ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ಕೆಲವರಿಗೆ ನೆನಪಾಗುವುದು ಕೋಮು ದಳ್ಳುರಿ, ಪರಸ್ಪರ ದ್ವೇಷ, ಜಾತಿಯಾಧಾರಿತ ಗಲಭೆ. ಆದರೆ, ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಈ ಜಿಲ್ಲೆಯ ಕೆಲವು ಕಡೆ ಕೋಮು ಸಾಮರಸ್ಯ ಮೇಳೈಸುವ ಘಟನೆಗಳು ನಡೆಯುತ್ತಿರುತ್ತದೆ. ಇದಕ್ಕೆ ಜೀವಂತ ಸಾಕ್ಷಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮ.
ಹೌದು, ಸವಣಾಲಿನದಲ್ಲಿರುವ ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಕಾಳಿಕಾಂಬೆಯ ಸ್ಥುತಿಯನ್ನು ಅದೇ ಗ್ರಾಮದ ಮುಸ್ಲಿಂ ಸಮುದಾಯದ ರಮ್ಲಾನ್ ರಚಿಸಿ, ಗಾಯನ ಮಾಡಿ ಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾನೆ.
ಕಾಳಿಕಾಂಬ ದೇಗುಲದ ಪಕ್ಕದಲ್ಲೇ ವಾಸವಾಗಿರುವ ರಮ್ಲಾನ್ ಕಾಳಿಕಾಮಾತೆಯ ಪರಮ ಭಕ್ತ. ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಾಮರಸ್ಯ ಸಾರುತ್ತಿದ್ದಾನೆ. ಮುಸಲ್ಮಾನನಾದರೂ ದುರ್ಗೆಯ ಆರಾಧನೆಯನ್ನು ಮುಕ್ತ ಮನಸ್ಸಿನಿಂದ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
‘ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ’ ಎಂಬ ಭಕ್ತಿಗೀತೆ ರಮ್ಲಾನ್ ಸುಂದರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿ ಬಂದಿದೆ. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಈತ ಹೇಳಿರುವ ದುರ್ಗೆಯ ಕುರಿತಾದ ಗೀತೆಯನ್ನು ಎಸ್.ಕೆ.ಕ್ರಿಯೇಷನ್ ಎಂಬ ಯೂಟ್ಯೂಬ್ ಪೇಜ್ ನಲ್ಲಿ ನೋಡಬಹುದಾಗಿದೆ.
ಇನ್ನು ಸವಣಾಲಿನ ಶ್ರೀ ಕಾಳಿಕಾಂಬ ಕ್ಷೇತ್ರ 1200 ವರ್ಷಗಳ ಇತಿಹಾಸವುಳ್ಳ ಪುಣ್ಯ ಪ್ರಸಿದ್ಧ ಕ್ಷೇತ್ರ. ಸುತ್ತಲೂ ಕಾಡಿನಿಂದ ಆವೃತ್ತವಾದ ನೈಸರ್ಗಿಕವಾಗಿ ಅದ್ಭುತ ಸೌಂದರ್ಯ ಹೊಂದಿದೆ. ದುರ್ಗಾ ದೇವತೆ, ಕಾಳಿಕಾಂಬ ದೇವತೆಯನ್ನು ಇಲ್ಲಿ ಪ್ರಧಾನವಾಗಿ ಪೂಜಿಸಲಾಗುತ್ತದೆ. ಅಲ್ಲದೆ ಗಣಪತಿ, ಶ್ರೀಧರ ಸ್ವಾಮಿ, ಶಿವ ದಕ್ಷಿಣ ಮೂರ್ತಿ, ರಣಗುಲಿಗ, ಶ್ರೀ ನಾಗರಾಜ, ಭೈರವರನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇದೆ ಕಾರಣಿಕ ದೇವಸ್ಥಾನದೆಡೆಗೆ ರಮ್ಲಾನ್ ಅಪಾರ ಭಕ್ತಿಯಿಟ್ಟು ಈ ಗಾಯನ ಸ್ತುತಿಸಿ ಸಾಮರಸ್ಯಕ್ಕೊಂದು ಅಪರೂಪದ ಮೆರುಗು ತಂದಿದ್ದಾರೆ.