ಟ್ರೀಟ್‌ನ ರಿಯಾಜ್‌ ಪಾಶ ಅಂತ. ಸುಮಾರು 20 ವರ್ಷ ಗಳಿಂದ ಇಸ್ಕಾನ್‌ ದೇವರ ಉಡುಗೆಗಳನ್ನು ಹೊಲೆಯುತ್ತಿದ್ದಾರೆ. ಪ್ರತಿಯೊಬ್ಬರೂ ದೇವರ ಸೇವೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಹೀಗಾಗಿ, ಈ ಕೆಲಸದಲ್ಲಿ ದೇವರನ್ನು ಕಾಣುತ್ತಿದ್ದೇನೆ ಎನ್ನುತ್ತಾರೆ ಪಾಶ.

ರಿಯಾಜ್‌ ಈಗಾಗಲೇ ನೂರಾರು ಉಡುಗೆಗಳನ್ನು ಹೊಲಿದುಕೊಟ್ಟಿದ್ದಾರೆ. ಮೊದಲು ದೇವರಿಗೆ ಹೊಲಿದು ಕೊಡ್ತೀರಾ ಅಂತ ಕೇಳಿದಾಗ, ರಿಜ್ವಾನ್‌ ಯಾವುದೇ ರೀತಿಯ ಹಿಂಜರಿಕೆ ತೋರಲಿಲ್ಲವಂತೆ. ಪ್ರತಿದಿನ ದೇವರಿಗೆ ಎರಡು ಬಾರಿ ಉಡುಗೆ ಬದಲಿಸುವ ಸಂಪ್ರದಾಯವಿದೆ. ವಿಗ್ರಹಗಳು ಎದ್ದು ಕಾಣುವಂತೆ ಮಾಡಲು ಹೆಚ್ಚಾಗಿ ಕಾಂಜೀವರಮ್‌ ಸೀರೆ ಯನ್ನು ಬಳಸುತ್ತಾರೆ. ಪಾಶಗೆ ಒಂದು ಉಡುಗೆ ಹೊಲಿದು ಕೊಡಲು 3-4 ದಿನ ಬೇಕಂತೆ. ಕುಸುರಿ ಕೆಲಸ ಹೆಚ್ಚಿದ್ದರೆ ಒಂದು ವಾರದಷ್ಟು ಸಮಯ ತೆಗೆದುಕೊಳ್ಳುವುದು ಉಂಟಂತೆ.

— ಕೀರ್ತಿ

Advertisement

Udayavani is now on Telegram. Click here to join our channel and stay updated with the latest news.

Next