Advertisement

ಎಲ್ಲರಿಗೂ ಕನಿಷ್ಠ ಆದಾಯ; ಆರ್ಥಿಕ ಸಮೀಕ್ಷೆಯಲ್ಲಿ ಪ್ರಸ್ತಾಪ

03:45 AM Feb 01, 2017 | Team Udayavani |

ಹೊಸದಿಲ್ಲಿ: ನೋಟ್‌ ಅಪಮೌಲ್ಯ ದಿಂದ ದೇಶದ ಜಿಡಿಪಿ ದರಕ್ಕೆ ಕೊಂಚ ಮಟ್ಟಿನ ಹೊಡೆತ ಬಿದ್ದಿದೆ ಎಂದು ಒಪ್ಪಿಕೊಂಡಿರುವ ಕೇಂದ್ರ ಹಣಕಾಸು ಸಚಿವಾಲಯ, ಇದು ಈಗಿನ ಪರಿಣಾಮವಷ್ಟೇ, ಮುಂದಿನ ದಿನ ಗಳಲ್ಲಿ ಜಿಡಿಪಿ ದರ ಶೇ. 8ರಿಂದ 10ಕ್ಕೂ ನೆಗೆಯ ಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದೆ.

Advertisement

ಮುಖ್ಯ ಹಣಕಾಸು ಸಲಹೆಗಾರ ಅರವಿಂದ ಸುಬ್ರಮಣಿಯನ್‌ ನೇತೃತ್ವದಲ್ಲಿ ತಯಾರಾದ ಆರ್ಥಿಕ ಸಮೀಕ್ಷೆ 2017-18 ಅನ್ನು ಸಂಸತ್‌ನಲ್ಲಿ ಮಂಡಿಸಿದ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಬಡತನ ನಿರ್ಮೂಲನೆಗಾಗಿ ಈಗಿರುವ ಎಲ್ಲ ಯೋಜನೆಗಳನ್ನು ಬದಿಗೊತ್ತಿ, “ಎಲ್ಲರಿಗೂ ಕನಿಷ್ಠ ಆದಾಯ’ ಯೋಜನೆ ಜಾರಿಗೆ ತರುವ ಸಾಧ್ಯತೆಗಳನ್ನು ಪ್ರಸ್ತಾವಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ “ಪ್ರತಿಯೊಬ್ಬರ ಕಣ್ಣಿನ ಕಣ್ಣೀರನ್ನು ಅಳಿಸಬೇಕು’ ಎಂಬ ಮಾತನ್ನು ಹೇಳಿರುವ ಆರ್ಥಿಕ ಸಮೀಕ್ಷೆ, ಎಲ್ಲರಿಗೂ ಕನಿಷ್ಠ ಆದಾಯ ಯೋಜನೆಯ ಮಹತ್ವದ ಬಗ್ಗೆ ಹೇಳಿದೆ. ಈ ಮೂಲಕ ಬಡವರ ಕೊಂಚ ಮಟ್ಟಿನ ಆದಾಯವನ್ನಾದರೂ ಪಡೆಯಬಹುದು ಎಂದು ಆಶಯ ವ್ಯಕ್ತಪಡಿಸಿದೆ.

ಜಿಡಿಪಿ ಕುಸಿತ: ಹೌದು, ಈ ವಿತ್ತೀಯ ವರ್ಷದಲ್ಲಿ ಜಿಡಿಪಿ ದರದಲ್ಲಿ ಕುಸಿತವಾಗಿದೆ. ನಾವು ಶೇ.7 ರಷ್ಟಾದರೂ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಇದು ಶೇ. 6.5ಕ್ಕೆ ನಿಲ್ಲುವ ಸಾಧ್ಯತೆ ಇದೆ. ಇದಕ್ಕೆ ಕಾರಣ 1,000 ಮತ್ತು 500 ರೂ. ನೋಟುಗಳ ಅಪಮೌಲ್ಯ. ಆದರೆ ಮುಂದಿನ ವಿತ್ತೀಯ ವರ್ಷದಲ್ಲಿ ಇದು ಶೇ. 6.75ರಿಂದ ಶೇ.7.5ರ ವರೆಗೆ ತಲುಪುವ ಸಂಭವವಿದೆ. ಇದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿತವಾದರೂ ಜಿಡಿಪಿ ಬೆಳವಣಿಗೆಗೆ ಸಹಾಯವಾಗಬಲ್ಲದು ಎಂದಿದೆ. ಜತೆಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಜಾರಿಯಾದರೂ ಸುಲಭವಾಗಲಿದೆ ಎಂದಿದೆ ಸಮೀಕ್ಷೆ.

ಆದಾಯ ತೆರಿಗೆ ಕಡಿತ: ಆದಾಯ ತೆರಿಗೆ ಕಡಿತ ಮಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿರುವ ಆರ್ಥಿಕ ಸಮೀಕ್ಷೆ, ಹೆಚ್ಚು ಹಣ ಗಳಿಸುತ್ತಿರುವ ಎಲ್ಲರನ್ನೂ ಆದಾಯ ತೆರಿಗೆಯ ಪರಿಮಿತಿಯೊಳಗೆ ತರಬೇಕು ಎಂಬ ಶಿಫಾರಸು ಮಾಡಿದೆ. ಆದರೆ ಹೆಚ್ಚು ಗಳಿಸುವವರು ಎಂದರೆ ಯಾರು ಎಂಬ ಬಗ್ಗೆ ಅರ್ಥೈಸಿಲ್ಲ. ಒಂದು ಅಂದಾಜಿನ ಪ್ರಕಾರ, ರೈತರನ್ನೂ ಇದರ ವ್ಯಾಪ್ತಿಗೆ ತರಬಹುದಾಗಿದೆ. ಕಾರ್ಪೊರೇಟ್‌ ತೆರಿಗೆಯನ್ನು ಕಡಿತ ಮಾಡುವ ಸಂಬಂಧ ನಿರ್ದಿಷ್ಟ ಕಾಲಮಿತಿ ಹಾಕಿಕೊಳ್ಳಬೇಕು ಎಂದಿದೆ. ಇದರ ಜತೆಗೆ ರಿಯಲ್‌ ಎಸ್ಟೇಟ್‌ ಸ್ಟಾ éಂಪ್‌ ದರವನ್ನು ಕಡಿಮೆ ಮಾಡುವ ಮಾತುಗಳನ್ನಾಡಿದೆ.

ಜಿಎಸ್‌ಟಿ: ಆರ್ಥಿಕತೆಗೆ ಚೈತನ್ಯ ತುಂಬಲು ಸಾಧ್ಯವಿರುವಂಥದ್ದು ಜಿಎಸ್‌ಟಿಗೆ ಮಾತ್ರ ಎಂಬುದು ಈ ಆರ್ಥಿಕ ಸಮೀಕ್ಷೆಯ ಅಭಿಪ್ರಾಯ. ಒಂದು ವೇಳೆ ಜಿಎಸ್‌ಟಿ ಮತ್ತಿತರ ರಚನಾತ್ಮಕ ಸುಧಾರಣಾ ಕ್ರಮಗಳಿಂದ ದೇಶದ ಜಿಡಿಪಿ ದರ ಶೇ. 8ರಿಂದ 10ಕ್ಕೆ ತಲುಪಬಹುದು ಎಂಬ ಆಶಾಭಾವವೂ ಇದೆ.

Advertisement

ಕಪ್ಪು ಹಣಕ್ಕೆ ನಾನಾ ಹಾದಿ: ಅಪಮೌಲ್ಯದ ಅನಂತರವೂ ಕಪ್ಪು ಹಣ ಧನಿಕರು ನಾನಾ ಮಾರ್ಗಗಳನ್ನು ಬಳಸಿ ತಮ್ಮಲ್ಲಿನ ಈ ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಅದರಲ್ಲಿ ಹಿಂದಿನ ದಿನಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಬೇರೆಯವರನ್ನು ಕ್ಯೂನಲ್ಲಿ ನಿಲ್ಲಿಸಿ ಹಣ ಪಡೆಯುವುದು ಅಥವಾ ವರ್ಗಾವಣೆ ಮಾಡಿಕೊಳ್ಳುವುದು, ಜನ ಧನ ಅಕೌಂಟ್‌ಗಳಿಗೆ ಹಣ ಹಾಕಿದ್ದಾರೆ ಎಂದಿದೆ.

ಇಂದು ಬಜೆಟ್‌
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫೆ.1ಕ್ಕೆ ಮಂಡಿಸಲಾಗುತ್ತಿರುವ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ರೈಲ್ವೇ ಬಜೆಟ್‌  ಒಳಗೊಂಡ ಸಾಮಾನ್ಯ ಬಜೆಟ್‌ ಮಂಡಿಸಲಿದ್ದಾರೆ. ಆದಾಯ ತೆರಿಗೆ ಮಿತಿ ಏರಿಕೆ ಮಾಡಲಿದ್ದಾರೆ ಎಂಬುದೇ ಈ ಬಜೆಟ್‌ನ ವಿಶೇಷ. ಇನ್ನು ರೈಲ್ವೇಯೂ ಇದರಲ್ಲೇ ಸೇರಿದ್ದು, ಸುರಕ್ಷತೆ ಮತ್ತು ಮೂಲ ಸೌಕರ್ಯದತ್ತ ಹೆಚ್ಚಿನ ಗಮನ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಮುಖ್ಯಾಂಶಗಳು
ಬಡತನ ನಿರ್ಮೂಲನೆಗಾಗಿ ಎಲ್ಲರಿಗೂ ಕನಿಷ್ಠ ಆದಾಯದ ಖಾತರಿ ಯೋಜನೆ ಜಾರಿ

ಮುಂದಿನ ಹಣಕಾಸು ವರ್ಷದಲ್ಲಿ ಶೇ.6.75 ರಿಂದ ಶೇ.7.5ರ ವರೆಗೆ ಜಿಪಿಡಿ ಬೆಳವಣಿಗೆ ನಿರೀಕ್ಷೆ

ಜಿಡಿಪಿ ಬೆಳವಣಿಗೆ ದರ ಶೇ.6.5 ಆಗುವ ಸಾಧ್ಯತೆ

ಆದಾಯ ತೆರಿಗೆ , ರಿಯಲ್‌ ಎಸ್ಟೇಟ್‌ ಸ್ಟಾಂಪ್‌ ಡ್ನೂಟಿ ದರ ಕಡಿತ

ಹೆಚ್ಚು ಗಳಿಸುವ ಎಲ್ಲರೂ ಆದಾಯ ತೆರಿಗೆ ವ್ಯಾಪ್ತಿಯ ಒಳಗೆ ತರುವ ಪ್ರಯತ್ನ

ಕಾರ್ಪೊರೇಟ್‌ ತೆರಿಗೆ ಕಡಿತ ಮಾಡುವ ಸಮಯ ನಿಗದಿಯನ್ನು ಶುರು ಮಾಡುವುದು

ಹೊಸ ಕರೆನ್ಸಿ ಚಾಲ್ತಿಗೆ ಬಂದ ಮೇಲೆ ಪ್ರಗತಿದರವನ್ನು ತಹಬದಿಗೆ ತರುವುದು

ಅಪಮೌಲ್ಯದಿಂದಾಗಿ ಪ್ರಗತಿ ದರದ ಮೇಲೆ ಶೇ.0.25 ರಿಂದ ಶೇ.0.5 ರಷ್ಟು ಇಳಿಕೆ, ಇದು ಅಲ್ಪಾವಧಿಯ ಪರಿಣಾಮವಷ್ಟೇ.

ಜಿಎಸ್‌ಟಿ ಹಾಗೂ ಇತರ ರಚನಾತ್ಮಕ ಸುಧಾರಣೆಗಳಿಂದ ಪ್ರಗತಿ ದರವನ್ನು ಶೇ.8 ರಿಂದ 10ಕ್ಕೆ ಕೊಂಡೊಯ್ಯಲು ಸಾಧ್ಯ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಮತ್ತು ಕಡಿಮೆ ತೈಲ ದರದಿಂದ ಆರ್ಥಿಕತೆ ಸುಧಾರಿಸುವ ನಿರೀಕ್ಷೆ

ಪ್ರಸಕ್ತ ಹಣಕಾಸು ವರ್ಷ ಕೃಷಿ ವಲಯದಲ್ಲಿ ಶೇ.4.1 ಬೆಳವಣಿಗೆ, ಕಳೆದ ವರ್ಷಕ್ಕಿಂತ ಶೇ.1.2 ರಷ್ಟು ಹೆಚ್ಚು

ಅಪಮೌಲ್ಯದಿಂದಾಗಿ ಕೆಲ ಕೃಷಿ ಉತ್ಪನ್ನಗಳಾದ ಸಕ್ಕರೆ, ಹಾಲು, ಆಲೂಗಡ್ಡೆ ಮತ್ತು ಈರುಳ್ಳಿಯ ಪೂರೈಕೆಯಲ್ಲಿ ಏರುಪೇರು ಸಾಧ್ಯತೆ

ಕೈಗಾರಿಕಾ ವಲಯದ ಪ್ರಗತಿ ದರ ಈ ಬಾರಿ ಶೇ.5.2 ಕುಸಿತ. ಕಳೆದ ಬಾರಿ ಶೇ.7.4 ಇತ್ತು.

ಈಗಾಗಲೇ ತೆರಿಗೆ ಘೋಷಣೆ ಮಾಡುವವರ ಬಳಿಯಿಂದ ಸಂಗ್ರಹ ಮಾಡುವಾಗ ಯಾವುದೇ ಕಿರುಕುಳ ನೀಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next