ಕೋಲಾರ: ಮಕ್ಕಳು ತಮ್ಮ ಬೇಡಿಕೆ ಮಂಡಿಸಲು ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲು ಗ್ರಾಮ ಪಂಚಾಯಿತಿಗಳಲ್ಲಿ ನಿಯಮಿತವಾಗಿ ಮಕ್ಕಳ ಗ್ರಾಮಸಭೆ ಆಯೋಜಿಸುವುದು ಸೂಕ್ತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ತಿಳಿಸಿದರು.
ತಾಲೂಕಿನ ಹರಟಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳು ಅವುಗಳನ್ನು ರಕ್ಷಿಸಬೇಕಾದ ಅಗತ್ಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಪಾತ್ರ. ಈ ದಿಸೆಯಲ್ಲಿ ಸ್ಥಳೀಯ ಸರ್ಕಾರಗಳು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರ ನೀಡಿದ ಅವರು, ಮಾನವ ಅಭಿವೃದ್ಧಿ ಸೂಚ್ಯಂಕಗಳು ಮಕ್ಕಳ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಪಿಡಿಒ ರಾಮಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು, ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಪಂಚಾಯ್ತಿಯಲ್ಲಿ ಆಗಿಂದಾಗ್ಗೆ ಚರ್ಚೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸ್ಪಂದಿಸುವ ಕಾರ್ಯವನ್ನು ಪಂಚಾಯಿತಿ ಹಮ್ಮಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಗಾಗಿ ಏನೆಲ್ಲ ಸೌಲಭ್ಯಗಳು ಸರ್ಕಾರದಿಂದ ಇದೆ ಎಂಬುದನ್ನು ಮಕ್ಕಳ ಗ್ರಾಮ ಸಮಿತಿಗಳು ತಿಳಿಸುತ್ತವೆ. ಇದರ ಸದುಪಯೋಗ ಆಗಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಶಾಲೆಗಳಲ್ಲಿ ನಿರ್ಮಾಣ ಆಗುತ್ತದೆ ಎಂದುಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜೆ.ಶ್ರೀನಿವಾಸ್ ತಿಳಿಸಿದರು.
18 ಶಾಲೆಗಳಿಂದ ಆಯ್ಕೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಮಾರಂಭದಲ್ಲಿ ಪ್ರತಿ ಶಾಲೆಯಿಂದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅನಿಸಿಕೆ ತಿಳಿಸಿದರು. ಗ್ರಾಪಂನಿಂದ ಆಗಬೇಕಾದ ಕಾರ್ಯಗಳ ಬಗ್ಗೆ ಪ್ರಶ್ನೋತ್ತರದಲ್ಲಿ ಪಾಲ್ಗೊಂಡರು.
ಸಮಾರಂಭದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಆರ್.ವೆಂಕಟೇಶ್ ವಹಿಸಿದ್ದು, ಸಿಆರ್‌ಪಿ ಗಂಗಾಧರ್, ಮುಖ್ಯೋಪಾಧ್ಯಾಯಿನಿ ಶಾಹೀದಾ, ಗ್ರಾಪಂ ಸದಸ್ಯರಾದ ಶಿಲ್ಪಾ, ವೆಂಕಟೇಶ್, ಸೀತಪ್ಪ, ಗುರಪ್ಪ, ಬಾಬು ಮತ್ತಿತರರು ಉಪಸ್ಥಿತರಿದ್ದರು