Advertisement

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

01:37 AM Jul 01, 2024 | Team Udayavani |

ಮಂಗಳೂರು: ಮುಂಗಾರು ಕ್ಷೀಣಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಬಿರುಸು ಕಡಿಮೆಯಾಗಿದೆ. ಮಂಗಳೂರು ಸಹಿತ ಜಿಲ್ಲಾದ್ಯಂತ ರವಿವಾರ ಸಾಧಾರಣ ಮಳೆಯಾಗಿದೆ.

Advertisement

ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.1ರಿಂದ ಜು.3ರ ವರೆಗೆ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ಈ ವೇಳೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ ರವಿವಾರ 27.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಕಡಿಮೆ ಮತ್ತು 24.3 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ಏರಿಕೆ ಕಂಡಿತ್ತು.

ಕಾಳಜಿ ಕೇಂದ್ರದಲ್ಲಿ 23 ಮಂದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮಂಗಳೂರಿನ ಪಂಜಿಮೊಗರು ವಾರ್ಡ್‌ ಸಂಭವನೀಯ ಗುಡ್ಡ ಕುಸಿತ ಆಗುವಂತಹ ಮನೆ ಮಂದಿಗೆ ಉಳಿದುಕೊಳ್ಳಲು ಆಶ್ರಯ ಕೇಂದ್ರವನ್ನು ತೆರೆದಿದ್ದು, ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

Advertisement

ವಿಪತ್ತು ವಿಕೋಪದಿಂದ ಎಪ್ರಿಲ್‌ನಿಂದ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. 8 ಮನೆಗೆ ಸಂಪೂರ್ಣ ಹಾನಿಯಾಗಿದ್ದು, 30 ಮನೆಗಳಿಗೆ ತೀವ್ರ ಹಾನಿ ಮತ್ತು 202 ಮನೆಗೆ ಭಾಗಶಃ ಹಾನಿಯಾಗಿದೆ. 6 ಪ್ರಾಣಿಗಳು ಸಾವನ್ನಪ್ಪಿದೆ. ಈವರೆಗೆ 2,546 ವಿದ್ಯುತ್‌ ಕಂಬ, 45 ಟ್ರಾನ್ಸ್‌ಫಾರ್ಮರ್‌, 127 ಕಿ.ಮೀ. ವಿದ್ಯುತ್‌ ತಂತಿ, 5.67 ಕಿ.ಮೀ. ಜಿಲ್ಲಾ ರಸ್ತೆ, 0.51 ಕಿ.ಮೀ. ರಾಜ್ಯ ರಸ್ತೆಗೆ ಹಾನಿ ಉಂಟಾಗಿದೆ.

ಬರೆ ಕುಸಿದು ಮನೆ ಅಪಾಯದಲ್ಲಿ
ಸುಳ್ಯ: ಬೆಳ್ಳಾರೆಯ ನವಗ್ರಾಮದಲ್ಲಿ ರವಿವಾರ ಬರೆ ಕುಸಿದು ಮನೆಯೊಂದು ಅಪಾಯ ದಲ್ಲಿದೆ. ಜಯರಾಮ ಉಮಿಕ್ಕಳ ಎಂಬವರ ಮನೆ ಇದಾಗಿದ್ದು, ಮಣ್ಣು ಜರಿದು ರಸ್ತೆಗೆ ಬಿದ್ದ ಪರಿಣಾಮ ಮನೆಗೆ ಹೋಗುವ ದಾರಿಯೂ ಮುಚ್ಚಿದೆ.

ಮಾಣಿ: ಮರ ಬಿದ್ದು ವಿದ್ಯುತ್‌ ಕಂಬಗಳಿಗೆ ಹಾನಿ
ಬಂಟ್ವಾಳ: ಮಾಣಿ ಜಂಕ್ಷನ್‌ನ ಪುತ್ತೂರು ಸಂಪರ್ಕ ರಸ್ತೆಯ ಬದಿಯಲ್ಲಿದ್ದ ಅರ್ಧ ಕಡಿದು ಬಿದ್ದಿದ್ದ ಬೃಹತ್‌ ಗಾತ್ರದ ಮರವೊಂದು ಬಿದ್ದು, 5-6 ವಿದ್ಯುತ್‌ ಕಂಬಗಳು ಹಾಗೂ ಕೋಳಿ ಶೆಡ್ಡೊಂದು ಹಾನಿಗೀಡಾದ ಘಟನೆ ರವಿವಾರ ಬೆಳಗ್ಗೆ 10.15ರ ಸುಮಾರಿಗೆ ಸಂಭವಿಸಿದೆ.

ಮೆಸ್ಕಾಂ ಸಿಬಂದಿ ವಿದ್ಯುತ್‌ ಕಂಬಗಳನ್ನು ಸರಿಪಡಿಸಿ ತಂತಿಗಳನ್ನು ಜೋಡಿಸಿದರು. ಘಟನೆ ನಡೆದಿರುವ ಸ್ಥಳವು ಜನನಿಬಿಡ ವಾಗಿದ್ದು, ಮರ ರಸ್ತೆಗೆ ಅಥವಾ ಪುಟ್‌ಪಾತ್‌ ಮೇಲೆ ಬಿದ್ದಿದ್ದರೆ ಹೆಚ್ಚು ಅಪಾಯವಾಗುವ ಸಾಧ್ಯತೆಯೂ ಇತ್ತು. ವಿದ್ಯುತ್‌ ತಂತಿಗಳು ಎಳೆದುಕೊಂಡು ಹೋಗುವ ರಭಸಕ್ಕೆ ಸ್ಥಳೀಯ ಅಂಗಡಿಯವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎನ್ನಲಾಗಿದೆ.

ಹಲವು ಸಮಯಗಳ ಹಿಂದೆಯೇ ಮರದ ಅರ್ಧ ಭಾಗವನ್ನು ಕಡಿಯಲಾಗಿತ್ತು. ಅದರ ಪಕ್ಕದಲ್ಲೇ ಸಾಕಷ್ಟು ವಿದ್ಯುತ್‌ ತಂತಿಗಳು ಹಾದುಹೋಗಿದ್ದವು. ಮರ ಅಪಾಯಕಾರಿಯಾಗಿದ್ದರಿಂದ ಅದನ್ನು ತೆರವು ಮಾಡಲೂ ಆಗ್ರಹಿಸಿದ್ದೆವು. ಆದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಜಾಲ್‌ ಪಲ್ಲಕರೆ: ಕಾಂಕ್ರೀಟ್‌ ತೋಡು ಕುಸಿತ
ಮಂಗಳೂರು: ಬಜಾಲ್‌ ಪಲ್ಲಕೆರೆ ಎಂಬಲ್ಲಿ ಲೇಔಟ್‌ ಒಂದರ ಕಾಂಕ್ರೀಟ್‌ ತೋಡು ಕುಸಿದು ಕೆಳಭಾಗದಲ್ಲಿದ್ದ ಮನೆಯೊಂದಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರವಿವಾರ ಮಧ್ಯಾಹ್ನ 2.45- 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಲೇಔಟ್‌ನಲ್ಲಿ ಹಿಟಾಚಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಂಕ್ರೀಟ್‌ನಿಂದ ಮಾಡಿದ ಸುಮಾರು 30-40 ಮೀ. ಉದ್ದದ ತೋಡು ಕುಸಿದಿದೆ. ಈ ವೇಳೆ ಅಲ್ಲೇ ಮರಗಳು ತೋಡು ಹಾಗೂ ಮಣ್ಣು ಜರಿದು ಮನೆ ಮೇಲೆ ಬೀಳದಂತೆ ತಡೆದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಮನೆಯಲ್ಲಿ ದಂಪತಿ, ಇಬ್ಬರು ಮಕ್ಕಳನ್ನು ಒಳಗೊಂಡ ಕಾರ್ಮಿಕ ಕುಟುಂಬವೊಂದು ಬಾಡಿಗೆಗೆ ವಾಸವಾಗಿತ್ತು.

ಲೇಔಟ್‌ಗೆ ಸಂಬಂಧಿಸಿದವರೇ ಪಕ್ಕದ ಮಹಾದೇವಿ ನಗರಕ್ಕೆ ಮನೆಯವರನ್ನು ಸ್ಥಳಾಂತರಿಸಿದ್ದು, ಕುಸಿದ ಸ್ಥಳವನ್ನು ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಸ್ಥಳೀಯ ಮನಪಾ ಸದಸ್ಯ ಅಶ್ರಫ್‌ ಬಜಾಲ್‌, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ
ಉಡುಪಿ: ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಮತ್ತು ಸಂಜೆಯ ವೇಳೆ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ.

ಉಡುಪಿ-ಮಣಿಪಾಲ ಪರಿಸರದಲ್ಲಿ ಬೆಳಗ್ಗೆ ಮತ್ತು ಸಂಜೆ ಉತ್ತಮ ಮಳೆ ಸುರಿದಿದೆ. ಕೆಲವು ದಿನಗಳ ಬಳಿಕ ಸಿಡಿಲಿನ ಆರ್ಭಟವೂ ಜೋರಾಗಿತ್ತು. ಸ್ವಲ್ಪ ಸಮಯ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತ್ತು. ಯಾವುದೇ ನಷ್ಟ ಉಂಟಾದ ಬಗ್ಗೆ ವರದಿಯಾಗಿಲ್ಲ.

ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ರಭಸವಾಗಿ ಗಾಳಿ ಬೀಸಿದ್ದರಿಂದ ಮರಗಳು ಉರುಳಿ ಬಿದ್ದಿವೆ. ಬಸ್ರೂರಿನಲ್ಲಿ ಮರ ಬಿದ್ದು ಸುಮಾರು ಒಂದು ಗಂಟೆ ಅವಧಿ ಟ್ರಾಫಿಕ್‌ ಜಾಮ್‌ ಸಂಭವಿಸಿತು.

ಕಡಲಬ್ಬರ
ಕರಾವಳಿಯಾದ್ಯಂತ ರವಿವಾರವೂ ಕಡಲು ಅಬ್ಬರದಿಂದ ಕೂಡಿತ್ತು. ಬೃಹತ್‌ ಅಲೆಗಳು ಕಿನಾರೆಗೆ ಅಪ್ಪಳಿಸುತ್ತಿದ್ದುದರಿಂದ ಪಣಂಬೂರು, ಮಲ್ಪೆ, ಪಡುಬಿದ್ರಿ, ತ್ರಾಸಿ ಮೊದಲಾದೆಡೆ ಪ್ರವಾಸಿಗರು ಕಡಲಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next