ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಎಂಬ ಮಾತು ಅಕ್ಷರಃ ಸತ್ಯ. ಕೆಮರಾ ಒಂದು ನಿರ್ಜೀವ ವಸ್ತುವಾಗಿದ್ದರೂ ನನ್ನ ಜೀವನದ ಪಯಣದಲ್ಲಿ ಒಳ್ಳೆಯ ಸ್ನೇಹಿತನ ಸ್ಥಾನವನ್ನು ತುಂಬಿದೆ. ನನ್ನ ಜೀವನದ ನೆನಪುಗಳು, ಭಾವನೆಗಳು, ವಿಶೇಷ ಸನ್ನಿವೇಶಗಳನ್ನು ಚಿತ್ರಗಳ ಮೂಲಕ ಎಂದಿಗೂ ಮರೆಯಾಗದಂತೆ ಸಂಗ್ರಹಿಸಿಡಲು ನನ್ನ ಈ ಸ್ನೇಹಿತ ನೆರವಾಗುತ್ತಿದ್ದಾನೆ.
ಕೆಮರಾ ಮೂಲಕ ಕ್ಲಿಕ್ಕಿಸಿದ ಫೋಟೋಗಳು ನಮ್ಮನ್ನು ಗತಕಾಲಕ್ಕೆ ಮತ್ತೂಂಮ್ಮೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಇದು ನಮ್ಮೊಳಗೆ ಅಡಗಿರುವ ಸೃಜನಾತ್ಮಕ ಪ್ರತಿಭೆಯನ್ನು ಪ್ರಪಂಚಕ್ಕೆ ತೋರಿಸುವ ಸಾಧಾನವಾಗಿ ನಮ್ಮೊಡನೆ ಪಯಣ ಬೆಳೆಸುತ್ತದೆ. ನಮ್ಮ ವೈಯಕ್ತಿಕ ಪ್ರತಿಬಿಂಬದ ಆಚೆಗೆ, ಕೆಮರಾವು ನಮ್ಮನ್ನು ಪರಿಸರದೊಂದಿಗೆ ಮಿಲನಗೋಳಿಸುತ್ತದೆ.
ಕೆಮರಾ ಒಂದು ಸಾಧನ ಎನ್ನುವುದಕ್ಕಿಂತ ಹೆಚ್ಚಾಗಿ ಇದು ನಮ್ಮ ಜೀವನದ ಸನ್ನಿವೇಶಗಳ ಮೂಲಕ ನಮ್ಮೊಂದಿಗೆ ಬರುವ ಒಡನಾಡಿಯಾಗಿದೆ. ಇದು ನಮ್ಮ ನೆನಪುಗಳ ಪಾಲಕನಾಗಿ ನಮ್ಮೊಡನೆ ಪ್ರಯಣಿಸುತ್ತದೆ. ಕೆಮರಾ ನಮ್ಮ ಕಲಾತ್ಮಕತೆಯ ಸಾಧನ ಮತ್ತು ನಮ್ಮ ಜೀವನದ ಕಥೆ ಹೇಳುವ ಅಥವಾ ಸಂಗ್ರಹಿಸಿಡುವ ಪಾತ್ರೆ.
ಪ್ರತಿಯೊಂದು ಕ್ಲಿಕ್‌ನೊಂದಿಗೆ ನಮ್ಮ ಒಂದು ಕ್ಷಣದ ಹೃದಯ ಬಡಿತವನ್ನು ಸೆರೆಹಿಡಿಯುತ್ತದೆ. ಪದಗಳಲ್ಲಿ ವಿವರಿಸಲು ಸಾಧ್ಯವಾಗದ ಸಂಗತಿಗಳನ್ನು ಒಂದೇ ಒಂದು ಚಿತ್ರದ ಮೂಲಕ ತಿಳಿಸುವ ಪ್ರತಿಬಿಂಭವಾಗಿದೆ. ದೃಶ್ಯ ಕಾವ್ಯದ ಈ ಸ್ವರಮೇಳದಲ್ಲಿ ನನ್ನ ಕೆಮರಾವು ನನ್ನ ಭಾವನೆಗಳ ಪ್ರತಿಬಿಂಭವಾಗಿದೆ.
ನನ್ನ ಕೆಮರಾ ಕೇವಲ ಸಾಧನವಲ್ಲ, ಇದು ನನ್ನ ಆತ್ಮದ ಒಂದು ಭಾಗವೇ ಆಗಿದೆ. ನನ್ನ ಹೃದಯದ ಪಿಸುಮಾತುಗಳನ್ನು ಪ್ರತಿಧ್ವನಿಸುವ ಕಥೆಗಳನ್ನು ಲೆನ್ಸ್ ನಿಂದ ಸೆಳೆದು ಕ್ಲಿಕ್ ಮೂಲಕ ಹೇಳುತ್ತದೆ.
-ಗಿರೀಶ ಜೆ.
ವಿ.ವಿ., ತುಮಕೂರು