Advertisement

Mangaluru ಹಾಸ್ಟೆಲ್‌ ಸಿಗದಿದ್ದರೂ ಛಲ ಬಿಡದ ತಾಯಿ, ಮಗಳು

01:26 AM Jun 25, 2024 | Team Udayavani |

ಮಂಗಳೂರು: ಮಗಳಿಗೆ ಮಂಗಳೂರಿನ ಕಾಲೇಜಿನಲ್ಲಿ ಓದುವಾಸೆ. ಅದಕ್ಕೆ ತಾಯಿಯ ಪೂರಕ ಸ್ಪಂದನೆ. ಆದರೆ ಮಗಳಿಗೆ ಹಾಸ್ಟೆಲ್‌ನಲ್ಲಿ ಪ್ರವೇಶ ಸಿಕ್ಕಿಲ್ಲ, ನಗರದಲ್ಲಿ ವಾಸ್ತವ್ಯ ವ್ಯವಸ್ಥೆ ಇಲ್ಲ. ಆದರೂ ಛಲ ಬಿಡದ ತಾಯಿ, ಮಗಳ ಜತೆಗೆ ತಮ್ಮ ಹಳ್ಳಿಯಿಂದ ನಗರಕ್ಕೆ ಪ್ರತಿದಿನ 160 ಕಿ.ಮೀ.ಗೂ ಅಧಿಕ ದೂರ ಕ್ರಮಿಸುತ್ತಾರೆ. ಮಗಳು ತರಗತಿಗೆ ಹೋದರೆ, ತಾಯಿ ಕಾದು ಕುಳಿತುಕೊಳ್ಳುತ್ತಾರೆ. ತರಗತಿ ಮುಗಿಸಿ ಜತೆಯಾಗಿ ಮನೆಗೆ ಮರಳುತ್ತಾರೆ!

Advertisement

ಇದು ಶಿಕ್ಷಣಕ್ಕೆ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯ ಛಲದ ಕಥೆ.

ಮಂಗಳೂರಿನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಕಡಬದ ನಿವಾಸಿಯಾಗಿರುವ ಈ ಮಹಿಳೆಯ ಪುತ್ರಿ ಕಡಬದಲ್ಲಿ ಎಸೆಸೆಲ್ಸಿ ಮುಗಿಸಿದ್ದಾರೆ. ಪುತ್ರಿ ಪಿಯುಸಿಗೆ ಬಲ್ಮಠದ ಸರಕಾರಿ ಕಾಲೇಜೊಂದರ ಕಲಾವಿಭಾಗಕ್ಕೆ ಸೇರಿದ್ದಾಳೆ. ಇಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಕೆಲವು ಪೂರಕ ತರಬೇತಿಗಳನ್ನೂ ನೀಡುತ್ತಾರೆ, ಕ್ಯಾಂಪಸ್‌ ಆಯ್ಕೆಯೂ ಇದೆ ಎನ್ನುವ ಕಾರಣಕ್ಕೆ ಇಲ್ಲಿಗೆ ದೂರದೂರುಗಳಿಂದ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಈ ಅಮ್ಮ-ಮಗಳು ಹಾಸ್ಟೆಲ್‌ಗಾಗಿ ನಡೆಸಿದ ಪ್ರಯತ್ನ ಫ‌ಲ ಕೊಟ್ಟಿಲ್ಲ. ಹಾಸ್ಟೆಲ್‌ ಸಿಗುವ ವರೆಗೆ ಪ್ರತಿದಿನ ಬಂದು ಹೋಗಲು ನಿರ್ಧರಿಸಿದ್ದಾರೆ.

ವೆನ್ಲಾಕ್‌ ಪರಿಸರವೇ ಆಶ್ರಯ
ತಾಯಿ ಮತ್ತು ಮಗಳು ಕಡಬದಿಂದ ಬೆಳಗ್ಗೆ 6 ಗಂಟೆಯ ಬಸ್‌ ಏರಿ ಮಂಗಳೂರಿಗೆ ಬರುತ್ತಾರೆ. ಮಗಳನ್ನು ಕಾಲೇಜಿಗೆ ಬಿಟ್ಟು ತಾಯಿ ನಗರದ ವೆನ್ಲಾಕ್‌ ಆಸ್ಪತ್ರೆ ಪರಿಸರದಲ್ಲಿ ಉಳಿದುಕೊಳ್ಳುತ್ತಾರೆ. ಅಪರಾಹ್ನ 2.30ರ ಸುಮಾರಿಗೆ ಮಗಳ ಕಾಲೇಜಿನ ಬಳಿಯಿರುವ ಬಸ್‌ ನಿಲ್ದಾಣಕ್ಕೆ ಬರುತ್ತಾರೆ. 3.40ಕ್ಕೆ ತರಗತಿ ಮುಗಿಯುತ್ತದೆ. 4 ಗಂಟೆಯ ಬಳಿಕ ಬಸ್ಸಿನಲ್ಲಿ ಮನೆಗೆ ಪ್ರಯಾಣ!

ಹಾಸ್ಟೆಲ್‌ ಸಿಕ್ಕಿಲ್ಲ
ನಾನು ಬೀಡಿ ಕಟ್ಟುತ್ತಿದ್ದೆ. ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಈಗ ಮಗಳ ಜತೆ ಮಂಗಳೂರಿಗೆ ಬಂದು ಹೋಗುತ್ತೇನೆ. ಬೀಡಿ ಕಟ್ಟಲು ಸಮಯ ಸಿಗುವುದಿಲ್ಲ. ಪತಿ ಕೂಲಿ ಕೆಲಸ ಮಾಡುತ್ತಾರೆ. ಮಗಳ ಆಸೆಯಂತೆ ನಗರದ ಕಾಲೇಜಿಗೆ ಸೇರಿಸಿದ್ದೇವೆ. ಆದರೆ ಹಾಸ್ಟೆಲ್‌ ಸಿಗದೆ ಸಮಸ್ಯೆಯಾಗಿದೆ. ಒಬ್ಬಳೇ ಬಂದು ಹೋಗುತ್ತೇನೆ ಎನ್ನುತ್ತಾಳೆ. ಆದರೆ ನನಗೆ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ಅವಳ ಜತೆಗೆ ನಾನು ಕೂಡ ಬರುತ್ತೇನೆ. ನಗರಕ್ಕೆ ಬಂದು ಆಕೆಯ ತರಗತಿ ಮುಗಿಯುವ ವರೆಗೆ ಆಸ್ಪತ್ರೆಯ ಆವರಣದಲ್ಲಿ ಸಮಯ ಕಳೆಯುತ್ತೇನೆ. ಹಾಸ್ಟೆಲ್‌ನಲ್ಲಿ ವಿಚಾರಿಸಿದರೆ ಈಗ ಸೇರಿಸುವುದಿಲ್ಲ. ಸರ್ವರ್‌ ಸಮಸ್ಯೆ ಇದೆ. ದಾಖಲಾತಿ ಆರಂಭವಾಗಿಲ್ಲ ಎಂದಿದ್ದಾರೆ.
-ವಿದ್ಯಾರ್ಥಿನಿಯ ತಾಯಿ

Advertisement

ಸರ್ವರ್‌ ಸಮಸ್ಯೆ;
ಶೀಘ್ರ ಪರಿಹಾರ
ಪರಿಶಿಷ್ಟ ಜಾತಿಯವರ ಹಾಸ್ಟೆಲ್‌ ಪ್ರವೇಶ ಪ್ರಕ್ರಿಯೆಗೆ ಸರ್ವರ್‌ ಸಮಸ್ಯೆ ತೊಡಕಾಗಿದೆ. ಇದು ಇಡೀ ರಾಜ್ಯದಲ್ಲಿರುವ ಸಮಸ್ಯೆ. ಈ ಬಗ್ಗೆ ಸೋಮವಾರ ಸಭೆ ನಡೆಸಲಾಗಿದ್ದು, ಆನ್‌ಲೈನ್‌ನಲ್ಲಿ ದಾಖಲಾತಿ ಸಾಧ್ಯವಾಗದಿದ್ದರೆ ಮ್ಯಾನುವಲ್‌ ಅರ್ಜಿ ಸ್ವೀಕರಿಸಿ ದಾಖಲಾತಿ ಮಾಡಿಕೊಳ್ಳಲು ಆಯುಕ್ತರಿಂದ ಸೂಚನೆ ಬಂದಿದೆ. ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ವರ್‌ ಸಮಸ್ಯೆಯೂ ಶೀಘ್ರ ಬಗೆಹರಿಯುವ ನಿರೀಕ್ಷೆ ಇದೆ.
-ಪಾರ್ವತಿ, ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next