ಉಡುಪಿ: ಕೋವಿಡ್ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ಘೋಷಿಸಿದ್ದ ದೇಶವ್ಯಾಪಿ ಲಾಕ್ ಡೌನ್ ಇದೀಗ ಎರಡನೇ ಹಂತದಲ್ಲಿ ಮುಂದುವರಿಯುತ್ತಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ತೊಂದರೆಗೊಳಗಾದವರಿಗೆ ದೇಶಾದ್ಯಂತ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಸ್ವಯಂ ಸೇವಕರು ಹೀಗೆ ವಿವಿಧ ವರ್ಗಗಳ ಜನರು ಆಹಾರ ನೀಡುವ ಕಾರ್ಯವನ್ನು ಒಂದು ತಪಸ್ಸಿನಂತೆ ಮಾಡುತ್ತಿದ್ದಾರೆ.
ಇದೇ ರೀತಿಯಲ್ಲಿ ಉಡುಪಿಯ ಕಡಿಯಾಳಿಯ ಗಣೇಶೋತ್ಸವ ಸಮಿತಿಯೂ ಸಹ ಮಾರ್ಚ್ 25ರಿಂದಲೇ ಪ್ರಾರಂಭಿಸಿದ ಉಚಿತ ಊಟ ಪಾರ್ಸೆಲ್ ಸೇವೆ ಇಂದಿಗೆ 25ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ತಮ್ಮ ಅನ್ನದಾನ ಕಾರ್ಯಕ್ಕೆ ಹೊಸ ಹುರುಪು ತುಂಬಿದ ಘಟನೆಯೊಂದನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಅವರು ನೆನಪಿಸಿಕೊಂಡಿದ್ದಾರೆ.
ಅದು ಮಾರ್ಚ್ 30ನೇ ತಾರೀಖು, 11.45ರ ಸಮಯ, ಶಾರದಾ ಕಲ್ಯಾಣ ಮಂಟಪದಲ್ಲಿ ಅಡುಗೆ ತಯಾರಿ ಕಾರ್ಯ ಹಾಗೂ ಊಟದ ಪಾರ್ಸೆಲ್ ಸಿದ್ಧತೆ ಕೆಲಸಗಳು ಸ್ವಯಂಸೇವಕರ ಮುತುವರ್ಜಿಯಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸುಮಾರು 80 ವರ್ಷ ದಾಟಿದ ವೃದ್ಧೆಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲೊಂದು ಚೀಲ ಹಿಡಿದುಕೊಂಡು ಬರುತ್ತಾರೆ.
ಊಟದ ಪಾರ್ಸೆಲ್ ತೆಗದುಕೊಂಡು ಹೋಗಲು ಈ ಅಜ್ಜಿ ಬಂದಿರಬೇಕೆಂದು ಭಾವಿಸಿದ ಕಾರ್ಯಕರ್ತರು ಆ ಅಜ್ಜಿಗೆ ಸ್ವಲ್ಪ ಕಾಯುವಂತೆ ತಿಳಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ತನ್ನ ಚೀಲದಲ್ಲಿದ್ದ ಡಬ್ಬವೊಂದನ್ನು ಹೊರತೆಗೆದ ಆ ಅಜ್ಜಿ ಅದರಲ್ಲಿ ಒಬ್ಬರಿಗಾಗುವಷ್ಟಿದ್ದ ಅನ್ನವನ್ನು ಆ ಕಾರ್ಯಕರ್ತರ ಮುಂದಿಟ್ಟು ಹೇಳಿದ ಮಾತು ಎಂತವರಿಗೂ ಸ್ಪೂರ್ತಿದಾಯಕ ಆಗುವಂತದ್ದಾಗಿತ್ತು.
‘ನೀವು ಈ ಸಮಯದಲ್ಲಿ ಇಷ್ಟೊಂದು ಜನರಿಗೆ ಅನ್ನದಾನ ಮಾಡುವಾಗ ನನ್ನದೊಂದು ಕಿಂಚಿತ್ ಸೇವೆ’ ಎಂದು ಆಕೆ ಹೇಳಿ ತನ್ನ ಕೈಯಲ್ಲಿದ್ದ ಅನ್ನದ ಪ್ಲಾಸ್ಟಿಕ್ ಡಬ್ಬವನ್ನು ಇಟ್ಟಾಗ ಅಲ್ಲಿದ್ದವರ ಕಣ್ಣುಗಳಲ್ಲಿ ಸಾರ್ಥಕ ಭಾವದ ಕಣ್ಣೀರು ತುಂಬಿಕೊಂಡಿತ್ತು.
ಮತ್ತು ಅನ್ನಪೂರ್ಣೆ ಸ್ವರೂಪದಲ್ಲಿ ಬಂದ ಆ ಅಜ್ಜಿಯ ಮಾತುಗಳು ಎಲ್ಲಾ ಕಾರ್ಯಕರ್ತರಿಗೆ ಹುರುಪು ನೀಡಿ ಇಲ್ಲಿಯವರೆಗೆ ಉಡುಪಿ ಪರಿಸರದ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಶಕ್ತಿಯನ್ನು ತುಂಬಿದೆ. ಮತ್ತು ಗಣೇಶೋತ್ಸವ ಸಮಿತಿ ಕಡಿಯಾಳಿಯ ಈ ಸೇವೆ ಲಾಕ್ ಡೌನ್ ಮುಗಿಯುವವರೆಗೆ ಮುಂದಿವರಿಯಲು ಈ ಘಟನೆ ಸ್ಪೂರ್ತಿಯನ್ನು ತುಂಬಿದೆ ಎಂಬುದು ರಾಘವೇಂದ್ರ ಕಿಣಿ ಅವರ ಅಭಿಪ್ರಾಯ.