ಉಡುಪಿ: ಸುಬ್ರಹ್ಮಣ್ಯ ನಗರದ ವಾರ್ಡ್‌ನಲ್ಲಿರುವ ಸರಕಾರಿ ಶಾಲೆಯ ಹಿಂಬದಿ ರಸ್ತೆಯು ದುರಾವಸ್ಥೆಯಿಂದ ಕೂಡಿದೆ.
ಚರಂಡಿ ವ್ಯವಸ್ಥೆಯೇ ಇಲ್ಲ
ಮಳೆ ನೀರು ಹರಿದು ಹೋಗಲು ಈ ಭಾಗದ ಎರಡೂ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ರಸ್ತೆಯ ನೀರು ನೇರವಾಗಿ ಮನೆಯ ಕೌಂಪೌಂಡು ಒಳಗೆ ಹರಿದು ರಸ್ತೆ, ಮನೆ ಎಲ್ಲ ಕೆಸರುಮಯವಾಗುತ್ತಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕೂಡ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಯಾವುದೇ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇದರಿಂದಾಗಿ ಮಕ್ಕಳು ರಸ್ತೆಯಲ್ಲಿ ಹೋಗಲು ಹಿಂಜರಿಯುತ್ತಿದ್ದಾರೆ. ಆಟೋ ರಿಕ್ಷಾ ಬಂದರಷ್ಟೇ ಇಲ್ಲಿನವರಿಗೆ ಓಡಾಡಲು ಅನುಕೂಲ. ಮಳೆ ನೀರು ಇಷ್ಟಕ್ಕೆ ನಿಲ್ಲದೆ ಪಕ್ಕದಲ್ಲಿರುವ ಮನೆಗಳ ಕಾಂಪೌಂಡ್ ಒಳಗೂ ಹರಿಯುತ್ತಿದೆ. ಈ ಬಗ್ಗೆ ನಗರಸಭೆಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸುತ್ತಾರೆ ಇಲ್ಲಿನ ಸ್ಥಳೀಯರು.
ಮನವಿ ನೀಡಲಾಗಿದೆ
ರಸ್ತೆಗೆ ಕಾಂಕ್ರೀಟ್ ಅಳವಡಿಸುವ ಬಗ್ಗೆ ಹಾಗೂ ಒಳಚರಂಡಿ ನಿರ್ಮಿಸುವ ಬಗ್ಗೆ ನಗರಸಭೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಪೈಕಿ ಒಳಚರಂಡಿ ನಿರ್ಮಾಣಕ್ಕೆ ತಡೆ ಬಂದ ಕಾರಣ ಸದ್ಯಕ್ಕೆ ನಿರ್ಮಾಣ ಅಸಾಧ್ಯ. ಕಾಂಕ್ರೀಟ್ ರಸ್ತೆಯ ಕಾಮಗಾರಿ ಮಳೆಗಾಲ ಮುಗಿದ ಅನಂತರ ಆರಂಭಿಸುವ ಚಿಂತನೆಯಿದೆ.
-ಜಯಂತಿ ಕೆ. ಪೂಜಾರಿ,ವಾರ್ಡ್ ಸದಸ್ಯರು, ಸುಬ್ರಹ್ಮಣ್ಯ ನಗರ