Advertisement

ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಚರಂಡಿಯಲ್ಲಿ ಪತ್ತೆ

03:40 PM Mar 06, 2018 | Harsha Rao |

ಕಾಸರಗೋಡು:ನಾಪತ್ತೆಯಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಯ ಮೃತದೇಹ ಕಳನಾಡು ರೈಲ್ವೇ ಮೇಲ್ಸೇತುವೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ.ಸಾವಿನ ಬಗ್ಗೆ ನಿಗೂಢತೆ ಸೃಷ್ಟಿಯಾಗಿದ್ದು,ಇಬ್ಬರು ಸಹಪಾಠಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಕೀಯೂರು ನಿವಾಸಿ, ಪ್ರಸ್ತುತ ಮಾಂšಾಡ್‌ ಚೋಯಿಚ್ಚಿಕಲ್‌ನಲ್ಲಿ ವಾಸಿಸುವ ಜಾಫರ್‌ ಅವರ ಪುತ್ರ ಮೊಹಮ್ಮದ್‌ ಜಾಸಿರ್‌ (15) ಸಾವಿಗೀಡಾದ ವಿದ್ಯಾರ್ಥಿ. ಚಟ್ಟಂಚಾಲ್‌ ಶಾಲೆಯ ವಿದ್ಯಾರ್ಥಿಯಾಗಿದ್ದ ಈತನ ಮೃತದೇಹ ಮಾ.4ರಂದು ರಾತ್ರಿ 12 ಗಂಟೆಗೆ ಕಳನಾಡು ರೈಲ್ವೇ ಮೇಲ್ಸೇತುವೆ ಬಳಿಯ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಪ್ರದೇಶದಲ್ಲಿ ದುರ್ನಾತ ಬೀರ ತೊಡಗಿದ್ದು, ಸ್ಥಳೀಯರು ಹುಡುಕಾಡಿದಾಗ ಚರಂಡಿಯಲ್ಲಿ ಶವ ಕಂಡು ಬಂತು. ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಬೇಕಲ ಪೊಲೀಸರು ಸ್ಥಳಕ್ಕೆ ತೆರಳಿ ಸೋಮವಾರ ಬೆಳಗ್ಗಿನವರೆಗೆ ಕಾವಲು ನಿಂತು ಬಳಿಕ ಪಂಚನಾಮೆ ನಡೆಸಲಾಯಿತು.

ಸಾವಿನ ಬಗ್ಗೆ ನಿಗೂಢತೆ ಹಿನ್ನೆಲೆಯಲ್ಲಿ ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮಾ.1ರಿಂದ ನಾಪತ್ತೆ
ಮಾ.1ರಿಂದ ಮೊಹಮ್ಮದ್‌ ಜಾಸಿರ್‌ ನಾಪತ್ತೆಯಾಗಿದ್ದ. ಶಾಲೆಯಲ್ಲಿ ಬೀಳ್ಕೊಡುವ ಕಾರ್ಯಕ್ರಮಕ್ಕೆ ಬಟ್ಟೆ ಖರೀದಿಸಲೆಂದು ತಿಳಿಸಿ ಮನೆಯಿಂದ ಹೊರ ಹೋಗಿದ್ದ ಆತ ವಾಪಸ್‌ ಬಂದಿರಲಿಲ್ಲ. ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಬೇಕಲ ಪೊಲೀಸರು ಶೋಧ ನಡೆಸುತ್ತಿದ್ದರು.

Advertisement

ಗಾಯಗಳಿಲ್ಲ
ವಿದ್ಯಾರ್ಥಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ರೈಲು ಢಿಕ್ಕಿ ಹೊಡೆದಿದ್ದರೆ ಗಾಯಗಳಾಗಬೇಕಾಗಿತ್ತು. ಆದರೆ ಮೈಮೇಲೆ ಯಾವುದೇ ಗಾಯಗಳಿಲ್ಲ.

ಸಹಪಾಠಿಗಳ ಜತೆ ಗಾಂಜಾ ಸೇವಿಸಿದ್ದ
ಮೊಹಮ್ಮದ್‌ ಜಾಸಿರ್‌ ಮತ್ತು ಇತರ ಇಬ್ಬರು ಮಾ.1ರಂದು ಗಾಂಜಾ ಸೇವಿಸಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ. ಗಾಂಜಾ ಸೇವಿಸಿದ ಬಳಿಕ ಮೂವರು ಜತೆಯಾಗಿ ನಡೆದು ಹೋಗುತ್ತಿದ್ದಂತೆ ಜಾಸಿರ್‌ ದಿಢೀರ್‌ ನಾಪತ್ತೆಯಾಗಿದ್ದ.  ಭಯಗೊಂಡು ವಿಷಯವನ್ನು ಯಾರಲ್ಲೂ ತಿಳಿಸಿಲ್ಲ ಎಂದು ಸದ್ಯ ಪೊಲೀಸರ ವಶದಲ್ಲಿರುವ ಸಹಪಾಠಿಗಳು ಹೇಳಿದ್ದು,  ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next