ಕುಮಟಾ: ರಸ್ತೆ ದುರಸ್ತಿ ಸರ್ಕಾರದ ಕಾರ್ಯ ಎಂದು ನಿರ್ಲಕ್ಷ್ಯ ತೋರುವವರ ನಡುವೆ ಕೂಲಿ ಕಾರ್ಮಿಕನೊಬ್ಬ ಬಿಡುವಿನ ಸಮಯದಲ್ಲಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಪಡಿಸುವ ಕಾಯಕದಲ್ಲಿ ತೊಡಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿ, ಇತರರಿಗೆ ಮಾದರಿಯಾಗಿದ್ದಾನೆ.
ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಹಾರೋಡಿ ನಿವಾಸಿ, ಕೂಲಿಕಾರ್ಮಿಕ ಪರಮೇಶ್ವರ ತಿಮ್ಮಪ್ಪ ಗೌಡ ಪ್ರಶಂಸೆಗೆ ಪಾತ್ರನಾದ ವ್ಯಕ್ತಿ.
ಪಟ್ಟಣದ ಹೊಸ ಹೆರವಟ್ಟಾದಿಂದ ಕೂಜಳ್ಳಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಇದರಿಂದ ಅನೇಕ ವಾಹನ ಸವಾರರು ತಾಲೂಕು ಆಡಳಿತವನ್ನು ಶಪಿಸುತ್ತಾರೆಯೇ ಹೊರತು ಅದರ ದುರಸ್ತಿಗೆ ಮುಂದಾಗಿಲ್ಲ. ಆದರೆ ಕೂಲಿಕಾರ್ಮಿಕ ಪರಮೇಶ್ವರ ತಿಮ್ಮಪ್ಪ ಗೌಡ ಕಳೆದ 4 ವರ್ಷಗಳಿಂದ ತಮ್ಮ ಬಿಡುವಿನ ಸಮಯದಲ್ಲಿ ರಸ್ತೆಯ ಹೊಂಡಗಳಿಗೆ ಕಲ್ಲು ಹಾಕಿ ಮುಚ್ಚುವ ಕಾಯಕದಲ್ಲಿ ತೊಡಗಿದ್ದಾರೆ.
ಜೀವನ ನಿರ್ವಹಣೆಗಾಗಿ ಕೃಷಿ ಕೂಲಿ ಅವಲಂಬಿಸಿರುವ ಪರಮೇಶ್ವರ ಗೌಡ ಅವರು, ಯಾವಾಗ ಕೂಲಿ ಕೆಲಸ ಇರುವುದಿಲ್ಲವೋ ಆ ದಿನ ರಸ್ತೆ ದುರಸ್ತಿಪಡಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ ಗೌಡ, ಹೊಸ ಹೆರವಟ್ಟಾದಿಂದ ಕೂಜಳ್ಳಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ದುರಸ್ತಿ ಮಾಡಿಲ್ಲ. ನಾನೇ ಆ ಕಾರ್ಯ ಮಾಡುತ್ತಿದ್ದೇನೆ. ರಸ್ತೆ ದುರಸ್ತಿಯಾದರೆ ನಮಗೆ ಓಡಾಡಲೂ ಅನುಕೂಲವಾಗುತ್ತದೆ. ಸಾರ್ವಜನಿಕ ಕಾರ್ಯಗಳನ್ನು ಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಕೂರುವ ಬದಲು, ನಾವೇ ಮಾಡಿದರೆ, ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ.
ಒಟ್ಟಾರೆ ಇವರ ರಸ್ತೆ ದುರಸ್ತಿ ಶ್ರಮದಾನಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದ್ದು, ಪಿಎಸ್‌ಐ ಈ.ಸಿ. ಸಂಪತ್ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಈ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ಪರಮೇಶ್ವರ ಗೌಡರ ಕಾರ್ಯಕ್ಕೆ ನೆರವಾಗಲಿ ಎಂಬುದು ಎಲ್ಲರ ಆಶಯ.