Advertisement

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಮಾದರಿ ಗ್ರಾಮ

02:02 AM Sep 05, 2019 | mahesh |

ಸುಬ್ರಹ್ಮಣ್ಯ: ಒಂದು ಗ್ರಾಮದಲ್ಲಿ ಎಷ್ಟು ಶಿಕ್ಷಕರು ಇರಬಹುದು? 20ರಿಂದ 50 ಇದ್ದರೆ ಹೆಚ್ಚು. ಆದರೆ ಇಲ್ಲೊಂದು ಗ್ರಾಮ ಶಿಕ್ಷಕರಿಂದಲೇ ತುಂಬಿ ತುಳುಕುತ್ತಿದೆ. ಇಲ್ಲಿರುವ ಶಿಕ್ಷಕರ ಸಂಖ್ಯೆ ಬರೋಬ್ಬರಿ 196. ಶಿಕ್ಷಕರ ದಿನಾಚರಣೆ ವೇಳೆ ಈ ಗ್ರಾಮ ಗಮನ ಸೆಳೆಯುತ್ತಿದೆ.

Advertisement

ಈ ಗ್ರಾಮದವರನ್ನು ಮದುವೆಯಾಗಿ ಬಂದ ಶಿಕ್ಷಕಿಯರನ್ನು ಲೆಕ್ಕ ಹಾಕಿದರೆ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಇನ್ನು ಶಿಕ್ಷಕ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಿದೆ.

ನಾನಾ ಕ್ಷೇತ್ರಗಳಿಗೆ ಸಾಧಕರನ್ನು ಕೊಟ್ಟಿರುವ ಯೇನೆಕಲ್ಲು ಎನ್ನುವ ಪುಟ್ಟ ಹಳ್ಳಿಯ ಬಹುತೇಕ ಮನೆಗಳಲ್ಲಿ ಓರ್ವ ಶಿಕ್ಷಕ ಅಥವಾ ಶಿಕ್ಷಕಿ ಕಂಡುಬರುತ್ತಾರೆ. ಹೀಗಾಗಿ ಈ ಗ್ರಾಮ ನೂರಾರು ಶಿಕ್ಷಕರ ತವರೂರು. ರಾಷ್ಟ್ರ, ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರೂ ಇಲ್ಲಿದ್ದಾರೆ. ಜಿಲ್ಲೆ, ಹೊರ ಜಿಲ್ಲೆಗಳಲ್ಲಿಯೂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲೇ 113 ಶಿಕ್ಷಕರು ಕರ್ತವ್ಯಕ್ಕೆ ನಿಯೋಜನೆಗೊಂಡಿರುವರು. ಗ್ರಾಮದ 68 ಶಿಕ್ಷಕಿಯರು ಮದುವೆಯಾಗಿ ಬೇರೆ ಊರಿಗೆ ತೆರಳಿದ್ದಾರೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಗ್ರಾಮದಲ್ಲಿರುವ ಶಿಕ್ಷಕರು ಹಲವೆಡೆ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐವರು ನಿವೃತ್ತಿ ಹೊಂದಿದ್ದಾರೆ. 8 ಹಿರಿಯ ಶಿಕ್ಷಕರು ನಿವೃತ್ತಿ ಬಳಿಕ ನಿಧನಹೊಂದಿದ್ದಾರೆ.

ಒಂದೇ ಕುಟುಂಬದಲ್ಲಿ ಮೂರ್‍ನಾಲ್ಕು ಮಂದಿ ಶಿಕ್ಷಕರು ಇರುವ ಹಲವು ನಿದರ್ಶನಗಳೂ ಇವೆ. ಗ್ರಾಮೀಣ ಪ್ರದೇಶವಾಗಿದ್ದರೂ ಒಳ್ಳೆಯ ಶಿಕ್ಷಣ ನೀಡುವ ಶಾಲೆ, ಸಂಘ ಸಂಸ್ಥೆಗಳಿರುವುದರಿಂದ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಕಾರಣವಾಗಿದೆ. ಈ ಭಾಗದ ಶಿಕ್ಷಕ ರಾಮಕೃಷ್ಣ ಮಲ್ಲಾರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಆಯ್ಕೆಗೊಂಡಿದ್ದಾರೆ.

Advertisement

ಪಟ್ಟಣಕ್ಕೆ ಸಮೀಪವೂ ಇಲ್ಲ

ಸುಬ್ರಹ್ಮಣ್ಯ – ಮಂಜೇಶ್ವರ ರಾ.ಹೆ. ನಡುವೆ ಯೇನೆಕಲ್ಲು ಗ್ರಾಮವಿದೆ. ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರವಿರುವ ಈ ಗ್ರಾಮ ಅಷ್ಟೇನೂ ಅಭಿವೃದ್ಧಿಯನ್ನೂ ಹೊಂದಿಲ್ಲ. ಗೌಡ ಸಮುದಾಯದವರು ಜಾಸ್ತಿ ಸಂಖ್ಯೆಯಲ್ಲಿದ್ದು, ಇತರ ಸಮುದಾಯಗಳ ಶಿಕ್ಷಕರೂ ಇದ್ದಾರೆ. ಕೃಷಿ ಅವಲಂಬಿತರಾಗಿರುವ ಗ್ರಾಮಸ್ಥರು ಆರ್ಥಿಕವಾಗಿ ಭಾರೀ ಸಬಲರಲ್ಲ. ಮೂಲ ಸೌಕರ್ಯಗಳ ಕೊರತೆ ನಡುವೆಯೂ ಇಲ್ಲಿನ ಮಂದಿ ಓದಿ ಸುಶಿಕ್ಷಿತರೆನಿಸಿಕೊಂಡಿದ್ದಾರೆ.

ಯೇನೆಕಲ್ಲು ಶಿಕ್ಷಣಕ್ಕೆ ಅಡಿಗಲ್ಲು

ಗ್ರಾಮಸ್ಥರಲ್ಲಿ ಹಲವರು ಅವಿದ್ಯಾವಂತರಾಗಿದ್ದರೂ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎನ್ನುವ ಛಲವಿತ್ತು. ಹಲವು ವರ್ಷಗಳ ಹಿಂದಿನಿಂದಲೂ ಹಿರಿಯರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸಿ ಟಿಸಿಎಚ್ ತರಬೇತಿಗೆ ಸೇರಿಸಿದರು. ಸರಕಾರಿ ಸೀಟು ಸಿಗದವರು ಖಾಸಗಿ ಸಂಸ್ಥೆಗಳಲ್ಲಿ ಓದಿದರು. ಜಮೀನು, ಬಂಗಾರ ಅಡವಿಟ್ಟು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿದವರು ಇಲ್ಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿರುವುದು ಮಾದರಿ ಎನಿಸಿದೆ.

ಪ್ರಗತಿಪರ ಕೃಷಿಕರು
ಈ ಗ್ರಾಮದಲ್ಲಿ ಶಿಕ್ಷಕರಷ್ಟೇ ಇರುವುದಲ್ಲ. ಪೊಲೀಸ್‌ ಇಲಾಖೆಯಲ್ಲೂ ಹಲವರು ಕೆಲಸದಲ್ಲಿದ್ದಾರೆ. ಸೈನಿಕರು, ವೈದ್ಯರು, ವಿಜ್ಞಾನಿಗಳು, ಸಿ.ಎ. ಆದವರೂ ಸಾಕಷ್ಟಿದ್ದಾರೆ. ನೂರಾರು ಜನರು ಪ್ರಗತಿಪರ ಕೃಷಿಕರಾಗಿಯೂ ಹೊರಹೊಮ್ಮಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿ ಕಂಡುಕೊಂಡವರೂ ಇಲ್ಲಿದ್ದಾರೆ.

ಗ್ರಾಮದ ಶಿಕ್ಷಕ ಸಮೂಹದಲ್ಲಿ ದೈ.ಶಿ. ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅನೇಕ ಕ್ರೀಡಾಳುಗಳನ್ನು ರೂಪಿಸಿ ಸಮಾಜಕ್ಕೆ ನೀಡಿದ ಇಲ್ಲಿನ ದೈ.ಶಿ. ಶಿಕ್ಷಕರು ಹೊಸ ಪ್ರತಿಭೆಗಳಿಗೆ ದಾರಿದೀಪವಾಗಿದ್ದಾರೆ. ಸ್ವತಃ ಸಾಧನೆ ಮಾಡಿ ರಾಷ್ಟ್ರ, ರಾಜ್ಯಮಟ್ಟದಲ್ಲಿ ವಿಜೇತರಾಗಿ ಕೀರ್ತಿ ಪಡೆದ ಸ್ಪರ್ಧಾಳುಗಳು, ಶಿಕ್ಷಕರು ಇಲ್ಲಿದ್ದಾರೆ.

ಪ್ರೇರಣೆ ನೀಡಿದರು
ಹಿರಿಯ ಶಿಕ್ಷಕರಾಗಿದ್ದವರು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಿದರು. ಶಿಕ್ಷಕರಾದರೆ ಗ್ರಾಮದ ಅನಕ್ಷರತೆ ನಿರ್ಮೂಲನೆ ಆಗುತ್ತದೆ ಎಂದು ಪ್ರೇರಣೆ ನೀಡಿದರು. ಗೋವಿಂದೇ ಗೌಡರು ಸಚಿವರಾಗಿದ್ದಾಗ ಅನೇಕ ಮಂದಿ ಶಿಕ್ಷಕರಾಗಿ ನೇಮಕಗೊಂಡರು.
– ವಸಂತ ಯೇನೆಕಲ್ಲು, ಶಿಕ್ಷಣ ಸಂಯೋಜಕ

ಶ್ಲಾಘನೀಯ
ಹಿಂದೆಲ್ಲ ಶಿಕ್ಷಕರಿಗೆ ಸೂಕ್ತ ಸ್ಥಾನಮಾನ, ಸೌಲಭ್ಯ ಇರಲಿಲ್ಲ. ಅನಂತರ ಶಿಕ್ಷಣ ಪದ್ಧತಿ ವ್ಯವಸ್ಥೆಯಲ್ಲಿ ಬದಲಾವಣೆಗಳಾದವು. ಅದಕ್ಕೆ ಒಗ್ಗಿ ಕೊಂಡು ನಮ್ಮೂರಿನ ಯುವ ಸಮೂಹ ಶಿಕ್ಷಣ ವೃತ್ತಿಯನ್ನು ಆಯ್ದುಕೊಂಡಿದೆ. ಆಸಕ್ತಿಯೇ ಇದಕ್ಕೆ ಮೂಲ ಕಾರಣ. ಅಂತಹ ಸುಶಿಕ್ಷಿತ ಗ್ರಾಮವನ್ನು ಗುರುತಿ ಸುತ್ತಿರುವುದು ನಮ್ಮ ಸೌಭಾಗ್ಯ.
– ಕುಶಾಲಪ್ಪ ಗೌಡ ಪರ್ಲ , ನಿವೃತ್ತ ಶಿಕ್ಷಕ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next