ಬಸ್ರೂರು: ಬಳ್ಕೂರು, ಹಟ್ಟಿಕುದ್ರು, ಕಂಡ್ಲೂರು, ಬಸ್ರೂರಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ವಾರಾಹಿ ನದಿ ನೀರು ತುಂಬಿ ಹರಿದು ಪ್ರವಾಹ ಉಂಟಾಗುತ್ತದೆ. ಆ ಸಂದರ್ಭಗಳಲ್ಲಿ ಸಂತ್ರಸ್ತರನ್ನು ರಕ್ಷಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸುವ ಅಣುಕು ಪ್ರದರ್ಶನವನ್ನು ಬಳ್ಕೂರು ಕಳುವಿನ ಬಾಗಿಲಿನ ವೆಂಟೆಡ್ ಡ್ಯಾಂ ಸಮೀಪ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ, ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಸಹಕಾರದಲ್ಲಿ ಈ ಇದನ್ನು ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಬಳ್ಕೂರು ವಾರಾಹಿ ನದಿ ತಟದಲ್ಲಿದೆ. ಈ ಪ್ರದೇಶದಲ್ಲಿ ಯಾವ ಸಮಯದಲ್ಲಿಯೂ ಪ್ರವಾಹ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತುವುದು, ಅವರನ್ನು ದಡಕ್ಕೆ ತಂದ ಅನಂತರ ಉಪಚರಿಸುವುದು ಹೇಗೆ ಎನ್ನುವ ಮಾಹಿತಿಗಳನ್ನು ಸ್ಥಳೀಯರಿಗೆ ಅರಿವು ಮೂಡಿಸುವ ಕುರಿತಂತೆ ಈ ಪ್ರದರ್ಶನ ನಡೆಸಲಾಗಿದೆ. ಮುಂದೆಯೂ ಬೇಕಾದರೆ ಇದನ್ನು ಜಿಲ್ಲಾಡಳಿತದಿಂದ ನಡೆಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್. ಮಧುಕೇಶ್ವರ, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ಕಿರಣ್ ಪೆಡ್ನೇಕರ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಕುಂದಾಪುರ ಡಿ.ವೈ.ಎಸ್.ಪಿ. ದಿನೇಶ್ ಕುಮಾರ್, ಸಿ.ಪಿ.ಐ. ಮಂಜಪ್ಪ, ಎಸ್.ಐ. ಶ್ರೀಧರ್ ನಾಯ್ಕ, ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಪುತ್ರನ್, ಕ್ಷೇತ್ರ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಬಳ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಕ್ಷತ್ ಶೇರೆಗಾರ್, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.