ಗುಡಿಬಂಡೆ: ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಪಂ ಸದಸ್ಯ ಗಂಗಾಧರ ಗೌಡ ಶುಕ್ರವಾರ ಸಂಜೆ ಹರಿಯುವ ಕುಶಾವತಿ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ವಿಷಯ ತಿಳಿದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಪಂ ಸದಸ್ಯನ ಹುಡುಕಾಟಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಿ, ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.
ಇದನ್ನೂ ಓದಿ:- ವಿಪ ಚುನಾವಣೆ: ಬಿಜೆಪಿಯಿಂದ ಇಬ್ಬರು ಫೈನಲ್
ಈ ಸಮಯದಲ್ಲಿ ಕಮ್ಮಗುಟ್ಟಹಳ್ಳಿ ಗ್ರಾಪಂ ಸದಸ್ಯ ಗಂಗಾಧರಗೌಡ ಮತ್ತು ಒಬ್ಬ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಪಲ್ಟಿ ಆಗಿ, ವಾಹನ ಎತ್ತುವಾಗ ಕಾಲು ಜಾರಿ ಆತ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಹೇಳಿದರು. ಬಹುತೇಕ ಎಲ್ಲಾ ಕೆರೆ, ಕಾಲುವೆಗಳು ತುಂಬಿ ಹರಿಯುತ್ತಿದ್ದು, ಇಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ನೀರನ್ನು ದಾಟಲು ಯಾರು ಪ್ರಯತ್ನಿಸಬೇಡಿ, ರಸ್ತೆಗಳನ್ನು ಬಂದ್ ಮಾಡಲು ಪ್ರತ್ಯೇಕ ಮಾರ್ಗ ಸೂಚಿಸಿ ಆದೇಶ ಹೊರಡಿಸಬೇಕಾಗಿದೆ, ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿ ಶೀಘ್ರ ಮಾರ್ಗಸೂಚಿ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವಿವರಿಸಿದರು.
ಶುಕ್ರವಾರ ತಡರಾತ್ರಿಯಿಂದ ಗ್ರಾಪಂ ಸದಸ್ಯನ ಹುಡುಕಾಟ ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನೂ ತ್ವರಿತವಾಗಿ ಆತನನ್ನು ಪತ್ತೆ ಹಚ್ಚಲು ನುರಿತ ಈಜು ಪರಿಣಿತರನ್ನು ಮತ್ತು ವಿವಿಧ ತಂಡಗಳನ್ನು ಬೆಂಗಳೂರಿನಿಂದ ಕರೆಸಿದ್ದೇವೆ, ಅವರಿಂದಲೂ ಹುಡುಕಾಟ ನಡೆಸಲು ಪ್ರಯತ್ನ ಪಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಉಪವಿಭಾಗಾಧಿಕಾರಿ ರಘುನಂದನ್, ವೃತ್ತ ನಿರೀಕ್ಷಕ ಲಿಂಗರಾಜು, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮುಂತಾದವರು ಇದ್ದರು.