Advertisement

ಓರ್ವ ವೈದ್ಯಾಧಿಕಾರಿಗೆ 3 ಪಿಎಚ್‌ಸಿ ಪ್ರಭಾರ

04:55 PM Aug 08, 2022 | Team Udayavani |

ಹುಬ್ಬಳ್ಳಿ: ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಿರುವುದೇನೋ ನಿಜ. ಆದರೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯರ ಕೊರತೆ ಇನ್ನೂ ನೀಗಿಲ್ಲ. ಹೀಗಾಗಿ ತಾಲೂಕಿನಲ್ಲಿ ಓರ್ವ ವೈದ್ಯಾಧಿಕಾರಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದ್ದು, ಸರಕಾರದ ಮೂಲ ಉದ್ದೇಶಕ್ಕೆ ಇದು ಪ್ರಶ್ನೆಯಾಗಿ ಉಳಿದಿದೆ.

Advertisement

ಹೆಚ್ಚುವರಿ ಪ್ರಭಾರ: ತಾಲೂಕಿನ ಶಿರಗುಪ್ಪಿ ಪಿಎಚ್‌ಸಿ ವೈದ್ಯಕೀಯ ಅಧಿಕಾರಿ(ಎಂಒ) ಡಾ| ಸೂಫಿಯಾ ದಾಸರ ಅವರಿಗೆ ಹೆಚ್ಚುವರಿಯಾಗಿ ತಾಲೂಕಿನ ಬ್ಯಾಹಟ್ಟಿ ಹಾಗೂ ನೂಲ್ವಿ ಪಿಎಚ್‌ಸಿಯ ಆಡಳಿತ ವೈದ್ಯಕೀಯ ಅಧಿಕಾರಿ (ಎಎಂಒ)ಯಾಗಿ ಪ್ರಭಾರ ನೀಡಲಾಗಿದೆ. ಗೋಕುಲ ರಸ್ತೆ ಬಸವೇಶ್ವರ ನಗರ ಬಳಿಯ ರಾಮಲಿಂಗೇಶ್ವರ ನಗರದ ಪಿಎಚ್‌ಸಿಯ ಎಂಒ ಅವರಿಗೂ ಸಹ ಬಾಣತಿಕಟ್ಟಾ ಪಿಎಚ್‌ಸಿ, ಎಬಿಡಿಸಿಟಿ ಇದ್ದಾಗ ಅಂಗನವಾಡಿಗಳ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಶಿರಗುಪ್ಪಿ, ನೂಲ್ವಿ, ಬ್ಯಾಹಟ್ಟಿ ಗ್ರಾಮಸ್ಥರು ಹಾಗೂ ಬಾಣತಿಕಟ್ಟಾ ಪಿಎಚ್‌ಸಿ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಪಿಎಚ್‌ಸಿಗಳಲ್ಲಿ ಎಂಒಗಳು ವಾರಕ್ಕೊಮ್ಮೆ ವೀಕ್ಷಣೆ ಮಾಡುತ್ತಿರುವುದರಿಂದ ಜನರು ಆರೋಗ್ಯ ಸೇವೆ ಪಡೆಯಲು ವಾರಗಟ್ಟಲೇ ಕಾಯಬೇಕಾಗಿದೆ. ಅದರಲ್ಲೂ ಅಪಘಾತಗಳು ಸಂಭವಿಸಿದಾಗ ಮೆಡಿಕಲ್‌ ಲೀಗಲ್‌ ಕೇಸ್‌ (ಎಂಎಲ್‌ಸಿ) ಹಾಗೂ ಮರಣೋತ್ತರ ಪರೀಕ್ಷೆ (ಪಿಎಂ) ಮಾಡಿಸಿಕೊಳ್ಳಬೇಕೆಂದರೆ ವೈದ್ಯಕೀಯ ಅಧಿಕಾರಿಗಾಗಿ ಜನರು ಕಾಯುತ್ತ ಕೂಡ್ರಬೇಕಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಅವೈಜ್ಞಾನಿಕ ನಿಯೋಜನೆ: ಕೆಮ್ಮು, ನೆಗಡಿ, ಜ್ವರ, ಗರ್ಭಿಣಿಯರು ಸೇರಿದಂತೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಯಿದ್ದರೆ ಖರ್ಚು ಮಾಡಿಕೊಂಡು ನಗರಕ್ಕೆ ಬರುವಂತಾಗಿದೆ. ವೈದ್ಯರ ಕೊರತೆಯಿಂದ ಪಿಎಚ್‌ ಸಿಗಳನ್ನು ನಿರ್ವಹಣೆ ಮಾಡಲು ಎಂಒಗಳಿಗೆ ಹೆಚ್ಚಿನ ಜವಾಬ್ದಾರಿ ಕೊಡುವುದಾದರೂ ಅಕ್ಕ-ಪಕ್ಕದ ಪಿಎಚ್‌ ಸಿಗಳಿಗೆ ಅವರನ್ನು ನಿಯೋಜಿಸಿದರೆ ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ. ಆದರೆ ದೂರದ ಪ್ರದೇಶಗಳಿಗೆ ಅವರನ್ನು ನಿಯೋಜನೆ ಮಾಡುವುದರಿಂದ ಸರಿಯಾಗಿ ಆರೋಗ್ಯ ಸೇವೆ ಸಿಗದೆ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ವೈದ್ಯಕೀಯ ಅಧಿಕಾರಿಗಳ ಹುದ್ದೆ ಖಾಲಿ: ಹುಬ್ಬಳ್ಳಿ ತಾಲೂಕು ವ್ಯಾಪ್ತಿಯ ನಗರ ಪ್ರದೇಶ ಭಾಗದಲ್ಲಿ 13 ಹಾಗೂ ಗ್ರಾಮೀಣ ಭಾಗದಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ನಗರ ಪ್ರದೇಶದ 5 ಪಿಎಚ್‌ ಸಿಗಳು ಪಾಲಿಕೆ ಒಡೆತನದಲ್ಲಿ ಬರುತ್ತವೆ. ಅವುಗಳಲ್ಲಿ ಗ್ರಾಮೀಣ ಭಾಗದ ನೂಲ್ವಿ, ಬ್ಯಾಹಟ್ಟಿ, ಅರಳಿಕಟ್ಟಿ ಗ್ರಾಮ ಹಾಗೂ ನಗರ ಪ್ರದೇಶದ ಹಳೇಹುಬ್ಬಳ್ಳಿಯ ಹೆಗ್ಗೇರಿ, ಅಯೋಧ್ಯಾನಗರ ಪಿಎಚ್‌ಸಿಗಳಲ್ಲಿ ವೈದ್ಯಕೀಯ ಅಧಿಕಾರಿಗಳ ಹುದ್ದೆ ಖಾಲಿ ಇವೆ. ಇವುಗಳಿಗೆ ಪ್ರಭಾರಿಯಾಗಿ ಎಎಂಒಗಳನ್ನು ನಿಯೋಜಿಸಿ, ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಈ ಪಿಎಚ್‌ಸಿಗಳಲ್ಲಿ ನೋಂದಾಯಿತ ವೈದ್ಯರಿಲ್ಲ. ಆಯುಷ್‌ ಇಲಾಖೆಯ ಬಿಎಂಎಸ್‌ ವೈದ್ಯರಿದ್ದು, ಅವರು ಶಸ್ತ್ರಚಿಕಿತ್ಸೆ, ಎಂಎಲ್‌ಸಿ ಮತ್ತು ಪಿಎಂ ಮಾಡುವುದಿಲ್ಲ.

ಕೆಲಸಕ್ಕೆ ತಕ್ಕಂತೆ ವೈದ್ಯರಿಲ್ಲ: ಪಿಎಚ್‌ಸಿಗಳಲ್ಲಿ ಸಾಮಾನ್ಯ ತಪಾಸಣೆ, ಆರೋಗ್ಯ ತಪಾಸಣೆ, ಔಷಧಿ, ಗರ್ಭಿಣಿ, ಬಾಣಂತಿ, ಕುಟುಂಬ ಯೋಜನೆ, ಕಾಪರ್ಟಿ, ಸಂತಾನಶಕ್ತಿ ಹರಣ ಚಿಕಿತ್ಸೆ, ಟಿಬಿ, ಲ್ಯಾಪ್ರೋಸಿ, ಟೊಬ್ಯಾಕ್ಟೊ, ಕೋವಿಡ್‌-19 ವ್ಯಾಕ್ಸಿನೇಷನ್‌, ಪೋಲಿಯೋ, ಸಲೈನ್‌ ಹಚ್ಚುವುದು ಸೇರಿದಂತೆ 48 ಸೇವೆಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ಇಲಾಖೆಯು ವೈದ್ಯರ ನೇಮಕಾತಿ ಮಾಡಿಕೊಂಡರೆ ಈಗಿರುವ ಎಲ್ಲ ಸಮಸ್ಯೆ ಪರಿಹಾರವಾಗಲಿದೆ.

Advertisement

ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಆರೋಗ್ಯ ರಕ್ಷಣೆಯ ಕೇಂದ್ರಗಳಾಗಿವೆ. ಆದರೆ ಪಿಎಚ್‌ಸಿಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಪಿಎಂ, ಎಂಎಲ್‌ ಸಿಗಾಗಿ ದಿನಗಟ್ಟಲೇ ಕಾಯಬೇಕು. ಒಂದು ಪಿಎಚ್‌ಸಿಗೆ ಒಬ್ಬರು ವೈದ್ಯರನ್ನು ಕಡ್ಡಾಯವಾಗಿ ನೇಮಿಸಬೇಕು. ಪಿಎಚ್‌ಸಿಗಳಲ್ಲಿ ಹೃದಯ ತಪಾಸಣೆಗಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಿ ನುರಿತ ವೈದ್ಯರನ್ನು ನೇಮಿಸಬೇಕು. -ಜಗನ್ನಾಥಗೌಡ ಸಿದ್ದನಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ

ಧಾರವಾಡ ಜಿಲ್ಲೆಯಲ್ಲಿ 48 ಎಂಬಿಬಿಎಸ್‌ ಹಾಗೂ 39 ತಜ್ಞವೈದ್ಯರ ಹುದ್ದೆಗಳಿದ್ದು, ಕೆಲವು ವೈದ್ಯರು ಬಡ್ತಿ ಹೊಂದಿದ್ದರಿಂದ ಹಾಗೂ ವರ್ಗಾವಣೆಗೊಂಡಿದ್ದರಿಂದ 9 ಎಂಬಿಬಿಎಸ್‌ ವೈದ್ಯರು ಹಾಗೂ 11 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಜನರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲ ಪಿಎಚ್‌ಸಿಗಳಿಗೆ ವೈದ್ಯಕೀಯ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. –ಡಾ| ಬಸನಗೌಡ ಕರಿಗೌಡರ, ಜಿಲ್ಲಾ ಆರೋಗ್ಯಾಧಿಕಾರಿ

ವೈದ್ಯರ ಕೊರತೆಯಿಂದಾಗಿ ಗ್ರಾಮದ ಕೆಲವು ಪಿಎಚ್‌ಸಿಗಳಲ್ಲಿ ಆಯುಷ್‌ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಿಎಚ್‌ಸಿಗಳಲ್ಲಿ ವೈದ್ಯಕೀಯ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಆಡಳಿತ ವೈದ್ಯಕೀಯ ಅಧಿಕಾರಿಗಳೆಂದು ಚಾರ್ಜ್‌ ನೀಡಲಾಗಿದೆ. ಸರಕಾರಕ್ಕೆ ಪಿಎಚ್‌ಸಿಗಳಿಗೆ ಕಾಯ ವೈದ್ಯಕೀಯ ಅಧಿಕಾರಿಗಳನ್ನು ನೇಮಿಸುವಂತೆ ಪತ್ರ ಬರೆಯಲಾಗಿದೆ. –ಡಾ| ರಂಗನಾಥ ಹಿತ್ತಲಮನಿ, ತಾಲೂಕು ಆರೋಗ್ಯಾಧಿಕಾರಿ

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next