ಬೆಂಗಳೂರು: ರಾಣೆಬೆನ್ನೂರಿನಿಂದ ನಗರದ ಕೆಂಗೇರಿ ಬಸ್ ನಿಲ್ದಾಣದಲ್ಲಿ ಎರಡು ತಿಂಗಳ ಮಗು ಮತ್ತು ಕೈಚೀಲದೊಂದಿಗೆ ಬಾಣಂತಿ ಮತ್ತು ಆಕೆಯ ತಾಯಿ ಬಂದಿಳಿದಾಗ ರಾತ್ರಿ 8 ಗಂಟೆ ಆಗಿತ್ತು. ಆಕೆ ಹೋಗಬೇಕಾದ್ದು ಮಂಡ್ಯಕ್ಕೆ. ಆದರೆ, ಬಸ್ ಸಂಚಾರ 7 ಗಂಟೆಗೇ ಸ್ಥಗಿತಗೊಂಡಿತ್ತು. ವಿಶ್ರಾಂತಿ ಕೊಠಡಿಯಲ್ಲಿ ತಂಗುವುದು ಅಪಾಯಕ್ಕೆ ಆಹ್ವಾನ ನೀಡಿದಂತಿತ್ತು. ಈ ಸಂದಿಗಟಛಿ ಸ್ಥಿತಿಯಲ್ಲಿ ಊಟದ ಜತೆಗೆ ಆಶ್ರಯ ಕೊಟ್ಟಿದ್ದು ಬಿಎಂಟಿಸಿಯ ಒಬ್ಬ ಮೆಕ್ಯಾನಿಕ್. ಕೊರೊನಾ ವೈರಸ್ ಸೋಂಕು ಭೀತಿಯಿಂದ ಸಂಬಂಧಿಕರೂ ಈಗ ಊರಿಂದ ಬಂದವರನ್ನು ಮನೆಗೆ ಸೇರಿಸಿಕೊಳ್ಳಲು ಒಂದು ಕ್ಷಣ ಆಲೋಚಿಸುವ ಸ್ಥಿತಿ ಇದೆ.
ಆದರೆ, ಕೆಂಗೇರಿ ನಿವಾಸಿ ನಿಂಗಪ್ಪ, ಕೇಳುವವರಿಲ್ಲದೆ ಕಂಗಾಲಾಗಿದ್ದ ಮಗು, ಬಾಣಂತಿ ಮತ್ತು ಆಕೆಯ ತಾಯಿಯನ್ನು ಮನೆಗೆ ಕರೆದೊಯ್ದು ಆಶ್ರಯ ನೀಡಿದರು. ಅಷ್ಟೇ ಅಲ್ಲ, ರಾತ್ರಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಮನಮಿಡಿಯುವ ಘಟನೆ ಇಡೀ ಬಿಎಂಟಿಸಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸ್ವತಃ ಮುಖ್ಯ ತಾಂತ್ರಿಕ ಎಂಜಿನಿಯರ್ (ಸಿಎಂಇ) ಮೆಕ್ಯಾನಿಕ್ ನಿಂಗಪ್ಪ ಅವರಿದ್ದಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಇದು ಹೆಚ್ಚು ಜನರ ಗಮನಸೆಳೆದಿದೆ.
ಆಗಿದ್ದಿಷ್ಟು: ಕೆಂಗೇರಿ ಬಸ್ ನಿಲ್ದಾಣಕ್ಕೆ ರಾತ್ರಿ ಮೆಜೆಸ್ಟಿಕ್ ಕಡೆಯಿಂದ ರಾತ್ರಿ 8ರ ಸುಮಾರಿಗೆ ಬಸ್ ವೊಂದು ಬಂತು. ಅದರಿಂದ ಮಗು, ಬಾಣಂತಿ ಮತ್ತು 65 ವರ್ಷದ ಆಕೆಯ ತಾಯಿ ಬಸ್‌ನಿಂದ ಬಂದಿಳಿದರು. ನೇರವಾಗಿ ಸಂಚಾರ ನಿಯಂತ್ರಕರ ಕಡೆಗೆ ತೆರಳಿ, ಮಂಡ್ಯ ಬಸ್ ಬಗ್ಗೆ ವಿಚಾರಿಸಿದ್ದಾರೆ. ಆಗ, ಯಾವುದೇ ಬಸ್ ಇರಲಿಲ್ಲ. ತಕ್ಷಣ ಮೈಸೂರು ಮುಖ್ಯರಸ್ತೆಯಲ್ಲಿ ಯಾವುದಾದರೂ ಬಸ್ ಇದ್ದರೆ ನಿಲ್ಲಿಸಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರು. ಆದರೆ, ಪ್ರಯೋಜನ ಆಗಲಿಲ್ಲ.
ಮೆಜೆಸ್ಟಿಕ್‌ನಲ್ಲಿಯ ಸಂಚಾರ ನಿಯಂತ್ರಣಾ ಕೊಠಡಿಗೂ ಕರೆ ಮಾಡಿ, ವಿಚಾರಿಸಿದಾಗ ಅಲ್ಲಿಂದ ಮೈಸೂರಿಗೆ 6.30ಕ್ಕೇ ಕೊನೆಯ ಬಸ್ ನಿರ್ಗಮಿಸಿತ್ತು. ಬಂದಿಳಿದವರಿಗೆ ಸಂಬಂಧಿಕರು ಕೂಡ ಯಾರೂ ಇರಲಿಲ್ಲ. ಈ ವೇಳೆ ನಿರ್ಭಯ ವಿಶ್ರಾಂತಿ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಯೋಜಿಸಲಾಗಿತ್ತು. ಆದರೆ, “ಸಾರ್ವಜನಿಕರು ಬೆಳಿಗ್ಗೆಯಿಂದ ತುಂಬಾ ಜನ ಬಂದು ಹೋಗಿರುತ್ತಾರೆ.
ಇದು ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ರಿಸ್ಕ್ ಬೇಡ’ ಎಂಬ ಅಭಿಪ್ರಾಯ ಸಿಬ್ಬಂದಿಯಿಂದ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನೆನಪಾದವರೇ ನಿಂಗಪ್ಪ. ಕೆಂಗೇರಿಯಲ್ಲಿ ನಿಂಗಪ್ಪ ಅವರ ಮನೆ ಇರುವುದರಿಂದ ಕರೆ ಮಾಡಿ ವಿಚಾರಿಸಲಾಯಿತು. ಒಂದು ಕ್ಷಣವೂ ಯೋಚಿಸದೆ, ಊಟದ ಜತೆ ತಂಗುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಜತೆಗೆ ಅದೇ ಘಟಕದ ಸಿಬ್ಬಂದಿ ಮಗು, ಬಾಣಂತಿ ಮತ್ತು ಆಕೆಯ ತಾಯಿಯನ್ನು ವೈದ್ಯಕೀಯ ತಪಾಸಣೆ ಮಾಡಿಸಿ, ಊರಿಗೆ ಕಳುಹಿಸಿಕೊಟ್ಟರು.
ಘಟನೆ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಕೆಂಗೇರಿ ಘಟಕ ವ್ಯವಸ್ಥಾಪಕ ಜಿ.ಎನ್. ಪ್ರದೀಪ್ ಕುಮಾರ್, “ಸಂಬಂಧಿಕರು ಮತ್ತು ಸ್ನೇಹಿತರೇ ಮನೆಗೆ ಸೇರಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಾರೆ. ಆದರೆ, ಮೆಕ್ಯಾನಿಕ್ ನಿಂಗಪ್ಪ ಅಪರಿಚಿತ ಪ್ರಯಾಣಿಕರೊಬ್ಬರಿಗೆ ಆಶ್ರಯ ನೀಡಿದ್ದು ಮೆಚ್ಚುಗೆ ತರುವ ಸಂಗತಿಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.