ದೇವನಹಳ್ಳಿ: ರೆಡ್‌ಕ್ರಾಸ್‌ನಿಂದ ಈ ಬಗ್ಗೆ ಲಿಖೀತ ರೂಪದಲ್ಲಿ ಮಾಹಿತಿ ಸಿಕ್ಕರೆ ಮುಂದಿನ ಕ್ರಮ ವಹಿಸಲಾಗುತ್ತದೆ. ಒಂದು ವೇಳೆ ರೆಡ್‌ಕ್ರಾಸ್ ನಿಂದ ಉಚಿತ ವ್ಯವಸ್ಥೆಯಾಗದ ವೇಳೆ ಸರಕಾರದಿಂದಲೇ ಉದ್ದೇಶಿತ ರಕ್ತನಿಧಿಗಳಿಗೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹೇಳಿದರು.
ತಾಲೂಕಿನ ಬೀರಸಂದ್ರದಲ್ಲಿನ ಜಿಲ್ಲಾಡಳಿತ ಭವನದಲ್ಲಿ ರಕ್ತನಿಧಿ ಸ್ಥಾಪನೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ 2 ಕಡೆ ರಕ್ತನಿಧಿ ಸ್ಥಾಪನೆಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ಪ್ರಕ್ರಿಯೆಗಳು ಅಂತಿಮಗೊಂಡಿದ್ದು, ಶೀಘ್ರ ಕ್ರಮ ವಹಿಸ ಲಾಗುತ್ತದೆ.ದೊಡ್ಡಬಳ್ಳಾಪುರದಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಈಗಾಗಲೇ ಒಪಿಡಿ ಕಟ್ಟಡ ಸಿರ್ಮಿಸಿರುವ ಎಜಾಕ್ಸ್ ಕಂಪನಿ ರಕ್ತನಿಧಿಗೂ ಮೇಲ್ಭಾಗದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಿ ಕೊಡಲು ಸಿದ್ಧವಿದೆ. ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಾಣ ಗೊಳ್ಳುವ ಕಟ್ಟಡದಲ್ಲಿ ರೆಡ್‌ಕ್ರಾಸ್‌ನಿಂದ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುವ ವ್ಯವಸ್ಥೆಯಾದರೆ ಜಿಲ್ಲಾಡಳಿತದಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಎಂದರು.
ರಕ್ತನಿಧಿ ಸ್ಥಾಪನೆಗೆ ಎಲ್ಲಾ ತಯಾರಿ: ರೆಡ್‌ಕ್ರಾಸ್ ಸೊಸೈಟಿ ಸಮ ನ್ವಯಾಧಿಕಾರಿ ಚಂದ್ರಕಾಂತ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಉದ್ದೇಶಿತ ರಕ್ತನಿಧಿ ಸ್ಥಾಪನೆಗೆ ಎಲ್ಲಾ ತಯಾರಿ ಮಾಡಿ ಕೊಳ್ಳ ಲಾಗಿದೆ. ಜತೆಗೆ, ಉಪಕರಣ ಖರೀದಿಗೆ ಸಂಬಂಧಿಸಿದಂತೆ ಅನುದಾನವನ್ನು ಮೀಸಲಿಟ್ಟಿದ್ದು, ಜಿಲ್ಲಾ ಡಳಿತ ಅನುಮತಿ ನೀಡಿದರೆ ಶೀಘ್ರ ರಕ್ತನಿಧಿ ಸ್ಥಾಪನೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಉಚಿತ ರಕ್ತ ನೀಡುವ ಸಂಬಂಧ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಂಡು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುತ್ತದೆ ಎಂದರು.
ಎಜಾಕ್ಸ್ ಕಂಪನಿಯ ಸಿಎಸ್‌ಆರ್ ಅಧಿಕಾರಿ ಮಂಜುನಾಥ್ ಮಾತನಾಡಿ, ಕಂಪನಿಯ ಸಿಎಸ್‌ಆರ್ ನಿಧಿಯಿಂದ ಈಗಾಗಲೇ ಶೈಕ್ಷಣಿಕ ವಲಯ ಮಾತ್ರವಲ್ಲದೇ ಆರೋಗ್ಯ ವಲಯಕ್ಕೂ ಸಾಕಷ್ಟು ಕೊಡುಗೆ ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮೊದಲಿಗೆ ರಕ್ತನಿಧಿಗೆ ಕಟ್ಟಡ ನಿರ್ಮಿಸಿಕೊಡಲು ಉದ್ದೇಶಿಸಲಾಗಿತ್ತು. ಆದರೆ, ಆಸ್ಪತ್ರೆಯ ಆವರಣದಲ್ಲಿ ನಿತ್ಯ ಸೃಷ್ಟಿಯಾಗುತ್ತಿದ್ದ ಜನಜಂಗುಳಿಯನ್ನು ಕಂಡು, ಪರಿಹಾರೋಪಾಯವಾಗಿ ಹೊರ ರೋಗಿಗಳ ವಿಭಾಗಕ್ಕೆಂದು ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಲಾಗಿದೆ. ಇದೇ ಕಟ್ಟಡ ಮೇಲ್ಭಾಗದಲ್ಲಿ ರಕ್ತನಿಧಿಗೆ ಕಟ್ಟಡ ವ್ಯವಸ್ಥೆಗೆ ಕಂಪನಿ ಈ ಹಿಂದೆಯೇ ತೀರ್ಮಾನಿಸಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ, ಬೆಂಗಳೂರಿನ ರಕ್ತನಿಧಿ ಗಳಿಗೂ ಭೇಟಿ ನೀಡಿ ಪೂರಕ ವರದಿಯನ್ನು ಸಿದ್ಧಪಡಿಸಿ, ರೆಡ್‌ಕ್ರಾಸ್‌ನೊಂದಿಗೆ ಒಪ್ಪಂದದ ಆಧಾರ ದಲ್ಲಿ ರಕ್ತನಿಧಿ ಸ್ಥಾಪಿಸುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ, ಜಿಲ್ಲಾಡಳಿತ ರೆಡ್‌ಕ್ರಾಸ್ ನೊಂದಿಗೆ ಟ್ರೈ ಪಾರ್ಟಿ ಮಾದರಿ ರಕ್ತನಿಧಿ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕೆಂದರು. ಸಭೆಯಲ್ಲಿ ಟಿಎಚ್‌ಒ ಡಾ.ಪರಮೇಶ್ವರ್, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್, ರಕ್ತಶೇಖರಣ ಘಟಕದ ವೈದ್ಯಾಧಿಕಾರಿ ಡಾ.ಮಂಜು ನಾಥ್, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು, ರೆಡ್‌ಕ್ರಾಸ್ ಸೊಸೈಟಿ ಸದಸ್ಯರು ಇದ್ದರು.
ಸರಕಾರದಿಂದಲೇ ರಕ್ತನಿಧಿ ಸ್ಥಾಪನೆ: ಜಿಲ್ಲಾ ಆರೋಗ್ಯಾಕಾರಿ ಡಾ.ವಿಜಯೇಂದ್ರ ಮಾತನಾಡಿ, ಜಿಲ್ಲೆಯ ದೊಡ್ಡಬಳ್ಳಾಪುರ, ನೆಲ ಮಂಗಲ ಎರಡೂ ಕಡೆ ರಕ್ತನಿಧಿ ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ ಅಂತಿಮ ಹಂತದ ಪ್ರಕ್ರಿಯೆ ಗಳು ನಡೆಯುತ್ತಿವೆ. ಈ ಹಂತದಲ್ಲಿ ರೆಡ್‌ಕ್ರಾಸ್‌ನಿಂದ ರಕ್ತನಿಧಿ ಸ್ಥಾಪನೆಗೆ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ದೊಡ್ಡಬಳ್ಳಾಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಿಎಸ್‌ಆರ್ ನಿಧಿಯಲ್ಲಿ ರಕ್ತನಿಧಿಗೆ ಕಟ್ಟಡ ನಿರ್ಮಿಸುತ್ತಿರುವ ಸ್ವಾಗತಾರ್ಹ. ಆದರೆ, ರೆಡ್‌ಕ್ರಾಸ್‌ನಿಂದ ರಕ್ತಕ್ಕೆ ಶುಲ್ಕ ವಿಧಿಸುವಂತಿದ್ದರೆ ಬಡವರಿಗೆ ಹೊರೆಯಾಗಲಿದೆ. ಹೀಗಾಗಿ, ಸರಕಾರದಿಂದಲೇ ರಕ್ತನಿಧಿ ಸ್ಥಾಪಿಸಿ, ಉಚಿತ ರಕ್ತ ವ್ಯವಸ್ಥೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.